ಕುಂದಾಪುರದಲ್ಲಿ ಸೌಜನ್ಯ ಹೋರಾಟ!
– ಮೂಲ್ಕಿ: ಅರೆಸ್ಟ್ ಮಾಡಲು ಬಂದಾಗ ವಿಷ ಸೇವಿಸಿದ
– ಉಪ್ಪಿನಂಗಡಿ: ಮಹಿಳೆಯ ಮಾನಭಂಗಕ್ಕೆ ಯತ್ನ
– ಉಡುಪಿ: ಶರಣ್ ಪಂಪ್ ವೆಲ್ ಜಾಮೀನು
NAMMUR EXPRESS NEWS
ಕುಂದಾಪುರದಲ್ಲಿ ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆದಿದ್ದು ಸಹಸ್ರಾರು ಜನ ಭಾಗಿಯಾಗಿದ್ದರು. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಾವಿರಾರು ಜನರು ಭಾಗವಹಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಜಸ್ಟಿಸ್ ಫಾರ್ ಸೌಜನ್ಯ ಎನ್ನುವ ಘೋಷಣೆಗಳನ್ನು ಕೂಗುತ್ತಾ ನೆಹರು ಮೈದಾನದಿಂದ ಹೊರಟು ಶಾಸ್ತ್ರಿ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಳ ಕುಟುಂಬಿಕರು ಭಾಗವಹಿಸಿದರು.
ಅರೆಸ್ಟ್ ಮಾಡಲು ಬಂದಾಗ ವಿಷ ಸೇವಿಸಿದ!
ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರಂಟ್ ಆದೇಶದಂತೆ ಪೊಲೀಸರು ಬಂಧಿಸಲು ಬಂದ ಸಂದರ್ಭದಲ್ಲಿ ಆರೋಪಿಯೋರ್ವ ಕೀಟನಾಶಕ ಸೇವಿಸಿ, ಬಂಧಿಸಿ ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅಸ್ವಸ್ಥನಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2017 ರಲ್ಲಿ ನಡೆದ ಅಪರಾಧ ಪ್ರಕರಣ ಒಂದರ ಆರೋಪಿಯಾಗಿದ್ದ ಮಂಗಳೂರಿನ ಮುಳ್ಳೂರು ಗ್ರಾಮದ ಕರುಣಾಕರ ಶೆಟ್ಟಿ (44) ಎಂಬವರ ವಿರುದ್ಧ ವಾರಂಟ್ ಕಾರ್ಯಗತಗೊಳಿಸುವಂತೆ ನ್ಯಾಯಲಯದ ಆದೇಶ ನೀಡಿತ್ತು. ಕರುಣಾಕರ ಶೆಟ್ಟಿ ಉಡುಪಿಯ ಶಿವಳ್ಳಿ ಯಲ್ಲಿರುವ ರಸಿಕ ಬಾರ್ ನಲ್ಲಿ ಕೆಲಸ ಮಾಡಿಕೊಂಡಿರುವ ಬಗೆಗಿನ ಖಚಿತ ಮಾಹಿತಿಯ ಮೇರೆಗೆ ಬಜಪೆ ಪೋಲಿಸ್ ಠಾಣಾ ಉಪನಿರೀಕ್ಷಕರಾದ ಗುರುಪ್ಪ ಕಾಂತಿ ಮತ್ತು ಸಿಬ್ಬಂದಿಗಳು ಆಗಸ್ಟ್ 24 ರಂದು ಸಂಜೆ ವಾರಂಟ್ ಆದೇಶ ಕಾರ್ಯಗತಗೊಳಿಸಿ ಆರೋಪಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಆರೋಪಿ ಕೆಲಸ ಮಾಡಿಕೊಂಡಿರುವ ಉಡುಪಿಯ ಶಿವಳ್ಳಿಯ ರಸಿಕ ಬಾರ್ ಗೆ ಬಂದಿದ್ದರು.
ಪೊಲೀಸರು ಆಪಾದಿತನನ್ನು ವಶಕ್ಕೆ ಪಡೆಯುವ ಸಮಯ ತಾನು ಬಟ್ಟೆ ಹಾಕಿಕೊಂಡು ಬರುವುದಾಗಿ ಬಾರ್ನ ಮೇಲೆ ಇರುವ ರೂಮಿನೊಳಗೆ ಹೋದ ಕರುಣಾಕರ ಯಾವುದೋ ಕೀಟನಾಶಕ ಸೇವನೆ ಮಾಡಿ ಬಂದು ವಾಹನದಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಅಸ್ವಸ್ಥಗೊಂಡವರನ್ನು, ಬಜಪೆ ಪೋಲಿಸ್ ಠಾಣಾ ಉಪನಿರೀಕ್ಷಕರು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ: ಮಹಿಳೆಯ ಮಾನಭಂಗಕ್ಕೆ ಯತ್ನ!
ಉಪ್ಪಿನಂಗಡಿ ವ್ಯಾಪ್ತಿಯ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಒಂಟಿ ಮಹಿಳೆ ಮತ್ತು ಎಂಡೋಸಲ್ಫಾನ್ ಪೀಡಿತ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕ ವಾಸವಿರುವ ಮನೆಗೆ ಏಕಾ ಏಕಿ ನುಗ್ಗಿದ ಐದು ಮಂದಿ ದುಷ್ಕರ್ಮಿಗಳ ತಂಡ ಯುವಕನಿಗೆ ಥಳಿಸಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಗುರುವಾರ ಸಂಭವಿಸಿದೆ. ಹಲ್ಲೆಗೊಳಗಾದವರನ್ನು ಮುಝಮ್ಮಿಲ್ (19) ಎಂಡೋಸಲ್ಫಾನ್ ಪೀಡಿತ ಸಂತ್ರಸ್ತನಾಗಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವನಾಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆಯನ್ನು ಆತನ ತಾಯಿ ಮೈಮುನ (38) ಎಂದು ಗುರುತಿಸಲಾಗಿದೆ.ಆರೋಪಿಗಳ ಪೈಕಿ ಓರ್ವನನ್ನು ಉಪ್ಪಿನಂಗಡಿಯ ಕೂಟೇಲು ಸಮೀಪದ ಮಹಮ್ಮದ್ ಎಂದು ಗುರುತಿಸಲಾಗಿದೆ.ಉಳಿದ ನಾಲ್ವರು ಅಪರಿಚಿತರು ಎನ್ನಲಾಗಿದೆ.
ಉಡುಪಿ: ಶರಣ್ ಪಂಪ್ ವೆಲ್ ಜಾಮೀನು
ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣವನ್ನ ಖಂಡಿಸಿ ಆಗಸ್ಟ್ 3ರಂದು ಬೃಹತ್ ಪ್ರತಿಭಟನೆ ವೇಳೆ ತಾಯಿಯಂದಿರು ಸೌಟು ಹಿಡಿಯುವ ಕೈಯಲ್ಲಿ ಕತ್ತಿ, ತಲಾವಾರು ಹಿಡಿಯುವ ಮೂಲಕ ಹಿಂದೂ ಸಮಾಜದ ರಕ್ಷಣೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್ವೆಲ್ ಹೇಳಿದ್ದುಇದು ಪ್ರಚೋದನಕಾರಿ ಭಾಷಣ ಎಂದು ಶರಣ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಉಡುಪಿ ಜಿಲ್ಲಾ ನ್ಯಾಯಾಧೀಶರಿಂದ ಜಾಮೀನು ಮಂಜೂರಾಗಿದೆ