ಮಂಗಳೂರು ವಿಮಾನ ನಿಲ್ದಾಣಕ್ಕೆ ಹೈಟೆಕ್ ಭದ್ರತೆ!
– 20 ವರ್ಷ ತಲೆಮರಸಿಕೊಂಡಿದ್ದ ಆರೋಪಿ ಅರೆಸ್ಟ್!
– ಮಾಯದಂತೆ ಚಿನ್ನದ ಸರ ಕದ್ದು ಹೋದ ಯುವಕ!
NAMMUR EXPRESS NEWS
ಮಂಗಳೂರು: ರಾಜ್ಯದ ಪ್ರಸಿದ್ಧ ವಿಮಾನ ನಿಲ್ದಾಣದಲ್ಲಿ ಒಂದಾದ ಮಂಗಳೂರು ವಿಮಾನ ನಿಲ್ದಾಣಕ್ಕೆ ಇನ್ನಷ್ಟು ಭದ್ರತೆ ಒದಗಿಸುವ ಪಡೆ ನೀಡಲಾಗಿದೆ. ಈ ಮೂಲಕ ಕರಾವಳಿಯ ವಿಮಾನ ನಿಲ್ದಾಣ ಮತ್ತಷ್ಟು ಸುರಕ್ಷಿತ ಆಗಲಿದೆ. ಭದ್ರತೆಯ ಉದ್ದೇಶಕ್ಕಾಗಿ ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್(ASG)ಗೆ ಇದೀಗ ಬಾಂಬ್ ಸೂಟ್ ನೀಡಲಾಗಿದೆ. ವಿಮಾನ ನಿಲ್ದಾಣದ ಆವರಣದಲ್ಲಿ ಸ್ಫೋಟಕಗಳನ್ನು ಒಳಗೊಂಡ ಯಾವುದೇ ಭದ್ರತಾ ಬೆದರಿಕೆಯನ್ನು ನಿಷ್ಕ್ರಿಯಗೊಳಿಸಲು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳವು ಬಾಂಬ್ ಸೂಟ್ ಅನ್ನು ಬಳಸಲಿದೆ. ಸ್ಫೋಟಕಗಳನ್ನು ಎದುರಿಸಲು ತರಬೇತಿ ಪಡೆದ ಎಎಸ್ಜಿ ಸಿಬ್ಬಂದಿಗೆ ಹೆಚ್ಚು ಅಗತ್ಯವಾದ ಆತ್ಮವಿಶ್ವಾಸ ಮತ್ತು ತುರ್ತು ಭದ್ರತಾ ಬೆದರಿಕೆಗಳನ್ನು ಎದುರಿಸಲು ರಕ್ಷಣೆಯನ್ನು ನೀಡುತ್ತದೆ.
20 ವರ್ಷ ತಲೆಮರಸಿಕೊಂಡಿದ್ದ ಆರೋಪಿ ಅರೆಸ್ಟ್!
ಸುಮಾರು 20 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 2003ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳದ ಕೋಯಿಕ್ಕೋಡ್ ಸಮೀಪದ ನೌಷದ್ ಯಾನೆ ಹಂಸದ್ (46) ಬಂಧಿತ ಆರೋಪಿ. ಕೋಯಿಕ್ಕೋಡ್ ಜಿಲ್ಲೆಯ ಪೇರಾಂಬರದಲ್ಲಿ ಬಂಧಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ
ಹಾಜರುಪಡಿಸಲಾಗಿದೆ.
ಮಾಯದಂತೆ ಚಿನ್ನದ ಸರ ಕದ್ದು ಹೋದ ಯುವಕ!
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದರೊಬ್ಬರ ಜತೆ ಮಾತನಾಡುತ್ತ ಅವರಿಗೆ ಅವರ ಕತ್ತಿನಲ್ಲಿದ್ದ 14 ಗ್ರಾಮ್ ತೂಕದ ಚಿನ್ನದ ಸರವನ್ನು ಅಪರಿಚಿತನೋರ್ವ ಪಡೆದು ವಂಚಿಸಿದ ಘಟನೆ ಬುಧವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಕೋಟೆ ನಿವಾಸಿ ಗಂಗಾಧರ್ ಟೈಲರ್ (70) ಎಂಬವರು ಮುಂಜಾನೆ 7.30ರ ಸುಮಾರಿಗೆ ಹೊಟೇಲೊಂದಕ್ಕೆ ಹೋಗುತ್ತಿದ್ದಾಗ ದಾರಿ ಮಧ್ಯೆ ಭೇಟಿಯಾದ ಯುವಕನೋರ್ವ ಅವರನ್ನು ಮಾತಿಗೆಳೆದು ಅವರಿಗೆ ಅರಿವಿಲ್ಲದೆಯೇ ಅವರಾಗಿಯೇ ಅವರ ಕತ್ತಿನಲ್ಲಿದ್ದ ಚಿನ್ನಾಭರಣವನ್ನು ಆತನ ಕೈಗಿತ್ತರು. ತಾವು ವಂಚನೆಗೆ ಒಳಗಾದ ಬಗ್ಗೆ ಅರಿವಾಗುತ್ತಲೇ ಆತನಿಗಾಗಿ ಹುಡುಕಾಟ ನಡೆಸಿದರಾದರೂ ವಿಫಲರಾಗಿ ಪೊಲೀಸರಿಗೆ ದೂರು ನೀಡಿದರು.ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣದ ಸಮೀಪ ಇರುವ ಕೋಳಿ ಮಾಂಸ ಮಾರಾಟ ಮಳಿಗೆಗಳಿಗೆ ಕಳ್ಳನೋರ್ವ ನುಗ್ಗಿ ನಗದು ಹಣವನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಶೈಲೇಶ್ ಗಾಣಿಗ ಹಾಗೂ ನಿತೀನ್ ಸುವರ್ಣ ಅವರ ಕೋಳಿ ಮಾಂಸ ಮಾರಾಟ ಅಂಗಡಿಗೆ ನುಗ್ಗಿದ ಕಳ್ಳನೋರ್ವ ಶೈಲೇಶ್ ಅಂಗಡಿಯೊಳಗಿದ್ದ ಒಂದು ಅಂಗಡಿಯಿಂದ 10 ಸಾವಿರ ರೂ. ಎಗರಿಸಿರುವುದು ಸಿಸಿ ಕೆಮರಾ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.