ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲಲ್ಲಿ ಬೆದರಿಸಿದ ರೌಡಿ.!
– ಆಧಾರ್ ಇಲ್ಲದ ಮಕ್ಕಳ ಬಸ್ನಿಂದ ಇಳಿಸಿದ ನಿರ್ವಾಹಕ!
– ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ: ಕರಾವಳಿ ಅಲರ್ಟ್!
ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ನರ್ಮ್ ಬಸ್ನಲ್ಲಿ ಪ್ರಯಾಣಿಸಿದ ಐವರು ಪ್ರೈಮರಿ ಶಾಲಾ ವಿದ್ಯಾರ್ಥಿನಿಯರನ್ನ ಅರ್ಧ ದಾರಿಯಲ್ಲೇ ಇಳಿಸಿದ ಬಸ್ನ್ನು ತಡೆದ ಸ್ಥಳೀಯರು ನಿರ್ವಾಹಕನನ್ನು ತರಾಟೆಗೆತ್ತಿಕೊಂಡ ಘಟನೆ ಉಳ್ಳಾಲದ ಕುಂಪಲದಲ್ಲಿ ನಡೆದಿದೆ. ಮಂಗಳೂರಿನಿಂದ ಕುಂಪಲ ನಡುವೆ ಓಡಾಟ ನಡೆಸುವ ಸರ್ಕಾರಿ ನರ್ಮ್ ಬಸ್ನ ನಿರ್ವಾಹಕ ಹುಸೇನ್ ಸಾಬ್ ಹಳ್ಳೂರ ಎಂಬಾತ 2ನೇ ಮತ್ತು 3ನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದಕ್ಕೆ ನಿಮಗೆ ಉಚಿತ ಪ್ರಯಾಣವಿಲ್ಲವೆಂದು ಹಣ ಕೇಳಿದ್ದು ಹಣ ನೀಡದ್ದಕ್ಕೆ ಬಸ್ನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸಿ ಅಮಾನವೀಯತೆ ಮರೆದಿದ್ದಾನೆ.
ಟೂರಿಸ್ಟ್ ಬಸ್ ಪಲ್ಟಿ; ಪ್ರಯಾಣಿಕರಿಗೆ ಗಾಯ
ಬೆಳ್ತಂಗಡಿಯ ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ ಶುಕ್ರವಾರ ರಾತ್ರಿ ವಿಶಾಲ್ ಟೂರಿಸ್ಟ್ ಬಸ್ ಪಲ್ಟಿಯಾಗಿ ಹಲವು ಮಂದಿಗೆ ಗಾಯಗಳಾಗದ ಘಟನೆ ನಡೆದಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ವಿಶಾಲ್ ಟೂರಿಸ್ಟ್ ಆಗಿದ್ದು, ಬೆಳ್ತಂಗರಿ ತಾಲೂಕಿನ ಪರಂದರ, ಗಾಂಧೀನಗರದ ನಡುವೆ ಅಪಘಾತಕ್ಕೀಡಾಗಿದೆ. ಒಟ್ಟು 27 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಊರವರು ಜಮಾಯಿಸಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ ಸೇವೆಯ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ: ಕರಾವಳಿ ಅಲರ್ಟ್!
ಮಂಗಳೂರು: ಕೇರಳದಲ್ಲಿ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ರೋಗದೃಡಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲೆಯ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ. ಆಫ್ರಿಕನ್ ಹಂದಿ ಜ್ವರವು ಸಾಕು ಮತ್ತು ಕಾಡು ಹಂದಿಗಳಲ್ಲಿ ವೈರಾಣುನಿಂದ ಬರುವ ಸಾಂಕ್ರಮಿಕ ರೋಗವಾಗಿದ್ದು, ಸಾವಿನ ಪ್ರಮಾಣವು ಶೇ.100ರವರೆಗೂ ತಲುಪಬಹುದಾಗಿದೆ. ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಹಾಗೂ ಲಸಿಕೆ ಇಲ್ಲದಿರುವುದರಿಂದ ನಿಯಮಾನುಸಾರ ರೋಗ ದೃಢೀಕರಣಗೊಂಡ ಪ್ರದೇಶದ 1 ಕಿ.ಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ವಧೆ ಮಾಡಬೇಕಾಗಿದೆ. ಕರ್ನಾಟಕಕ್ಕೆ ಹರಡಂತೆ ತಡೆಗಟ್ಟಲು ಕೇರಳ ರಾಜ್ಯಕ್ಕೆ ಸಂಪರ್ಕಿಸುವ ಗಡಿ ಭಾಗದಲ್ಲಿ ಚೆಕ್ಪೋಸ್ಟ್ ಗಳನ್ನು ತೆರೆದು ಹಂದಿ ಹಾಗೂ ಹಂದಿ ಮಾಂಸಗಳ ಸಾಗಾಣಿಕೆ ಮೇಲೆ ನಿಗಾ ವಹಿಸಲಾಗಿದೆ.
ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಸಿದ ಪುಡಿ ರೌಡಿ.!
ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಕಾರು, ಮೊಬೈಲ್ ದೋಚಿದ್ದ ಆರೋಪಿಯನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿ, ಇನ್ನೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ನೌಫಾಲ್ ಯಾನೆ ಟೊಪ್ಪಿ ನೌಫಾಲ್ (31) ಎಂಬಾತ ಬಂಧಿತ ಆರೋಪಿ. ಪುಚ್ಚ ಎಂಬಾತ ತಲೆಮರೆಸಿದ್ದಾನೆ. ಮಜೀದ್ ಸೈಯದ್ ಎಂಬವರನ್ನು ನೌಫಾಲ್ ಮತ್ತು ಪುಚ್ಚ ಸೇರಿ ಕಿಡ್ನಾಪ್ ಮಾಡಿ 5 ಲಕ್ಷ ರೂಪಾಯಿ ಹಾಗೂ ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರು ಕೊಡಲು ನಿರಾಕರಿಸಿದಾಗ ಅವರ ಬಳಿಯಿಂದ ಕಾರು, ಮೊಬೈಲ್ ಹಾಗೂ 18 ಸಾವಿರ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದರು ಎಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನೌಫಾಲ್ನನ್ನು ಪಾಂಡೇಶ್ವರ ಪೊಲೀಸ್ ನಿರೀಕ್ಷಕ ಎ.ಸಿ.ಲೋಕೇಶ್ ಅವರು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.