ಬ್ಯಾಂಕ್ ಮ್ಯಾನೇಜರಿಂದ ಕೋಟಿಗಟ್ಟಲೆ ಗೋಲ್ಮಾಲ್!
– ಅಂಕೊಲದಲ್ಲಿ ನಡೆದ ಘಟನೆ: ಕೋಟಿ ಕೋಟಿ ಹಣ ವಂಚನೆ
– ಉಡುಪಿ: ಡಾಕ್ಟರ್ ಎಂದು ನಂಬಿಸಿ ಮೋಸ
– ಮಂಗಳೂರು: ಸ್ಟಾಕ್ ಟ್ರೇಡಿಂಗ್ ಹೆಸರಲ್ಲಿ 18 ಲಕ್ಷ ಮೋಸ!
NAMMUR EXPRESS NEWS
ಅಂಕೋಲಾ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರೀಕೃತ ಬ್ಯಾಂಕಿನ ವ್ಯವಸ್ಥಾಪಕನೊಬ್ಬ ತನ್ನ ಬ್ಯಾಂಕಿಗೆ ಮತ್ತು ಗ್ರಾಹಕರಿಗೆ ಸೇರಿದಂತೆ 1.94 ಕೋಟಿ ರೂ. ವಂಚನೆ ಮಾಡಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡ ಕೆನರಾ ಬ್ಯಾಂಕ್ 2ನೇ ಶಾಖೆ (ಸಿಂಡಿಕೇಟ್)ಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ವೆಂಕಟೇಶ ಎಫ್. ಮಜ್ಜಿಗುಡ್ಡ ಎಂಬಾತನೇ ವಂಚನೆಯ ಆರೋಪಿ ಎನ್ನಲಾಗಿದೆ.
ಸೆ 21, 2020 ರಿಂದ ಜ.31, 2023 ರವರೆಗೆ ಅಂದಿನ ಬ್ಯಾಂಕಿನ ಸೀನಿಯರ್ ಮೆನೇಜರ್ ಆಗಿ ಕಾರ್ಯನಿರ್ವಹಿಸಿದ ವೆಂಕಟೇಶ ಮಜ್ಜಿಗುಡ್ಡ ಈತನು ತನ್ನ ಅವಧಿಯಲ್ಲಿ ಬ್ಯಾಂಕಿನ ಖಾತೆಯಿಂದ ಹಣವನ್ನು ತನ್ನ ಖಾತೆಗೆ, ತನ್ನ ಹತ್ತಿರದ ಸಂಬಂಧಿಕರ ಖಾತೆಗೆ ಹಾಗೂ ಸ್ನೇಹಿತರ ಖಾತೆಗೆ ಹಣ ವರ್ಗಾವಣೆ ಮಾಡಿ ನಗದು ರೂಪದಲ್ಲಿ ಹಣ ತೆಗೆದುಕೊಂಡಿರುವ ಕುರಿತು ಬ್ಯಾಂಕಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದಲ್ಲದೇ ಅನೇಕ ಬ್ಯಾಂಕ್ ಗ್ರಾಹಕರ ಖಾತೆಯಿಂದ ಖಾತೆದಾರರ ಅನುಮತಿ ಇಲ್ಲದೇ ಯಾವುದೇ ದಾಖಲೆಗಳಿಲ್ಲದೆ ಬೇರೆ, ಬೇರೆ ಗ್ರಾಹಕರ ಖಾತೆಗೆ ಹಣ ವರ್ಗಾಯಿಸಿದ್ದಾರೆ.
ಬ್ಯಾಂಕಿನಿಂದ ಗ್ರಾಹಕರಿಗೆ ಸಾಲ ನೀಡುವಾಗ ಸರಿಯಾಗಿ ದಾಖಲಾತಿಗಳನ್ನು ನಿರ್ವಹಿಸಿದೆ ಬ್ಯಾಂಕ್ ಸ್ಲಿಪ್ಸ್ ಮತ್ತು ಚಲನ್ಸಗಳ ಸಾಕ್ಷಿ ನಾಶಪಡಿಸಿರುತ್ತಾರೆ. ಬ್ಯಾಂಕಿನಲ್ಲಿ ಖಾತೆಹೊಂದಿರುವ ಸ್ವಸಹಾಯ ಸಂಘಗಳಿಗೆ ಸಾಲ ಕೊಟ್ಟ ನಂತರ ಅವರಿಂದ ಬ್ಯಾಂಕ್ನಲ್ಲಿ ಡಿಪಾಸಿಟ್ ಹಣ ಇಡಬೇಕು, ಸಾಲ ಮುಕ್ತಾಯವಾದ ನಂತರ ಡಿಪಾಸಿಟ್ ಹಣ ಸಾಲಕ್ಕೆ ಮರುಪಾವತಿಯಾಗುವುದಾಗಿ ಹೇಳಿ ನಂಬಿಸಿ ಹಣ ಪಡೆದು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಗ್ರಾಹರಿಗೆ ಮತ್ತು ಬ್ಯಾಂಕಿಗೆ ಮೋಸ ವಂಚನೆ ಮಾಡಿರುತ್ತಾನೆ.
ಸುಮಾರು 50 ಸ್ವಸಹಾಯ ಸಂಘಗಳಿಂದ 1.94 ಕೋಟಿ ರೂ. ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾನೆ ಎಂದು ಹಾಲಿ ಬ್ಯಾಂಕಿನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರತೀಕ್ಷಾ ವಿನೋದ ಖರೆ ಪೊಲೀಸ್ ದೂರು ನೀಡಿದ್ದಾರೆ. ಪಿಐ ಶ್ರೀಕಾಂತ ತೋಟಗಿ ಅವರ ಮಾರ್ಗದರ್ಶನದಲ್ಲಿ ಎಚ್ಸಿ ಮಮತಾ ಆನಂದ ಗುನಗಾ ಪ್ರಕರಣ ವನ್ನು ದಾಖಲಿಸಿಕೊಂಡು ಪ್ರಥಮ ವರದಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಡಾಕ್ಟರ್ ಎಂದು ನಂಬಿಸಿ ಮೋಸ..!
ಉಡುಪಿ: ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬುದಾಗಿ ನಂಬಿಸಿ ಮಹಿಳೆ ಒಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮಲ್ಪೆ ನಿವಾಸಿ ವಿನಿತಾ ಎಂಬ ಮಹಿಳೆಗೆ ಜನವರಿ 24ರಂದು ವಾಟ್ಸಪ್ ನಲ್ಲಿ ವ್ಯಕ್ತಿಯೊಬ್ಬ ಪರಿಚಯ ಆಗಿದ್ದು ನಿಮ್ಮ ಬಿಸಿನೆಸ್ನಲ್ಲಿ ಪಾಲುದಾರಿಕೆ ಮಾಡ್ತೀನಿ ಎಂದಿದ್ದ. ಅಲ್ಲದೆ, ತಾನು ಲಂಡನ್ನಲ್ಲಿ ಡಾಕ್ಟರ್ ಆಗಿದ್ದು, ಸದ್ಯದಲ್ಲೇ ಭಾರತಕ್ಕೆ ಬರಲು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ. ಫೆ.2ರಂದು ಬೇರೊಂದು ನಂಬರಲ್ಲಿ ಫೋನ್ ಬಂದಿತ್ತು. ದೆಹಲಿ ಏರ್ಪೋಟ್್ರ ಕಚೇರಿಯಿಂದ ಫೋನ್ ಮಾಡುತ್ತಿದ್ದೇನೆಂದು ಹೇಳಿದ್ದ ಆ ವ್ಯಕ್ತಿ, ಲಂಡನ್ ಡಾಕ್ಟರಿನ ಫ್ರೆಂಡ್ ಎಂದು ಹೇಳಿದ್ದ. ಡಾಕ್ಟರನ್ನು ಏರ್ಪೋಟ್್ರ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರನ್ನು ಬಿಡಿಸಿ ತರಲು ದಂಡ ಕಟ್ಟಬೇಕಾಗಿದೆ. ಎಂದಿದ್ದ.
ಆ ನಂತರವೂ ಫೋನ್ ಬಂದಿದ್ದು, ಡಾಕ್ಟರ್ ಏರ್ಪೋಟಲ್ಲಿ ಸಿಕ್ಕಿಬಿದ್ದಿದ್ದಾರೆ. ದಂಡ ಕಟ್ಟಲು ಹಣ ಇಲ್ಲ, ಸಹಾಯ ಮಾಡಬಹುದೇ ಎಂದು ಆ ವ್ಯಕ್ತಿ ಕೇಳಿಕೊಂಡಿದ್ದ. ಅದರಂತೆ, ವಿನಿತಾ ಅವರು ಫೆ.16ರಿಂದ 20ರ ನಡುವೆ ತನ್ನ ಕೆನರಾ ಬ್ಯಾಂಕ್ ಖಾತೆಯಿಂದ ಫೋನ್ ಪೇ ಮೂಲಕ 4.96 ಲಕ್ಷ ರೂ. ಹಣ ಕಳಿಸಿದ್ದರು. ಹಣ ಕಳಿಸಿದ ಬಳಿಕ ಫೋನ್ ಸಂಪರ್ಕ ಕಡಿತ ಆಗಿತ್ತು. ಇದರಿಂದ ಮೋಸದ ಅರಿವಾದ ಮಹಿಳೆ ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ಟಾಕ್ ಟ್ರೇಡಿಂಗ್ ಹೆಸರಲ್ಲಿ 18 ಲಕ್ಷ ಮೋಸ!
ಮಂಗಳೂರು: ಫೇಸ್ ಬುಕ್ನಲ್ಲಿ ಕಾಣಿಸಿಕೊಂಡ ಸ್ಟಾಕ್ ಟ್ರೇಡಿಂಗ್ ಜಾಹೀರಾತು ನೋಡಿ ಹಣ ಹೂಡಿಕೆ ಮಾಡಿದ ವ್ಯಕ್ತಿ ಯೊಬ್ಬರು 18.53 ಲ.ರೂ. ವಂಚನೆಗೊಳಗಾದ ಘಟನೆ ವರದಿಯಾಗಿದೆ. ವಿಜಯ ಕುಮಾರ್ ಎಂಬುವವರು ಫೇಸ್ಬುಕ್ನಲ್ಲಿ ಸ್ಯಾಕ್ ಟ್ರೇಡಿಂಗ್ ಎಂಬ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್ನ ಮೂಲಕ 2013ರ ಡಿ.2ರಂದು ವಾಟ್ಸ್ ಆಫ್ ಗ್ರೂಪ್ನಲ್ಲಿ ಸೇರ್ಪಡೆಯಾಗಿದ್ದರು. ಆ ಗ್ರೂಪ್ನಲ್ಲಿ ಹಲವಾರು ಅಡ್ಡಿನ್, ಸದಸ್ಯರಿದ್ದರು. ಗ್ರೂಪ್ ಚೀಫ್ ಅಡ್ಮಿನ್ ಆಗಿದ್ದ ಅಮಿತ್ ಶಾ ಎಂಬಾತ ಪ್ರತೀ ದಿನ ಆನ್ಲೈನ್ ವೀಡಿಯೋ ಕ್ಲಾಸ್ ಮೂಲಕ ಸ್ಟಾಕ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡುವ ಬಗ್ಗೆ ವಿವರಿಸುತ್ತಿದ್ದಾರೆ.
ವಿಜಯ ಅವರು ಅದನ್ನು ಸತ್ಯವೆಂದು ಭಾವಿಸಿ ಹಣ ತೊಡಗಿಸಿದ್ದರು. 2024ರ ಜ. 11ರಿಂದ ಫೆ. 5ರ ವರೆಗೆ ಹಂತ ಹಂತವಾಗಿ ಒಟ್ಟು 18.53 ಲ.ರೂ.ಗಳನ್ನು ಪಾವತಿಸಿದ್ದರು. ಅದನ್ನು ಹಿಂಪಡೆಯಲು ಸ್ಟಾಕ್ ಟ್ರೇಡಿಂಗ್ ಕಂಪೆನಿಯ ಕಸ್ಟಮರ್ ಕೇರ್ ಅವರನ್ನು ಸಂರ್ಪಕಿಸಿದಾಗ ಶೇ. 40 ಕಮಿಷನ್ ಆಗಿ ನೀಡುವಂತೆ ಹಾಗೂ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದರು. ಆಗ ಅನುಮಾನ ಬಂದ ವಿಜಯ ಕುಮಾರ್ ಅವರು ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಯಿತು. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.