ತಿರುಪತಿ ಯಾತ್ರೆಗೆ ಹೋದವರ ಮನೆಗೆ ನುಗ್ಗಿದ ಕಳ್ಳರು!
– ಕುಂದಾಪುರದಲ್ಲಿ ನಡೆದ ಘಟನೆ: ಬೀಗ ಒಡೆದು ಬಾವಿಗೆ ಎಸೆದರು
– ಮಂಗಳೂರು: ಪಾಯಸದ ಪ್ಯಾಕಲ್ಲಿ ವಿದೇಶದಿಂದ ಚಿನ್ನ ಸಾಗಾಟ
ಉಡುಪಿ: ತಂದೆಯನ್ನೇ ಕೊಲೆಗೈದ ಮಗ ಪೊಲೀಸ್ ವಶ
ಸುಳ್ಯ : ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿದವನ ಸಾವು
ಕಾಸರಗೋಡು: ಆಸ್ಪತ್ರೆಯಲ್ಲಿ ಗಾಂಜಾ ಮಾರಾಟ..!
NAMMUR EXPRESS NEWS
ಕುಂದಾಪುರ: ಮನೆಯವರು ತಿರುಪತಿ ಯಾತ್ರೆಗೆ ತೆರಳಿದ್ದ ಸಂದರ್ಭ ಕಳ್ಳರು ಮನೆಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಜನ್ಸಾಲೆ ಎಂಬಲ್ಲಿ ಸಂಭವಿಸಿದೆ.
ಸ್ಥಳೀಯರಾದ ಸುಕನ್ಯಾ ಕಿಣಿ ಎಂಬವರು ತಿರುಪತಿ ದರ್ಶನಕ್ಕೆಂದು ತೆರಳಿದ್ದರು. ಇವರು ಮನೆಗೆ ವಾಪಾಸು ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಕುಂದಾಪುರ-ಸಿದ್ದಾಪುರ ಮುಖ್ಯ ರಸ್ತೆ ಸಮೀಪದಲ್ಲೇ ಸುಕನ್ಯಾರ ಮನೆಯಿದ್ದು ತಿರುಪತಿ ದರ್ಶನ ಮುಗಿಸಿ ಬೆಳಗ್ಗೆ ಬಂದಾಗ ಮನೆಯ ಮುಖ್ಯ ದ್ವಾರದ ಬೀಗ ಒಡೆದು ಬಾವಿಗೆ ಎಸೆದಿರುವುದು ತಿಳಿದುಬಂದಿದೆ. ಮನೆಯ ಒಳಗಿನ ಕಪಾಟಿನಲ್ಲಿದ್ದ 5 ಪವನ್ ತೂಕದ ಮುತ್ತಿನ ಹವಳ ಮಿಶ್ರಿತ ಚಿನ್ನ ಒಂದು ಪವನ್ ಚಿನ್ನದ ನಾಣ್ಯ ಹತ್ತು ಸಾವಿರ ರೂ. ನಗದು ಹಾಗೂ ಬೆಳ್ಳಿ ಸಾಮಗ್ರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶಂಕರನಾರಾಯಣ ಠಾಣೆ ಉಪನಿರೀಕ್ಷಕ ನಾಸಿರ್ ಹುಸೇನ್ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಯುತ್ತಿದೆ.
ಪಾಯಸದ ಪ್ಯಾಕೆಟಲ್ಲಿ ವಿದೇಶದಿಂದ ಚಿನ್ನ ಸಾಗಾಟ!
ಮಂಗಳೂರು : ಅಕ್ರಮವಾಗಿ ವಿದೇಶದಿಂದ ಚಿನ್ನ ಸಾಗಾಟ ಮಾಡುವ ಸ್ಮಗ್ಲರ್ ಗಳು ಇದೀಗ ಹೊಸ ರೀತಿಯ ಅವಿಷ್ಕಾರ ಮಾಡಿದ್ದು, ಈ ಬಾರಿ ಖೀರ್ ಮಿಕ್ಸ್ ಪಾಕೆಟ್ ಗಳಲ್ಲಿ ಚಿನ್ನ ಇಟ್ಟು ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಮಂಗಳೂರು ಅಂತಾರಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುಬೈನಿಂದ ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಎಂಐಎ) ಬಂದಿಳಿದ ಪ್ರಯಾಣಿಕರೊಬ್ಬರು ‘ಖೀರ್ ಮಿಕ್ಸ್’ ಪೊಟ್ಟಣಗಳಲ್ಲಿ ಕಳ್ಳಸಾಗಣೆ ಮಾಡಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆರೋಪಿಯಿಂದ 24 ಕ್ಯಾರೆಟ್ನ 347 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1 20 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಟ್ವಿಟ್ ಮಾಡಿದೆ. ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಶುಕ್ರವಾರ ಎಂಐಎಗೆ ಬಂದಿಳಿದ ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿ ಬಳಿ ‘ಕಿಚನ್ ಟ್ರೆಜರ್ಸ್’ ಖೀರ್ ಮಿಕ್ಸ್ನ ಐದು ಪೊಟ್ಟಣಗಳಿದ್ದವು. ಸಂದೇಹ ಬಂದಿದ್ದರಿಂದ ಅವುಗಳನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಚಿನ್ನ ಇರುವುದು ಗೊತ್ತಾಯಿತು’ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಮೂಲಗಳು ತಿಳಿಸಿವೆ.
ತಂದೆಯನ್ನೇ ಕೊಲೆಗೈದ ಮಗ ಆರೆಸ್ಟ್!
ಉಡುಪಿ: ಪೆಜಮಂಗೂರು ಗ್ರಾಮದ ಮೊಗವೀರಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಆನಂದ ಮರಕಾಲ ಎಂಬುವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈತ ತನ್ನ ತಂದೆ ಸಾಧು ಮರಕಾಲ ಅವರನ್ನು ಅ.7ರಂದು ಮನೆಯಲ್ಲಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದನು.ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದಲ್ಲಿ ಆರೋಪಿಯನ್ನು ಉಳ್ಳೂರು ಎಂಬಲ್ಲಿ ಬಂಧಿಸಲಾಗಿದೆ.
ಮನೆಗೆ ಬಂದು ತಂದೆ ಜೊತೆ ಆಗ್ಗಾಗೆ ಗಲಾಟೆ ಮಾಡುತ್ತಿದ್ದ ಆನಂದ, ಸಾಧು ಅವರನ್ನು ಮನೆಯಿಂದ ಹೊರ ಹಾಕಬೇಕೆಂದು ದ್ವೇಷವನ್ನು ಹೊಂದಿದ್ದನು. ಇದೇ ದ್ವೇಷದಿಂದ ಆತ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿದವನ ಸಾವು!
ಸುಳ್ಯ: ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ವ್ಯಕ್ತಿಯೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ಘಟನೆ ನಡೆದಿದೆ. ಅಲೆಟ್ಟಿ ಗ್ರಾಮದ ಕೂಳಿಯಡ್ಕ ಕರುಣಾಕರ ಮೃತಪಟ್ಟ ದುರ್ದೈವಿ. ಸುಳ್ಯ ಅಲೆಟ್ಟಿ ಕ್ರಾಸ್ ಬಳಿ ಖಾಸಗಿ ಬಸ್ ಹತ್ತಲು ಹೋದಾಗ ಬಸ್ಸಿನ ಬಾಗಿಲು ತಳ್ಳಲ್ಪಟ್ಟು ರಸ್ತೆಗೆ ಆಯತಪ್ಪಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಚಿಕಿತ್ಸೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಮನೆಯಲ್ಲೇ ಮರುದಿನ ಮುಂಜಾನೆ ಸಮಸ್ಯೆ ಉಲ್ಬಣವಾದ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಮತ್ತೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಸಾವನ್ನಪ್ಪಿದ್ದಾರೆ ತಿಳಿದು ಬಂದಿದೆ
ಕಾಸರಗೋಡು: ಆಸ್ಪತ್ರೆಯ ಆವರಣದಲ್ಲಿ ಗಾಂಜಾ
ಕಾಸರಗೋಡು : ಖಾಸಗಿ ಆಸ್ಪತ್ರೆಯ ಆವರಣದಲ್ಲಿ, ರಹಸ್ಯವಾಗಿ ಮಾದಕ ವಸ್ತು ಮಾರಾಟಕ್ಕೆಪ್ಪಿಸಿದ, ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಉದುಮ ಎಡಚ್ಚಕ್ಕೆ ನ ಫೈಝಲ್ (37) ಮತ್ತು ತಳಿಪರಂಬದ ಸಿ’, ಟಿ ಅಬ್ದುಲ್ಲ (46) ಬಂಧಿತ ಆರೋಪಿಗಳು, ಭಾನುವಾರ ಸಂಜೆ ಸುಳ್ಳಿಪ್ಪಾಡಿ ಯ ಖಾಸಗಿ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಗಾಂಜಾ ಹಸ್ತಾಂತರಿಸುತ್ತಿದ್ದಾಗ ಖಚಿತ ಮಾಹಿತಿಯಂತೆ ಹೊಂಚು ಹಾಕಿ ಕುಳಿತ್ತಿದ್ದ ಅಬಕಾರಿ ದಳದ ಸಿಬ್ಬಂದಿಗಳು ಹಿಡಿಯುವಲ್ಲಿ ಯಶಸ್ವಿಯಾದರು. ಇದರಿಂದ ಎಂಟು ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆಸ್ಪತ್ರೆ ಆವರಣ ಆದುದರಿಂದ ಯಾರಿಗೂ ಸಂಶಯ ಬರಲಾರದು ಎಂದು ಇವರು ಇಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದಾಗಿ ಅಬಕಾರಿ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ