ಹಣ ಡಬಲ್ ಮಾಡಿ ಕೊಡುವುದಾಗಿ ಮೋಸ!
– ಉಡುಪಿ ಸೇರಿ ಕರಾವಳಿಯಲ್ಲಿ ಹೆಚ್ಚಾದ ವಂಚನೆ
– ಕಾಸರಗೋಡು: ದೋಣಿಯಿಂದ ನದಿಗೆ ಬಿದ್ದು ಸಾವು
– ಕುಂದಾಪುರ: ಸಾಲಬಾಧೆಯಿಂದ ವ್ಯಕ್ತಿಆತ್ಮಹತ್ಯೆ
– ಉಪ್ಪಿನಂಗಡಿ: ಮಹಿಳೆ ಜೊತೆ ಅಸಭ್ಯ ವರ್ತನೆ: ಕೇಸ್ !
– ಕುಂದಾಪುರ: ಅಡ ಇಟ್ಟ ಜಾಗ ಮಾರಿದ ಕಿಲಾಡಿಗಳು!
– ಮಂಗಳೂರು: ಉದ್ಯೋಗದ ಭರವಸೆ ಲಕ್ಷ ವಂಚನೆ
NAMMUR EXPRESS NEWS
ಉಡುಪಿ: ಹಣ ದ್ವಿಗುಣ ಗೊಳಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದೆ
ಮಹಾಬಲೇಶ್ವರ ಮಾರಣಕಟ್ಟೆ ಅವರ ಮೊಬೈಲ್ಗೆ ಜು.1ರಂದು ಯಾರೋ ಅಪರಿಚಿತ ವ್ಯಕ್ತಿ ವಾಟ್ಸಾಪ್ ಸಂದೇಶ ಕಳುಹಿಸಿದ್ದು, ಆ ಸಂದೇಶದಲ್ಲಿ ಆತನು ಕಳುಹಿಸಿರುವ ಲಿಂಕ್ ಮೂಲಕ ಟ್ರೆಡಿಂಗ್ ವ್ಯವಹಾರ ನಡೆಸಿದರೆ ಹೂಡಿದ ಹಣವನ್ನು ದ್ವಿಗುಣಗೊಳಿಸಿ ನೀಡುವುದಾಗಿ ನಂಬಿಸಿದ್ದನು. ಅದರಂತೆ ಆ ವ್ಯಕ್ತಿ ಮಹಾಬಲೇಶ್ವರ ಮಾರಣಕಟ್ಟೆಯನ್ನು ನಂಬಿಸಿ ಯಾವುದೋ ಒಂದು ಶಾಖೆಯ ಖಾತೆ ಸಂಖ್ಯೆಯನ್ನು ನೀಡಿದ್ದು ಆ ಖಾತೆಗೆ ಮಹಾಬಲೇಶ್ವರ ಮಾರಣಕಟ್ಟೆ ಅವರು ಜು. 21ರಂದು 90,000 ರೂ.ಗಳನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದರು. ಆದರೆ ಆರೋಪಿ ಹಣಕ್ಕೆ ಲಾಭಾಂಶ ನೀಡದೇ, ಹೂಡಿದ ಹಣವನ್ನು ಹಿಂದಿರುಗಿಸದೇ ನಷ್ಟ ಉಂಟು ಮಾಡಿರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ
ದೋಣಿಯಿಂದ ನದಿಗೆ ಬಿದ್ದು ಸಾವು: ಕೊಲೆ ಶಂಕೆ!?
ಕಾಸರಗೋಡು: ದೋಣಿಯಿಂದ ನದಿಗೆ ಬಿದ್ದು ಉದ್ಯೋಗಿಯೋರ್ವರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಬಳಿಕ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಕಾಸರಗೋಡಿನ ಚಂದ್ರಗಿರಿ ನದಿಯ ಚೇರೂರು ಎಂಬಲ್ಲಿ ನಡೆದಿದೆ. ವಿದ್ಯಾನಗರ ಪಾಣಲಂನ ಅಬ್ದುಲ್ ಮಜೀದ್ (54) ಮೃತ ದುರ್ದೈವಿ. ಮಜೀದ್ ಅವರು ಅ. 26 ರ ತಡರಾತ್ರಿ ಸ್ನೇಹಿತರ ಜೊತೆ ನದಿಯಲ್ಲಿ ದೋಣಿಯಲ್ಲಿ ತೆರಳುತ್ತಿದ್ದಾಗ ನದಿ ಪಾಲಾಗಿದ್ದು, ಬಳಿಕ ಸ್ನೇಹಿತರು ದಡಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮಜೀದ್ ಅವರಿಗಾಗಿ ಶೋಧ ನಡೆಸಿದ್ದರು. ಇದೀಗ ಮಜೀದ್ ಅವರ ಮೃತ ಅವರ ಮೃತ ದೇಹ ಮೇಲಕ್ಕೆತ್ತಲಾಗಿದ್ದು, ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಉಂಟಾದ ಸಂಶಯದ ಹಿನ್ನಲೆ ಮಜೀದ್ ಸ್ನೇಹಿತರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣು
ಕುಂದಾಪುರ: ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ, ದೈನಂದಿನ ಕೆಲಸಕಾರ್ಯಗಳನ್ನು ನಿರ್ವಹಿಸಲಾಗದೆ, ಈ ಕಾರಣದಿಂದ, ಗೃಹನಿರ್ಮಾಣಕ್ಕಾಗಿ ಮಾಡಿದ್ದ ಸಾಲವನ್ನೂ ತೀರಿಸಲಾಗದೆ ಹತಾಶೆಗೊಂಡ ವ್ಯಕ್ತಿಯೋವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಸಮೀಪದ ವಂಚ್ಚೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ದುರ್ದೈವಿ ವಂಡ್ರೆಯ ಸತೀಷ (43) ಎಂದು ತಿಳಿದು ಬಂದಿದೆ.ಇವರು ಸಮೀಪದ ಬಾಳಿಕೇರಿ ಎಂಬಲ್ಲಿ ನೂತನ ಮನೆಕಟ್ಟಿಸಿದ್ದರು. ಇದಕ್ಕಾಗಿ ಖಾಸಗಿ ಸಂಸ್ಥೆಗಳಲ್ಲಿ ಸಾಲ ಮಾಡಿದ್ದರು. ಈ ನಡುವೆ ಅಪಘಾತಾಕ್ಕೊಳಗಾಗಿ ಕಾಲಿಗೆ ಪೆಟ್ಟಾದ್ದರಿಂದ ಕೆಲಸಕ್ಕೂ ಹೋಗದ ಪರಿಸ್ಥಿತಿ ಬಂದಿತು. ತನಗಾದ ಅಪಘಾತ, ಮನೆಯ ವಿಷಮ ಪರಿಸ್ಥಿತಿ, ಬೆಳೆಯುವ ಸಾಲದ ಕಂತು ಇವೆಲ್ಲವುಗಳಿಂದ ಕಂಗೆಟ್ಟು ಸತೀಷ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಅಡ ಇಟ್ಟ ಜಾಗವನ್ನು ಮಾರಿದ ಕಿಲಾಡಿಗಳು!
ಕುಂದಾಪುರ : 23 ಲಕ್ಷ ರೂಪಾಯಿ ಸಾಲಕ್ಕೆ ಅಡವಿಟ್ಟ ಭೂಮಿಯನ್ನು ಸಾಲ ತೀರಿಸದೇ ನಕಲಿ ಸಹಿ ಹಾಗೂ ಸೀಲುಗಳನ್ನು ಬಳಸಿ ಬೇರೆಯವರಿಗೆ ಮಾರಾಟ ಮಾಡಿದ ಖತರ್ನಾಕ್ ಪ್ರಕರಣವೊಂದು ಕುಂದಾಪುರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಸೊಸೈಟಿಯವರು ದೂರು ದಾಖಲಿಸಿದ್ದಾರೆ. 6 ಮಾರ್ಚ್ 2020ರಂದು ಕುಂದಾಪುರ ತಾಲೂಕು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ.ಲಿ ಸಂಸ್ಥೆಯ ಪಡುಕೋಣೆ ಶಾಖೆಯಲ್ಲಿ ಶ್ರೀ ರಾಮ ಎಂಬುವರು ತಮ್ಮ ಹೆಸರಿನ ಜಾಗವನ್ನು ಅಡಮಾನವಾಗಿಸಿ 12 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಸಂಜೀವ, ಗುರುಪ್ರಸಾದ್, ಕಿರಣ್ ಹಾಗೂ ರಾಘವೇಂದ್ರ ಎಂಬುವರು ಜಾಮೀನು ನೀಡಿದ್ದರು. ಬಳಿಕ ಅದೇ ಅಡಮಾನದ ಆಧಾರದ ಮೇಲೆ ಹಾಗೂ ಜಾಮೀನಿನ ಮೇಲೆ ಅದೇ ಸೊಸೈಟಿಯಿಂದ 11.60 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆನ್ನಲಾಗಿದೆ.
ಸಾಲ ಪಡೆದ ಶ್ರೀರಾಮ ಎಂಬಾತ ಉಳಿದ ಆರೋಪಿಗಳಾದ ರಾಮಕೃಷ್ಣ, ರತ್ನಾಕರ, ಜಗನ್ನಾಥ, ಹಾಗೂ ಗಿರೀಶ ಎಂಬುವರ ಜೊತೆ ಸೇರಿ ಸಾಲ ಪಡೆದುಕೊಂಡಿರುವ ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಕಲಿ ಸೀಲ್ ತಯಾರಿಸಿ ಸಾಲ ಸಂಪೂರ್ಣ ಪಾವತಿಯಾಗಿದೆ. ಎಂದು ತೋರಿಸುವ, 6 ಫೆಬ್ರವರಿ 2020ರ ನಕಲಿ ಚುಕ್ತಾ ರಶೀದಿಯನ್ನು ತಯಾರಿಸಿ ಕುಂದಾಪುರ ಉಪನೋಂದಣಾಧಿಕಾರಿ ಕಛೇರಿಯಲ್ಲಿ ನೊಂದಾಯಿಸಿ ಜಾಗವನ್ನು ನಾಗರಾಜ ರವರಿಗೆ ಕ್ರಯಪತ್ರ ಮಾಡಿ, ಕ್ರಯಪತ್ರವನ್ನು ಕುಂದಾಪುರ ಉಪನೋಂದಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಮಾಡಿದ್ದಲ್ಲದೇ ಕ್ರಯಪತ್ರದ ಆಧಾರದ ಮೇಲೆ ಕುಂದಾಪುರ ಸ್ಟೇಟ್ ಬ್ಯಾಂಕಿನಲ್ಲಿ ಸಾಲ ಮಾಡಿ ಕ್ರಯಪತ್ರವನ್ನು ಅಡವಿಟ್ಟು ಮೋಸ ಎಂದು ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕಿ ಮೇಬಲ್ ಡಿ ಅಡಾ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಸಿದ್ದಾರೆ
ಉದ್ಯೋಗದ ಭರವಸೆ ನೀಡಿ ಲಕ್ಷಾಂತರ ರೂ. ವಂಚನೆ
ಅರೆಕಾಲಿಕ ಉದ್ಯೋಗ ಒದಗಿಸುವ ‘ಟ್ಯೂನ್ ಕಂಪನಿಯ ಎಜೆಂಟ್ ಎಂದು ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿದ್ದರು. ಅರೆಕಾಲಿಕ ಉದ್ಯೋಗ ನಿರ್ವಹಿಸುವ ವೆಬ್ ಸೈಟ್ ಕೊಂಡಿಯನ್ನು ಟೆಲಿಗ್ರಾಮ್ ಖಾತೆ ಮೂಲಕ ಕಳುಹಿಸಿದ್ದರು.
ಟ್ಯೂನ್ ಕಂಪನಿಯ ಉತ್ಪನ್ನಗಳಿಗೆ ರೇಟಿಂಗ್ಸ್ ನೀಡಿದರೆ ಕಮಿಷನ್ ಮತ್ತು ಬೊನಸ್ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಕೆಲಸ ಆರಂಭಿಸಲು ಮೂಲ ದರ ತೆರಬೇಕೆಂದು ಸೂಚಿಸಿದ್ದರು. ಹಂತಹಂತವಾಗಿ ಅ.18ರಿಂದ 26ರ ನಡುವೆ ಒಟ್ಟು 6.5 ಲಕ್ಷ ಕಟ್ಟಿಸಿಕೊಂಡು ಹಣ ಮರಳಿಸದೇ ವಂಚಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಮಹಿಳೆ ಜೊತೆ ಅಸಭ್ಯ ವರ್ತನೆ, ದೂರು ದಾಖಲು!
ಉಪ್ಪಿನಂಗಡಿ : ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿ ಬಳಿ ನಡೆದಿದೆ. ಮಹಿಳೆಯೋರ್ವರು ತಮ್ಮ ಪತಿಯೊಂದಿಗೆ ಪುತ್ತೂರು ಬಜತ್ತೂರು ಮಣಿಕ್ಕಲ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಸುರೇಶ, ಉಮೇಶ ಗಿರೀಶ ಹಾಗೂ ಇನ್ನೋರ್ವ ಬಂದು ಮಹಿಳೆಗೆ ಅವ್ಯಾಚವಾಗಿ ಬೈದು ಮರದ ಕೋಲಿನಿಂದ ಹಲ್ಲೆ ನಡೆಸಿದ್ದು, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುತ್ತಾರೆ. ಹಲ್ಲೆಯನ್ನು ತಡೆಯಲು ಬಂದ ಮಹಿಳೆಯ ಪತಿಗೂ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಗಾಯಗೊಂಡ ಮಹಿಳೆ ಹಾಗೂ ಅವರ ಪತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.