ಕಾರ್ಕಳದಲ್ಲಿ ಹಲವರಿಗೆ ಮೋಸ!
– ಮುಂಬಯಿ ವ್ಯಕ್ತಿಯಿಂದ ವಂಚನೆಗೆ ಒಳಗಾದ ಕಾರ್ಕಳದ ಉದ್ಯಮಿ!
– ಕಾರ್ಕಳ :ಹಿರ್ಗಾನದ ಮಹಿಳೆಗೆ ಆನ್ಲೈನ್ನಲ್ಲಿ 6.50 ಲ.ರೂ. ವಂಚನೆ
– ಕಾರ್ಕಳ : ಸ್ಕೂಟರ್ ರಿಕ್ಷಾಕ್ಕೆ ಡಿಕ್ಕಿ: ಸವಾರ ಸಾವು
– ಮಂಗಳೂರು: ಪಡೀಲ್ ಅಂಡರ್ಪಾಸ್ನಲ್ಲಿ ಅಪಘಾತ
– ಮೂಡುಬಿದಿರೆ: ಕಬ್ಬಿಣದ ವಸ್ತು ಕದ್ದವ ಅಂದರ್!
NAMMUR EXPRESS NEWS
ಕಾರ್ಕಳ: ಇತ್ತೀಚಿಗೆ ಹಣಕಾಸಿನ ಮೋಸ ಹೆಚ್ಚುತ್ತಿವೆ. ಈ ನಡುವೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜೋಡುರಸ್ತೆಯ ರಾಜಾಪುರ ಕೋ-ಆಪರೇಟಿವ್ ಸೊಸೈಟಿ ಬಳಿ ಇರುವ ಸೌಮ್ಯ ಹಾರ್ಡ್ವೇರ್ ಅಂಗಡಿ ಮಾಲಕನಿಗೆ ಎಸಿಸಿ ಸಿಮೆಂಟ್ ಡೀಲರ್ಶಿಪ್ ಕೊಡಿಸುವುದಾಗಿ ಹೇಳಿ ಮುಂಬಯಿಯ ವ್ಯಕ್ತಿ 1.25 ಲ.ರೂ. ವಂಚಿಸಿದ ಕುರಿತು ದೂರು ದಾಖಲಾಗಿದೆ. ಅಂಗಡಿ ಮಾಲಕ ಶರತ್ ಆಚಾರ್ಯ (32) ಎಸಿಸಿ ಸಿಮೆಂಟ್ ಡೀಲರ್ಶಿಪ್ ಪಡೆಯುವ ಸಲುವಾಗಿ ಗೂಗಲ್ನಲ್ಲಿ ಹುಡುಕಾಡಿದಾಗ ಎಸಿಸಿ ಲಿಮಿಟೆಡ್ ಎಂಬ ವೆಬ್ಸೈಟಿನಲ್ಲಿ ದೊರೆತ 7980942036 ಮೊಬೈಲ್ ನಂಬರ್ಗೆ ಸೆ. 3ರೆಂದು ಕರೆಮಾಡಿದ್ದರು.
ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಡೀಲರ್ಶಿಪ್ ಕೊಡಿಸುತ್ತೇನೆ ಎಂದು ಹೇಳಿ ರಿಜಿಸ್ಟೇಷನ್ ಶುಲ್ಕವಾಗಿ 1.25 ಲ.ರೂ. ಕೇಳಿದ್ದಾನೆ. ಈ ಮೊತ್ತವನ್ನು ಶರತ್ ಆಚಾರ್ಯ ಆರೋಪಿಯ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮುಂಬಯಿ ಅಂಧೇರಿ ಈಸ್ಟ್ ಬ್ರಾಂಚ್ನ ಖಾತೆಗೆ ನೆಫ್ಟ್ ಮೂಲಕ ಪಾವತಿಸಿದ್ದಾರೆ. ಬಳಿಕ 1000 ಚೀಲ ಸಿಮೆಂಟ್ಗಾಗಿ 3.36 ಲ.ರೂ. ಪಾವತಿಸಲು ಹೇಳಿದ್ದಾನೆ. ಈ ಹಣ ತಾಂತ್ರಿಕ ದೋಷದ ಕಾರಣ ವರ್ಗಾವಣೆಯಾಗಿಲ್ಲ. ಆದರೆ ಮುಂಬಯಿಯ ವ್ಯಕ್ತಿ ರಿಜಿಸ್ಟೇಷನ್ಗೆ ಎಂದು ಪಡೆದುಕೊಂಡ ಹಣವನ್ನು ವಾಪಸು ಕೊಟ್ಟಿಲ್ಲ ಎಂದು ಶರತ್ ಅಚಾರ್ಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆಗೆ ಆನ್ಲೈನ್ನಲ್ಲಿ 6.50 ಲ.ರೂ. ಮೋಸ!
ಕಾರ್ಕಳ : ಆನ್ಲೈನ್ನಲ್ಲಿ ಹಣ ದ್ವಿಗುಣವಾಗುವ ಆಮಿಷಕ್ಕೆ ಒಳಗಾಗಿ ಕಾರ್ಕಳದ ಮಹಿಳೆಯೋರ್ವರು 6. 50 ಲಕ್ಷ ರೂ. ಕಳೆದುಕೊಂಡಿರುತ್ತಾರೆ. ಸೆ 4ರಂದು ಅವರ ವಾಟ್ಸಪ್ಗೆ ಆನ್ಲೈನ್ ಉದ್ಯೋಗದ ಸಂದೇಶ ಬಂದಿದ್ದು, ಅದರಂತೆ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿದ್ದರು. ಲಿಂಕ್ ಕಳುಹಿಸಿದವರು ಟಾಸ್ಕ್ ಕ್ರಿಯೇಟ್ ಮಾಡಿ ಮಹಿಳೆಗೆ ಹಣ ಪಾವತಿಸಲು ತಿಳಿಸಿರುತ್ತಾರೆ. ಈ ಹಣವನ್ನು ಲಾಭಾಂಶದೊಂದಿಗೆ ಮರುಪಾವತಿ ಮಾಡುವುದಾಗಿ ನಂಬಿಸಿದ್ದಾರೆ. ಜಗನ್ನಾಥ ಮಾಧವನ್ ಎಂಬ ಐಡಿ ಖಾತೆಗೆ ಹಂತ ಹಂತವಾಗಿ ಸೆ.5 ರಿಂದ ಸೆ.8ರ ವರೆಗೆ ಒಟ್ಟು 6. 50 ಲ. ರೂ. ಸುಜಿತ್ರಾ ಪಾವತಿಸಿದ್ದಾರೆ. ಅನಂತರ ಲಿಂಕ್ ಕಳುಹಿಸಿದವರು ಹಣದೊಂದಿಗೆ ಮಾಯವಾಗಿದ್ದಾರೆ. ಮಹಿಳೆ ಎಷ್ಟೇ ಪ್ರಯತ್ನಪಟ್ಟರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಸ್ಕೂಟರ್ ರಿಕ್ಷಾಕ್ಕೆ ಡಿಕ್ಕಿ ,ಸವಾರ ಮೃತ್ಯು
ಕಾರ್ಕಳ : ಹೊಸ್ಮಾರಿನಲ್ಲಿ ಸ್ಕೂಟರ್ ಸ್ಕಿಡ್ ಆಗಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಪ್ರಜ್ವಲ್ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಪ್ರಜ್ವಲ್ ಚಲಾಯಿಸುತ್ತಿದ್ದ ಸ್ಕೂಟರ್ ಹೊಸ್ಮಾರು ತಿರುವಿನಲ್ಲಿ ಸ್ಕಿಡ್ ಆಗಿ ಒಂದಷ್ಟು ದೂರ ಜಾರಿಕೊಂಡು ಹೋಗಿ ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕ ನಾರಾವಿಯ ಅಜ್ಜಾದಮನೆ ಸುನಿಲ್ (30) ಎಂಬವರ ಕಾಲಿಗೆ ಗಾಯವಾಗಿದೆ. ಪ್ರಜ್ವಲ್ನನ್ನು ಕಾರ್ಕಳ ಗಾಬ್ರಿಯಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯುವಕ ಕೊನೆಯುಸಿರೆಳೆದಿದ್ದಾರೆ.
ಪಡೀಲ್ ಅಂಡರ್ಪಾಸ್ನಲ್ಲಿ ಅಪಘಾತ: ಓರ್ವ ಸಾವು
ಮಂಗಳೂರು: ಬೈಕ್ ಅಪಘಾತಗೊಂಡು ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದ ಪಡೀಲ್ ಅಂಡರ್ಪಾಸ್ನಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭವಿನ್ ರಾಜ್ (20) ಎಂದು ಗುರುತಿಸಲಾಗಿದೆ. ಗಾಲ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಕಲಿಯುತ್ತಿದ್ದ ಭವಿನ್ ರಾಜ್, ತನ್ನ ಗೆಳೆಯರ ಜತೆ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ನಗರದ ಪಡೀಲ್ ಅಂಡ ಪಾಸ್ನಲ್ಲಿ ಬೈಕ್ ಅಂಡರ್ಪಾಸ್ ಫುಟ್ಪಾತ್ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಇದರಿಂದ ಮೂವರು ಕೂಡ ಗಾಯಗೊಂಡಿದ್ದು, ಈ ಪೈಕಿ ಭವಿನ್ ರಾಜ್ ಮೃತಪಟ್ಟಿದ್ದಾರೆ.
ಕಬ್ಬಿಣದ ಕಳ್ಳತನದ ಆರೋಪಿಯ ಬಂಧನ
ಮೂಡುಬಿದರೆ: ಮೂಡಬಿದರೆ ಠಾಣೆ ವ್ಯಾಪ್ತಿಯ ಬೆಳುವಾಯಿ ಹಾಗೂ ಕೆಸರುಗದ್ದೆ ಎಂಬಲ್ಲಿ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಪೈಪ್ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಂದ 2.50 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ತೋಡಾರು ಗ್ರಾಮದ ಮಹಮ್ಮದ್ ಸಾಯಿಲ್(21) ಎಂದು ತಿಳಿದು ಬಂದಿದೆ. ಮೂಡಬಿದರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ಅವರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 2.50 ಲಕ್ಷ ರೂ. ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಕಬ್ಬಿಣದ ಪೈಪನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.