– ಸೈಬರ್ ಕ್ರೈಮ್ ಅಧಿಕಾರಿಗಳ ಹೆಸರಿನಲ್ಲಿ 15.62 ಲಕ್ಷ ವಂಚನೆ!
– ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಸಿಲುಕಿ ಉರುಳಿ ಬಿದ್ದ ಕಂಬಗಳು…!
– ಅನಾರೋಗ್ಯದಿಂದ ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯನ ಸಾವು!
– ಕಾಲುಜಾರಿ ನದಿಗೆ ಬಿದ್ದು ಯುವಕ ಸಾವು!
NAMMUR EXPRESS NEWS
ಪಡುಬಿದ್ರೆ: ಕೋರಿಯರ್ನಲ್ಲಿ ಡ್ರಗ್ಸ್ ಕಳುಹಿಸಲಾಗುತ್ತಿದೆ ಎಂದು ಹೆದರಿಸಿ ಸೈಬರ್ ಕ್ರೈಮ್ ಅಧಿಕಾರಿಗಳೆಂದು ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡು ಮೂಲದ ಪಡುಬಿದ್ರಿ ನಿವಾಸಿ ಟಿಯಾಗು (32) ಎಂಬವರಿಗೆ ಜ. 17ರಂದು ಫೆಡ್ಎಕ್ಸ್ ಕೊರಿಯರ್ ಎಂಬ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ವ್ಯಕ್ತಿಯೊಬ್ಬ ಮಾತನಾಡಿದ್ದು, ನೀವು ಮುಂಬೈನಿಂದ ಇರಾನ್ ಮಾಡಿದ ಕೊರಿಯರ್ ಡೆಲಿವರಿ ಆಗಲಿಲ್ಲ ಎಂದು ತಿಳಿಸಿದ್ದು, ನಾವು ಯಾವುದೇ ಕೊರಿಯರ್ ಅರ್ಡರ್ ಮಾಡಿಲ್ಲ ಎಂದು ಹೇಳಿದ ಟಿಯಾಗು, ಅದರಲ್ಲಿ ಏನಿದೆ ಎಂದು ವಿಚಾರಿಸಿದರು.
ಆಗ ಆ ವ್ಯಕ್ತಿಯು, ಪಾರ್ಸೆಲ್ನಲ್ಲಿ ಅವಧಿ ಮುಗಿದ ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್, ಟಾಯ್, ಎಂಬಿಡಿಎ 450ಗ್ರಾಂ ಇದೆ ಎಂದು ಹೇಳಿ, ನಿಮ್ಮ ಐಡಿ ದುರುಪಯೋಗ ಆಗಿದ್ದು, ಪಾರ್ಸೆಲ್ನಲ್ಲಿ ಎಂಬಿಡಿಎ ಡ್ರಗ್ನ್ನು ಅಕ್ರಮವಾಗಿ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದನು. ನೀವು ಸಿಕ್ಕಿಬಿದ್ದರೆ ನಿಮಗೆ ಜೀವನ ಪರ್ಯಂತ ಕೇಸು ದಾಖಲಾಗುತ್ತದೆ ಎಂದು ಹೇಳಿ, ದೂರು ಕೊಡಲು ಮುಂಬೈ ಸೈಬರ್ ಕ್ರೈಂ ಬ್ರಾಂಚ್ ಗೆ ಕರೆಯನ್ನು ವರ್ಗಾವಣೆ ಮಾಡುತ್ತೇನೆ ಎಂದು ಹೇಳಿದನು.
ಒಂದು ನಿಮಿಷದ ನಂತರ ಇನ್ನೊರ್ವ ವ್ಯಕ್ತಿ ಮಾತನಾಡಿ ನಿಮ್ಮ ಅಕೌಂಟ್ ಚೆಕ್ ಮಾಡಬೇಕಾಗಿದೆ ಎಂದು ಹೇಳಿ ಟಿಯಾಗು ಅವರನ್ನು ನಂಬಿಸಿ, ಟಿಯಾಗು ಅವರ ಐಸಿಐಸಿಐ ಅಪ್ಲಿಕೇಶನ್ನಲ್ಲಿರುವ 15,62,921ರೂ. ಮೊತ್ತದ ಪರ್ಸನಲ್ ಲೋನ್ಗೆ ಕ್ಲಿಕ್ ಮಾಡಿಸಿದನು. ಆಗ ಬಂದ ಒಟಿಪಿಯನ್ನು ಪಡೆದಾಗ ಲೋನ್ ಹಣವು ಟಿಯಾಗು ಅವರ ಬ್ಯಾಂಕ್ ಖಾತೆಗೆ ಜಮಾ ಆಯಿತು. ನಂತರ ಆ ವ್ಯಕ್ತಿಯು ಸೈಬರ್ ಕ್ರೈಮ್ ಎಂದು ನಂಬಿಸಿ ಅಕೌಂಟ್ ನಂಬರ್ ನೀಡಿ ಟಿಯಾಗು ಖಾತೆಯಲ್ಲಿದ್ದ 15,62,921ರೂ. ಮೊತ್ತವನ್ನು ಆರ್.ಟಿ.ಜಿ.ಎಸ್. ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.
ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಸಿಲುಕಿ ಉರುಳಿ ಬಿದ್ದ ಕಂಬಗಳು…!
ಬೆಳ್ತಂಗಡಿ : ವೇಣೂರು- ಅಳದಂಗಡಿ ರಸ್ತೆಯಲ್ಲಿನ ಸೂಳಬೆಟ್ಟುವಿನಲ್ಲಿ ಮೇಲ್ಬಾಗದಲ್ಲಿದ್ದ ವಿದ್ಯುತ್ ತಂತಿಗಳನ್ನು ಗಮನಿಸದೆ ಚಾಲಕ ಲಾರಿ ಚಲಾಯಿಸಿದ್ದರಿಂದ ತಂತಿಗಳು ವಾಹನಕ್ಕೆ ಸಿಲುಕಿವೆ. ಇದರಿಂದ ತಂತಿಗಳೊಂದಿಗೆ ಎರಡು ಜೋಡಿ ಕಂಬಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದವು. ತಂತಿಗಳ ಘರ್ಷಣೆಯಿಂದ ಭಾರೀ ಬೆಂಕಿ ಕಾಣಿಸಿತ್ತು. ಇದು ಕಾರ್ಕಳದ ಗುತ್ತಿಗೆ ಕಂಪೆನಿಯೊಂದರ ಲಾರಿಯಾಗಿದ್ದು, ಅದನ್ನು ಅಳದಂಗಡಿಯಲ್ಲಿ ತಡೆಹಿಡಿಯಲಾಗಿದೆ. ಚಾಲಕ ಕುಷ್ಟಗಿಯ ಕುಮಾರ್ನನ್ನು ವೇಣೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಸ್ಥಳಕ್ಕೆ ಮೆಸ್ಕಾಂ ಎಂಜಿನಿಯರ್, ವೇಣೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳ : ಅನಾರೋಗ್ಯದಿಂದ ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯನ ಸಾವು
ಬಂಟ್ವಾಳ : ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯ. ಬೊಳ್ಳಾಯಿ ನಿವಾಸಿ ಹಾಜಿ ಅಬ್ದುಲ್ ಅಝೀಝ್ ಬಿಐಬಿ (53) ಅವರು ಗುರುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬುಧವಾರ ಹಠಾತ್ ಅನಾರೋಗ್ಯ ಕಾಣಿಸಿಕೊಂಡಿದ್ದು ರಾತ್ರಿ ವೇಳೆ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಗುರುವಾರ ಮಧ್ಯಾಹ್ನ ವೇಳೆಗೆ ನಿಧನರಾಗಿದ್ದಾರೆ. ಮೃತ ಹಾಜಿ ಅಬ್ದುಲ್ ಅಝೀಝ್ ಅವರು ಬೊಳ್ಳಾಯಿಯ ಪ್ರತಿಷ್ಠಿತ ಬಿಐಬಿ ಫ್ಯಾಮಿಲಿಯ ಸದಸ್ಯರಾಗಿದ್ದು, ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿಯ ಆಡಳಿತ ಕಮಿಟಿಯ ಸದಸ್ಯರೂ, ಬೊಳ್ಳಾಯಿ ಕುತುಬಿಯ್ಯತ್ ಕಮಿಟಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಮಾಜಿ ಸಚಿವ ಬಿ ರಮಾನಾಥ ರೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಸಕ್ರಿಯ ಕಾಂಗ್ರೆಸ್ ಸದಸ್ಯರಾಗಿ ಹಲವು ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ಸ್ಥಳೀಯವಾಗಿ ಜನಪರ ಸೇವಾ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಬಂಟ್ವಾಳ : ಕಾಲುಜಾರಿ ನದಿಗೆ ಬಿದ್ದು ಬಾಲಕ ಸಾವು!
ಬಂಟ್ವಾಳ : ಶಾಲಾ ವಿದ್ಯಾರ್ಥಿ ನೇತ್ರಾವತಿ ನದಿಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಪಾದೆ ನಾವೂರ ಗ್ರಾಮದ ಕೋಡಿಬೈಲು ನಿವಾಸಿ ಪ್ರಜ್ವಲ್ ನಾಯಕ್ ಮೃತಪಟ್ಟ ಬಾಲಕ. ನಾವೂರ ಗ್ರಾಮದ ನೆಕ್ಕಿಲಾರು ಎಂಬಲ್ಲಿ ಸ್ನೇಹಿತರ ಜೊತೆ ನದಿಯ ಬದಿಗೆ ತೆರಳಿದ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಕೂಡಲೇ ಸ್ಥಳೀಯ ಮುಳುಗು ತಜ್ಞರು ಬಾಲಕನನ್ನು ಮೇಲಕ್ಕೆ ಎತ್ತಿ ಹಾಕಿದ್ದಾರೆ. ಆದರೂ ಅದಾಗಲೇ ಬಾಲಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.