ಟಾಪ್ ನ್ಯೂಸ್ ಕರಾವಳಿ
– ಮನೆಯ ಅಂಗಳದಲ್ಲೇ ಚಿರತೆ: ಸ್ಥಳೀಯರಲ್ಲಿ ಭಯ!
– ಬೆಂಗಳೂರು-ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದು
– ಮೂಡುಬಿದಿರೆ: ಅಪಘಾತಕ್ಕೆ ಚಕ್ಕುಲಿ ರಮೇಶಣ್ಣ ಇನ್ನಿಲ್ಲ!
NAMMUR EXPRESS NEWS
ಮಣಿಪಾಲ: ಮನೆಯೊಂದರ ಕಾಂಪೌಂಡ್ ಒಳಗೆ ಚಿರತೆ ಕಾಣಿಸಿಕೊಂಡ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಮನೆಯೊಂದರ ಅಂಗಳದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ಮನೆಯ ಹೊರಭಾಗದಲ್ಲಿ ನಾಯಿ ಬೊಗಳುತ್ತಿದ್ದುದನ್ನು ಗಮನಿಸಿದ ಮನೆ ಮಂದಿ ಬಾಗಿಲು ತೆಗೆದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದವೂ ಕೇಳಿರಲಿಲ್ಲ. ಮಣಿಪಾಲ ಆಸುಪಾಸಿನಲ್ಲಿ ಚಿರತೆ ಓಡಾಟವಿರುವುದು ಕೇಳಿ ತಿಳಿದಿದ್ದ ಮನೆಯವರು ಮನೆಯಿಂದ ಹೊರಗೆ ಬರದೆ ಸುಮ್ಮನಿದ್ದರು.
ಆದರೆ ಬೆಳಿಗ್ಗೆ ಎದ್ದು ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಚಿರತೆ ನಾಯಿಯ ಹಿಂದೆ ಹೋಗುತ್ತಿರುವುದು ಕಂಡುಬ೦ದಿದೆ. ಚಿರತೆ ಬಂದು ಹೋದ ಬಳಿಕ ಸದ್ದಿಲ್ಲದೆ ಕಣ್ಮರೆಯಾಗಿದ್ದ ನಾಯಿ ಚಿರತೆ ಬಾಯಿಯಿ೦ದ ತಪ್ಪಿಸಿಕೊಂಡು ಬೆಳಿಗ್ಗೆ ಪ್ರತ್ಯಕ್ಷವಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಿತರಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು-ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದು!
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಯಡಕುಮೇರಿ ನಡುವಿನ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿತವಾಗಿ ಬೆಂಗಳೂರು-ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದಾಗಿದೆ. ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಬಂದ್ ಆಗಿದೆ. 3
ಕಿಲೋ ಮೀಟರ್ ನಂಬರ್ 63ರಲ್ಲಿ ಹಳಿಯ ಮೇಲೆ ಮಣ್ಣು ಕುಸಿತವಾಗಿದೆ. ಸದ್ಯ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿಗಳು ದೌಡಾಸಿದ್ದು, ರೈಲ್ವೆ ಇಲಾಖೆ ಅಧಿಕಾರಿಗಳಿಂದ ರೈಲು ಮಾರ್ಗ ಬದಲಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಮೂಡುಬಿದಿರೆ: ಅಪಘಾತಕ್ಕೆ ಚಕ್ಕುಲಿ ರಮೇಶಣ್ಣ ಇನ್ನಿಲ್ಲ!
ಮೂಡುಬಿದಿರೆ: ಪುತ್ತಿಗೆ ಗ್ರಾಪಂನ ಹಂಡೇಲಿನಲ್ಲಿ ಪಂಚಾಯಿತಿ ವ್ಯಾಪ್ತಿಯ ಪುತ್ತಿಗೆ ಪದವು ಹಂಡೇಲು ಮಸೀದಿ ಬಳಿ ಶುಕ್ರವಾರ ಸಾಯಂಕಾಲ ಕಾರು ಡಿಕ್ಕಿಯಾಗಿ ಸೈಕಲ್ ಸವಾರ, ಪಂಪ್ ಆಪರೇಟಿವ್ ರಮೇಶ್ ಅಂಚನ್(56) ಮೃತಪಟ್ಟಿದ್ದಾರೆ. ಸಾಯಂಕಾಲ 6.30ರ ವೇಳೆ ರಮೇಶ್ ಅವರು ಸೈಕಲ್ ನಲ್ಲಿ ಹೋಗುತ್ತಿರುವಾಗ ಕಲ್ಲಮುಂಡೂರು ಕಡೆಯಿಂದ ವೇಗವಾಗಿ ಬ೦ದು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆ, ಕಾಲಿಗೆ ತೀವ್ರ ತರಹದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಮೇಶ್ ಅವರು ಹಲವು ವರ್ಷಗಳ ಹಿಂದೆ ಮೂಡುಬಿದಿರೆ ಮಾರುಕಟ್ಟೆ ಸಂತೆಯಲ್ಲಿ ತಿಂಡಿ ತಿನಿಸುಗಳನ್ನು ಮಾರುತ್ತಿದ್ದು, ಸ್ಥಳೀಯವಾಗಿ ‘ಚಕ್ಕುಲಿ ರಮೇಶಣ್ಣ’ ಎಂದು ಹೆಸರುವಾಸಿಯಾಗಿದ್ದರು. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.