ಟಾಪ್ ನ್ಯೂಸ್ ಕರಾವಳಿ
ಮಂಗಳೂರು: 15.5 ಕೆಜಿ ಡ್ರಗ್ಸ್, 12,843 ಲೀಟರ್ ಮದ್ಯ ವಶಕ್ಕೆ,!
– ಹೆಬ್ರಿ : ಅಣ್ಣ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯ
-ಕಾಪು : ಮಹಿಳಾ ಕಾನ್ಸ್ಟೇಬಲ್ ಆತ್ಮಹತ್ಯೆ
– ಬಂಟ್ವಾಳ: 6 ದಿನಗಳ ಹಿಂದೆ ಕಾಣೆಯಾಗಿದ್ದ ಸರಕಾರಿ ಅಧಿಕಾರಿ ಶವವಾಗಿ ಪತ್ತೆ!
– ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು
– ಕಡಬ : ಜಾನುವಾರು ಸಾಗಾಟದ ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ದಾರುಣ ಸಾವು
NAMMUR EXPRESS NEWS
ಮಂಗಳೂರು : 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 31 ರವರೆಗೆ ಜಿಲ್ಲೆಯಲ್ಲಿ 41,90,025 ರೂ. ಮೌಲ್ಯದ 12,843 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 8,69,950 ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ ಒಟ್ಟು 239 ಎಫ್ ಐ ಆರ್ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
– ಹೆಬ್ರಿ : ಅಣ್ಣ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯ
ಹೆಬ್ರಿ: ಅಣ್ಣ ತಮ್ಮ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಕೊಲೆಯಲ್ಲಿ ಅಂತ್ಯವಾದ ಘಟನೆ ಹೆಬ್ರಿ ತಾಲೂಕು ನಾಲ್ಕೂರು ಗ್ರಾಮದ ಅರಮನೆಜಡ್ಡು ಎಂಬಲ್ಲಿ ರಾತ್ರಿ ನಡೆದಿದೆ. ಮೃತರನ್ನು ಮಂಜುನಾಥ್ (35) ಎಂದು ಗುರುತಿಸಲಾಗಿದೆ. ಮಂಜುನಾಥ ಮತ್ತು ವಿಶ್ವನಾಥ ರವರು ಆಗಾಗ ಗಲಾಟೆ ಮಾಡುತ್ತಿದ್ದರು. ಮಂಜುನಾಥನು, ವಿಶ್ವನಾಥನ ಬಳಿ ನನ್ನ ಹೆಂಡತಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಹೇಳಿದಾಗ, ವಿಶ್ವನಾಥ ಕೋಪಗೊಂಡು ದೊಣ್ಣೆಯಿಂದ ಹೊಡೆದಾಗ ಮಂಜುನಾಥ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮಹಿಳಾ ಕಾನ್ಸ್ಟೇಬಲ್ ಆತ್ಮಹತ್ಯೆ
ಕಾಪು : ಮಹಿಳಾ ಕಾನ್ಸ್ಟೇಬಲ್ ಒಬ್ಬರು ಪೊಲೀಸ್ ಕ್ವಾಟ್ರಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪುವಿನಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಜ್ಯೋತಿ (29) ಆತ್ಮಹತ್ಯೆಗೆ ಶರಣಾದ ಕಾನ್ಸ್ಟೇಬಲ್ ಎಂದು ತಿಳಿದುಬಂದಿದೆ. ಅವರು ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಡಾ.ಅರುಣ್ ಅವರು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
– 6 ದಿನಗಳ ಹಿಂದೆ ಕಾಣೆಯಾಗಿದ್ದ ಸರಕಾರಿ ಅಧಿಕಾರಿ ಶವವಾಗಿ ಪತ್ತೆ!
ಬಂಟ್ವಾಳ: ಕಳೆದ ಆರು ದಿನಗಳ ಹಿಂದೆ ಕಾಣೆಯಾಗಿದ್ದ ಸರಕಾರಿ ಆದಿಕಾರಿಯೋರ್ವನ ಮೃತದೇಹ ಸಂಜೆ ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ. ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ಅಧಿಕಾರಿ ಲಕ್ಮೀನಾರಾಯಣ ಅವರು ಕರ್ತವ್ಯಕ್ಕೆ ಹಾಜರಾಗದೆ ಮನೆಗೂ ತೆರಳದೆ ಕಾಣೆಯಾಗಿರುವ ಬಗ್ಗೆ ಮಾ.27. ರಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಇವರು ಮಾ.27 ರಂದು ಮಧ್ಯಾಹ್ನದ ಬಳಿಕ ಕಚೇರಿಯಿಂದ ತೆರಳಿದವರು ಪೋನ್ ಸ್ವಿಚ್ ಆಪ್ ಆಗಿತ್ತು. ಮನೆಗೂ ಹೋಗದೆ ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದಾರೆ ಎಂದು ಈತನ ತಮ್ಮ ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದರು.
ಚುನಾವಣೆಗೆ ಸಂಬಂಧಿಸಿದ ಎಸ್.ಎಸ್.ಟಿ.ತಂಡದಲ್ಲಿ ಇವರು ಕರ್ತವ್ಯ ನಿರ್ವಹಿಸಿತ್ತಿದ್ದು, ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಂಡದವರು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಕಳೆದ ಕೆಲ ಸಮಯಗಳ ಹಿಂದೆ ಕೂಡ ಇದೇ ರೀತಿ ಕಾಣೆಯಾಗಿದ್ದ ಲಕ್ಮೀನಾರಾಯಣ ಅವರನ್ನು ಪೋಲೀಸರು ಪತ್ತೆ ಹಚ್ಚಿದ್ದರು. ಇವರ ಬೈಕ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ಣು, ಲಕ್ಮೀನಾರಾಯಣ ಅವರಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದರು. ನಿನ್ನೆ ಪೋಲೀಸರಿಗೆ ಪಟ್ರಮೆ ಸಮೀಪ ಮೊಬೈಲ್ ಲೋಕೇಸನ್ ಕಂಡು ಬಂದಿದ್ದು ಪೋಲೀಸರು ಹುಡುಕಾಡಿದ್ದರು. ಆದರೆ ಇಂದು ಈತನ ಮೃತದೇಹವನ್ನು ಸ್ಥಳೀಯ ಶೌರ್ಯ ತಂಡದವರು ನದಿಯಿಂದ ಮೇಲಕ್ಕೆತ್ತಿದ್ದಾರೆ.
– ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ಪೊಯಿತಾಜೆ ಎಂಬಲ್ಲಿ ನಡೆದಿದೆ. ನರಿಕೊಂಬು ಗ್ರಾಮದ ಬೀರಕೋಡಿ ನಿವಾಸಿ ಯೋಗೀಶ್ ಪೂಜಾರಿ ಅವರ ಪುತ್ರ ಆನುಶ್ (20) ಮೃತಪಟ್ಟ ಯುವಕ. ಆದಿತ್ಯವಾರ ರಜಾದಿನವಾದ ಕಾರಣ ಅನುಶ್ ಸೇರಿ ಒಟ್ಟು 4 ಮಂದಿ ತಮ್ಮ ಮತ್ತು ಸ್ನೇಹಿತರ ಜೊತೆಯಲ್ಲಿ ನದಿಗೆ ಈಜಲು ತೆರಳಿದ್ದರು. ತಮ್ಮ ರೂಪೇಶ್ ಸ್ನೇಹಿತರಾದ ಕಿಸಾನ್ , ಅನೀಶ್ ಜೊತೆಯಲ್ಲಿ ತೆರಳಿದ್ದ. ಅನುಶ್ ಅಳ್ವಾಸ್ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ಜಾನುವಾರು ಸಾಗಾಟದ ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ದಾರುಣ ಸಾವು
ಕಡಬ : ಕಾರು ಡಿಕ್ಕಿಯಾಗಿ ರಸ್ತೆ ಬದಿ ನಿಂತಿದ್ದ ಪಾದಚಾರಿ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಕಡಬ ತಾಲೂಕಿನ ಮರ್ಧಾಳ ಪೇಟೆಯಲ್ಲಿ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ವಿಠಲ ರೈ (75) ಎಂದು ಹೆಸರಿಸಲಾಗಿದೆ. ಇವರು ಮರ್ಧಾಳ ಪೇಟೆಯಲ್ಲಿ ಮಾರ್ಗದ ಬದಿ ನಿಂತಿದ್ದ ವೇಳೆ ಏಕಾಏಕಿ ಧಾವಿಸಿ ಬಂದ ಮಾರುತಿ 800 ಕಾರನ್ನು ಅದರ ಚಾಲಕ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ವಿಠಲ ರೈ ಅವರನ್ನು ತಕ್ಷಣ ಸ್ಥಳೀಯರು ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಆರೋಪಿಗಳು ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದು, ಉದ್ದೇಶಪೂರ್ವಕವಾಗಿ ವಿಠಲ ರೈ ಅವರಿಗೆ ಡಿಕ್ಕಿ ಹೊಡೆಸಿ ಅಪಘಾತ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮೃತರ ಸಂಬಂಧಿ ಸುಳ್ಯ-ಉಬರಡ್ಕ ನಿವಾಸಿ ಸುಧಾಕರ ರೈ ಎಸ್ ಅವರು ನೀಡಿದ ದೂರಿನಂತೆ ಕಡಬ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 45/2024 ಕಲಂ 302 ಜೊತೆಗೆ 34 ಐಪಿಸಿ ಮತ್ತು ಕಲಂ 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.