ನಕಲಿ ದುನಿಯಾ…!ನಕಲಿ ದಾಖಲೆ ಪತ್ರಗಳ ಜಾಲ ಪತ್ತೆ
– ಮಂಗಳೂರಲ್ಲಿ ಹೆಲ್ಪ್ ಲೈನ್ ಹೆಸರಲ್ಲಿ ವಂಚನೆ ಆರೋಪ
– ಮಂಗಳೂರು : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ 20 ವರ್ಷ ಜೈಲು
– ಮಂಗಳೂರು : ವಾಟರ್ ಬಾಟಲ್ಗೆ ಮಾತ್ರೆ ಹಾಕಿದ ವಿದ್ಯಾರ್ಥಿಗಳು
– ಮೂಲ್ಕಿ : ವಿದ್ಯುತ್ ತಗುಲಿ ಕಾರ್ಮಿಕ ಸಾವು
– ಪಡುಬಿದ್ರಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ
NAMMUR EXPRESS NEWS
ಮಂಗಳೂರು: ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಬಜೋಡಿ ಬಿಕರ್ನಕಟ್ಟೆಯ ಬರ್ನಾಡ್ ರೋಶನ್ ಮಸ್ಕರೇನಸ್(41) ಬಂಧಿತ ಆರೋಪಿ. ಈತ ಮಂಗಳೂರು ನಗರದ ಕಂಕನಾಡಿ ಪಂಪ್ವೆಲ್ನ ಹಳೆ ರಸ್ತೆಯಲ್ಲಿರುವ ವಿಶ್ವಾಸ್ ಕ್ರೌನ್ ಅಪಾರ್ಟ್ಮೆಂಟ್ನ ನೆಲ ಅಂತಸ್ತಿನಲ್ಲಿರುವ ಕೊಠಡಿಯೊಂದರಲ್ಲಿ “ಹೆಲ್ಫ್ ಲೈನ್ ಮಂಗಳೂರು’ ಎಂಬ ಹೆಸರಿನ ಸಂಸ್ಥೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಅಂಕ ಪ್ರಮಾಣಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿಗಳ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಇತರೇ ದಾಖಲಾತಿಗಳನ್ನು ಮಾಡಿಕೊಟ್ಟು ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿದ್ದ.
ಆರೋಪಿ ವಿವಿಧ ಹೆಸರಿನಲ್ಲಿ ತಯಾರಿಸಿದ ನಕಲಿ ಆಧಾರ್ ಕಾರ್ಡ್ಗಳು, ನಕಲಿ ರೇಷನ್ ಕಾರ್ಡ್, ನಕಲಿ ಉದ್ದಿಮೆ ಪರವಾನಿಗೆ ಪತ್ರ, ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಳೆದ 3 ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದುಕೊಂಡವರು ಅವುಗಳನ್ನು ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿ ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ನಕಲಿ ಪ್ರಮಾಣಪತ್ರಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಲ್ಯಾಪ್ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್,ಬಯೋ ಮೆಟ್ರಿಕ್ ಡಿವೈಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಕಲಿ ದಾಖಲೆ ಪತ್ರ ತಯಾರಿಸುವ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು
ಮಂಗಳೂರು : ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ಟಿಎಸ್ಸಿ-2 ನ್ಯಾಯಾಲಯವು 20 ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು ನೀಡಿದೆ.ಹಾವೇರಿ ಜಿಲ್ಲೆಯ ನೆಲೋಗಲ್ ಗ್ರಾಮದ ಬೆನಕರಾಜ್ ಆಲಿಯಾಸ್ ಲಮಾಣಿ ಶಿಕ್ಷೆಗೊಳಗಾದಾತ ಈತ ಹೋಮ್ ನರ್ಸ್ ಆಗಿದ್ದ ನೊಂದ ಬಾಲಕಿಯ ಅಜ್ಜ ಅಸೌಖ್ಯದಿಂದ ಸುರತ್ಕಲ್ ಪರಿಸರದ ಮನೆಯಲ್ಲಿದ್ದರು. ಅವರನ್ನು ನೋಡಿಕೊಳ್ಳಲು ಆರೋಪಿಯನ್ನು ಕರೆಸಿಕೊಳ್ಳಲಾಗಿತ್ತು. 2022ರ ಜನವರಿಯಲ್ಲಿ ಒಂದು ದಿನ ಬಾಲಕಿಯ ತಾಯಿ ಔಷಧ ತರಲೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದ ಅಲ್ಲದೆ ಕಚ್ಚಿ ಗಾಯಗೊಳಿಸಿದ್ದ ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.
ವಾಟರ್ ಬಾಟಲ್ಗೆ ಮಾತ್ರೆ ಹಾಕಿದ ವಿದ್ಯಾರ್ಥಿಗಳು!
ಮಂಗಳೂರು: ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ ಕಡಿಮೆ ಅಂಕ ನೀಡಿದ ದ್ವೇಷಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಶಿಕ್ಷಕರಿಗೆ ಕುಡಿಯುವ ನೀರಿನ ಬಾಟಲಿಯ ಅವಧಿ ಮುಗಿದ ಮಾತ್ರೆ ಹಾಕಿ ಕುಡಿಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಮಾತ್ರೆ ಬೆರೆತ ನೀರನ್ನು ಸೇವಿಸಿದ ಇಬ್ಬರು ಶಿಕ್ಷಕರು ಅಸ್ವಸ್ಥಗೊಂಡಿದ್ದಾರೆ.ಓರ್ವ ಶಿಕ್ಷಕರಿಗೆ ಮುಖದಲ್ಲಿ ಊಟ ಉಂಟಾಗಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡುಬಂದಿದ್ದು ಸೂಕ್ಷ್ಮವಾಗಿ ಗಮನಿಸಿದಾಗ ನೀರಲ್ಲಿ ಮಾತ್ರೆಗಳಿರುವುದು ಕಂಡುಬಂದಿದೆ.
ಈ ಕುರಿತು ವಿಚಾರಿಸಿ ಸಿಸಿಟಿವಿ ಗಮನಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ. ಉಳ್ಳಾಲದ ಖಾಸಗಿ ಶಾಲೆಯಲ್ಲಿ ನಡೆದ ಘಟನೆ ಇದಾಗಿದೆ, 6 ನೇ ತರಗತಿ ವಿದ್ಯಾರ್ಥಿನಿಯರ ಈ ಅಟಾಟೋಪ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಪೊಲೀಸ್ ದೂರು ಕೊಡದೇ ಇದ್ದು, ಸದ್ಯ ಅವರ ಪೋಷಕರನ್ನ ಕರೆಸಿ ಎಚ್ಚರಿಕೆ ನೀಡಲಾಗಿದೆ.
ವಿದ್ಯುತ್ ತಗುಲಿ ಕಾರ್ಮಿಕ ಸಾವು
ಮೂಲ್ಕಿ: ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ವಯರ್ನಿಂದ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಯುವಕ ಮೃತಪಟ್ಟಿದ್ದಾನೆ. ಝಾರ್ಖಂಡ್ ಮೂಲದ ಬಬ್ಲಿ ಬಸೇರಾ (27) ಮೃತ ಯುವಕ. ಮೇಸ್ತ್ರಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಅವರು ರಾತ್ರಿ 11 ಗಂಟೆ ಸುಮಾರಿಗೆ ಕಟ್ಟಡದಲ್ಲಿ ವಯರ್ ಅನ್ನು ಸುತ್ತಿ ಬದಿಗಿರಿಸಲು ಹೋದಾಗ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದೆ.ಮೂಲ್ಕಿ ಪೊಲೀಸರು ನಿರ್ಮಾಣ ಕೆಲಸದಲ್ಲಿ ನಿರ್ಲಕ್ಷ್ಯತನದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ
ಪಡುಬಿದ್ರಿ: ಸಾಂತೂರು ಗ್ರಾಮದ ನಿವಾಸಿ ಸುರೇಶ್ ಮೂಲ್ಯ (51) ಅವರು ಕಾಂಜರಕಟ್ಟೆ ಕಾಮತ್ ಹೊಟೇಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅ, 5ರಂದು ಬೆಳಗ್ಗೆ ಮನೆ ಬಿಟ್ಟು ಹೋದವರು ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಧಿ ಮೈಬಣ್ಣ, ದುಂಡು ಮುಖ, 170 ಸೆ.ಮೀ. ಎತ್ತರ ಇರುವ ಇವರು ಸಾಮಾನ್ಯ ಮೈಕಟ್ಟು ಹೊಂದಿದ್ದಾರೆ. ಹಿಂದಿ, ಕನ್ನಡ ಹಾಗೂ ತುಳು ಮಾತನಾಡಬಲ್ಲ ಅವರು ಕೆಂಪು, ಕಾಫಿ, ಬಿಳಿ ಬಣ್ಣದ ಗೆರೆಗಳುಳ್ಳ ಟಿ ಶರ್ಟ್ ಮತ್ತು ನೇರಳೆ ಲುಂಗಿ ಧರಿಸಿದ್ದರು. ಇವರ ಬಗ್ಗೆ ಯಾರಿಗಾದರೂ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ (08202555452)ಯನ್ನು ಸಂಪರ್ಕಿಸಲು ಕೋರಲಾಗಿದೆ.