ಕರಾವಳಿಯಲ್ಲಿ ಚಿರತೆ ಕಾಟ!
– ಹೆಚ್ಚಿದ ಚಿರತೆಗಳು: ಆನೇಕ ಕಡೆ ಚಿರತೆಯದ್ದೇ ಸುದ್ದಿ
– ಹೆಬ್ರಿ: ವಾಹನ ಡಿಕ್ಕಿಯಾಗಿ ಚಿರತೆ ಸಾವು
– ಪುತ್ತೂರು: ಕಳವು ಮಾಡಿದ್ದ ಕಳ್ಳನನ್ನು ಹಿಡಿದ ಶಿಕ್ಷಕರು
– ಕುಂದಾಪುರ: ಬನ್ಸ್ ರಾಘು ಕೊಲೆ: ಬಂಧನ
– ಬೆಳ್ತಂಗಡಿ :ನಿದ್ದೆ ಮಂಪರಿನಿಂದ ಚರಂಡಿಗೆ ಕಾರು!
NAMMUR EXPRESS NEWS
ಕಾರ್ಕಳ: ಕರಾವಳಿಯ ಹಲವೆಡೆ ಚಿರತೆ ಕಾಟ ಜೋರಾಗಿದೆ. ಈ ನಡುವೆ ಕಾರ್ಕಳದ ಕೆರ್ವಾಶೆ ಗ್ರಾಮದ ಶೆಟ್ಟಿಬೆಟ್ಟು ಎಂಬಲ್ಲಿ ಕೋಳಿಫಾರ್ಮ್ಗೆ ನುಗ್ಗಿರುವ ಚಿರತೆ ನೂರಾರು ಕೋಳಿಗಳನ್ನು ಮಾರಣಹೋಮ ಮಾಡಿದೆ. ಕೆರ್ವಾಶೆ ನಿವಾಸಿ ವೆಂಕಟೇಶ್ ಶರ್ವಗಾ ಅವರ ಕೋಳಿ ಫಾರ್ಮ್ಗೆ ಈ ವಾರದಲ್ಲಿ ಎರಡು ಸಲ ಚಿರತೆ ದಾಳಿ ಮಾಡಿದೆ. ಭಾನುವಾರ ಮತ್ತು ಮಂಗಳವಾರ ಚಿರತೆ ಸುಮಾರು 200 ಕೋಳಿಗಳನ್ನು ಕೊಂದು ಹಾಕಿರುವುದು ಲೆಕ್ಕ ಸಿಕ್ಕಿದೆ. ಎಷ್ಟು ಕೋಳಿಗಳನ್ನು ತಿಂದಿದೆ ಎಂದು ಗೊತ್ತಾಗಿಲ್ಲ. ಬಳಿಕ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅರಣ್ಯ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಚಿರತೆ ಹಿಡಿಯಲು ಬೋನು ಇರಿಸಿದ್ದಾರೆ. ಆದ್ರೂ ಬೋನಿಗೆ ಬೀಳಲಿಲ್ಲ.
ವಾಹನ ಡಿಕ್ಕಿಯಾಗಿ ಚಿರತೆ ಸಾವು
ಮುದ್ರಾಡಿ : ಮುದ್ರಾಡಿ ಹೊಸ ಕಟ್ಟಣ ಬಳಿ ವಾಹನವೊಂದು ಚಿರತೆಗೆ ಡಿಕ್ಕಿಯಾಗಿ ಚಿರತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಅ.5ರ ಸಂಜೆ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿಯಾಗಿ ಚಿರತೆ ಸಾವಿಗೀಡಾಗಿದೆ. ಘಟನಾ ಸ್ಥಳಕ್ಕೆ ಹೆಬ್ರಿ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಕಳ್ಳನನ್ನು ಹಿಡಿದ ಶಿಕ್ಷಕರು..!
ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಿಸಿದ ಸೊತ್ತುಗಳನ್ನು ಕದಿಯುತ್ತಿದ್ದಾತನನ್ನು ಶಾಲಾ ಶಿಕ್ಷಕರೇ ಹಿಡಿದ ಘಟನೆ ಅ.5ರಂದು ನಡೆದಿದೆ. ಪುತ್ತೂರು ಕೊಂಬೆಟ್ಟು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ಇಟ್ಟಿದ್ದ ಡ್ರಮ್ ಮತ್ತು ಇತರ ಸ್ಟೀಲ್ ಮತ್ತು ಪ್ಲಾಸ್ಟಿಕ್ ಸೊತ್ತುಗಳು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿತ್ತು. ಈ ಕುರಿತು ಶಾಲೆಯ ಉಪಪ್ರಾಂಶುಪಾಲರು ಸಿಸಿ ಟಿವಿ ಪರಿಶೀಲಿಸಿದಾಗ ವ್ಯಕ್ತಿಯೋರ್ವ ಕಳವು ಮಾಡುವುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಕುರಿತು ಶಾಲೆಯ ಶಿಕ್ಷಕರಿಗೆ, ಎಸ್ಡಿಎಂಸಿ ಮತ್ತು ನಗರಸಭಾ ಸ್ಥಳೀಯ ಸದಸ್ಯರಿಗೆ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅ. 5ರಂದು ಸ್ಟೀಲ್ ಡ್ರಮ್ ಕದ್ದೊಯ್ದ ವ್ಯಕ್ತಿ ಶಾಲೆಯ ಆವರಣದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಉಪಪ್ರಾಂಶುಪಾಲರು ಮತ್ತು ಶಿಕ್ಷಕರು ಆತನನ್ನು ಹಿಡಿದಿದ್ದಾರೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿರುವ ಕಳ್ಳ ಉತ್ತರಪ್ರದೇಶ ಮೂಲದವನೆನ್ನಲಾಗಿದೆ
ಬನ್ಸ್ ರಾಘು ಕೊಲೆ: ಆರೋಪಿಗಳ ಬಂಧನ
ಕುಂದಾಪುರ: ಕುಂದಾಪುರದ ರಾಘವೇಂದ್ರ ಶೇರುಗಾರ್ ಅಲಿಯಾಸ್ ಬನ್ಸ್ ರಾಘು(42) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾನುವಾರ ಸಂಜೆ ಕೃತ್ಯ ನಡೆದ ಪೊಲೀಸ್ ಇಲಾಖೆ ಆರೋಪಿ ಬಂಧನಕ್ಕೆ ಕಾರ್ಯಪ್ರವೃತ್ತರಾಗಿದ್ದರೆ ಉಡುಪಿ ಎಸ್ಪಿ ಡಾ.ಅರುಣ್ ಕೆ. ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಪೊಲೀಸ್ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು ಸಿಸಿ ಟಿವಿ ದೃಶ್ಯಾವಳಿ ಸಹಿತ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಆರೋಪಿಗಳ ಪತ್ತೆಗೆ ಶಿವಮೊಗ್ಗ, ಬೆಂಗಳೂರು ಸಹಿತ ವಿವಿಧ ಕಡೆಗಳಿಗೆ ತನಿಖಾ ತಂಡ ತರಳಿತ್ತು. ಪೊಲೀಸರ ತಂಡ ಶಿವಮೊಗ್ಗ ಮೂಲದ ಆರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿದ್ದು ವಿಚಾರಣೆಗೆ ಒಳಪಡಿಸಲಾಗಿದೆ.
ನಿದ್ದೆ ಮಂಪರಿನಿಂದ ಚರಂಡಿಗೆ ಇಳಿದ ಕಾರು!
ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು- ಅಂಬಡ್ತಾರು ಎನ್ನುವಲ್ಲಿ ಕೊಟ್ಟಿಗೆಹಾರ ಕಡೆಯಿಂದ ಉಜಿರೆಯತ್ತ ಚಲಿಸುತ್ತಿದ್ದ ಕಾರು ಚರಂಡಿಗೆ ಉರುಳಿದ ಘಟನೆ ಗುರುವಾರ ನಡೆದಿದೆ.
ಬೆಂಗಳೂರು ಮೂಲದ ಕಾರು ಇದಾಗಿದ್ದು, ಚಾಲಕನ ನಿದ್ದೆಯ ಮಂಪರಿನಿಂದ ಚರಂಡಿಗೆ ಜಾರಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಕಾರಿನ ಚಾಲಕ ಮತ್ತು ಪ್ರಯಾಣಿಕರು ಯಾವುದೇ ಹೆಚ್ಚಿನ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.