ಬೆಳ್ತಂಗಡಿ: ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಸೆರೆ
ಮಂಗಳೂರು : ಡ್ರಗ್ಸ್: ವಾರದಲ್ಲಿ 42 ಪ್ರಕರಣ ದಾಖಲು
ಬೆಳ್ತಂಗಡಿ: ಕಾಡುಪ್ರಾಣಿ ಬೇಟೆ: ಇಲಾಖೆ ದಾಳಿ
ಮಂಗಳೂರು: ಬಿಯರ್ ಬಾಟಲಿಯಿಂದ ಕೊಲೆ ಯತ್ನ
ಕರಾವಳಿಯಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಳ
NAMMUR EXPRESS NEWS
ಬೆಳ್ತಂಗಡಿ: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಾಲಕಿಯನ್ನು ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಧರ್ಮಸ್ಥಳ ಗ್ರಾಮದ ನಿವಾಸಿ ಕೇಶವ (43) ಎಂದು ಗುರುತಿಸಲಾಗಿದೆ. ಆರೋಪಿ ಬಾಲಕಿಯ ಮನೆಯ ಪರಿಚಿತನೇ ಆಗಿದ್ದು, ಆಗಾಗ ಬರುತ್ತಿದ್ದ ಎನ್ನಲಾಗಿದೆ. ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಬಾಲಕಿಯ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಕರಾವಳಿಯಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಳ
ಮಂಗಳೂರು: ಮಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಮುಂದುವರೆಸಿದ್ದು ಕಳೆದ ಒಂದು ವಾರದಲ್ಲಿ 42 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿದಂತೆ 7 ಪ್ರಕರಣಗಳಲ್ಲಿ 13 ಮಂದಿಯನ್ನು ಬಂಧಿಸಿ 23,550 ರೂ. ಮೌಲ್ಯದ 1.074 ಕೆಜಿ ಗಾಂಜಾ, 2.70 ಲ.ರೂ. ಮೌಲ್ಯದ 54 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ 35 ಪ್ರಕರಣಗಳಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಕಾಡುಪ್ರಾಣಿ ಬೇಟೆ: ಅರಣ್ಯಾಧಿಕಾರಿಗಳ ದಾಳಿ
ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠದಲ್ಲಿ ಕಾಡುಪ್ರಾಣಿ ಬೇಟೆಯಾಡಿ ಮಾಂಸ ಮಾಡುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ನ. 13ರಂದು ದಾಳಿ ನಡೆಸಿದ್ದು, ಈ ವೇಳೆ ಮಾಂಸ ಸಮೇತ ಇಬ್ಬರು ಆರೋಪಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಯೊಂದನ್ನು ಬೇಟೆಯಾಡಿ ಇಲ್ಲಿನ ಹೊಸಮಠ ಸಮೀಪ ಮನೆಯೊಂದರಲ್ಲಿ ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ ನೇತೃತ್ವದ ತಂಡ ಸಂಜೆ 5 ಗಂಟೆ ಸುಮಾರಿಗೆ ದಾಳಿ ಮಾಡಿದೆ. ಈ ವೇಳೆ ಆರೋಪಿತರು ಮಾಂಸ ಸಮೇತ ಹಿಡಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಮನೆ ಹಿಂಭಾಗದಲ್ಲಿ ಮಾಂಸ ಮಾಡಲು ಉಪಯೋಹಿಸಿದ ಬುಟ್ಟಿ, ಗೋಣಿ ಚೀಲಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ಬಿಯರ್ ಬಾಟಲಿಗಳಿಂದ ಹಲ್ಲೆಗೈದು ಕೊಲೆ ಯತ್ನ
ಮಂಗಳೂರು: ವ್ಯಕ್ತಿಯೋರ್ವರಿಗೆ ಬಿಯರ್ ಹಾಗೂ ಸೋಡಾ ಬಾಟಲಿಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಘಟನೆ ಶನಿವಾರದಂದು ನಗರದ ಕೊಟ್ಟಾರ ಚೌಕಿಯಲ್ಲಿ ಸಂಭವಿಸಿದೆ.ಅಶೋಕ್ ಪೂಜಾರಿ ಗಾಯ ಗೊಂಡವರು. ಅಶೋಕ್ ಅವರು ರಾತ್ರಿ 10 ಗಂಟೆಗೆ ಕೊಟ್ಟಾರ ಚೌಕಿಯಲ್ಲಿರುವ ಬಾರ್ನಿಂದ ಮದ್ಯ ಖರೀದಿ ಮಾಡಲು ಹೋಗಿದ್ದಾಗ ಕೌಂಟರ್ ಬಳಿ ಇದ್ದ ಅನೂಪ್ ಮತ್ತು ರೀತು ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಆಗ ಅವರನ್ನುದ್ದೇಶಿಸಿ ಅಶೋಕ್ ಅವರು ಬಾರಿನ ಒಳಗಡೆ ಗಲಾಟೆ ಮಾಡಬೇಡಿ, ಹೊರಗಡೆ ಹೋಗಿ ಎಂದು ಹೇಳಿದಾಗ ರೀತು ವಿನಾ ಕಾರಣ ಅಶೋಕ್ ಅವರಿಗೆ ಅವಾಚ್ಯವಾಗಿ ಬೈದ. ಆಗ ಆತನನ್ನು ಅಶೋಕ್ ದೂರ ತಳ್ಳಿದರು.
ಇದರಿಂದ ಕೋಪಗೊಂಡ ರೀತು ಕೌಂಟರ್ನಲ್ಲಿದ್ದ ಬಿಯರ್ ಬಾಟಲಿಯಿಂದ ಅಶೋಕ್ ಅವರ ತಲೆಗೆ ಹೊಡೆದ. ಆತನ ಜತೆಗಿದ್ದ ವಿಶ್ವ ಸೋಡಾ ಬಾಟಲಿಯಿಂದ ಅಶೋಕ್ ಅವರ ತಲೆಗೆ ಹೊಡೆದಿದ್ದಾನೆ. ರೀತು ಬಿಯರ್ ಬಾಟಲಿಯ ಚೂರಿನಿಂದ ಅಶೋಕ್ ಅವರ ಕುತ್ತಿಗೆಗೆ ತಿವಿದಾಗ ಅಶೋಕ್ ತಲೆ ಬಗ್ಗಿಸಿದ ಪರಿಣಾಮ ಬಾಟಲಿಯ ಏಟು ಅವರ ತಲೆಗೆ ತಾಗಿ ಗಾಯಗೊಂಡಿದ್ದಾರೆ. ರೀತು ಮತ್ತು ವಿಶ್ವ ಅಶೋಕ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.