ಆನ್ ಲೈನ್ ವಂಚನೆ: 4.99 ಲಕ್ಷ ಹೋಯ್ತು!
– ಡೆಬಿಟ್ ಕಾರ್ಡ್ ಮಾಹಿತಿ ಎಗರಿಸಿ 4.99 ಲಕ್ಷ ರೂ ವಂಚನೆ
– ಬೈಂದೂರು: ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ
– ಉಪ್ಪಿನಂಗಡಿ: ಮೇಸ್ತ್ರಿಗೆ ಒಲಿಯಿತು ಕೇರಳ ಲಾಟರಿ 50 ಲಕ್ಷ ರೂ..!
– ಕುಂಬಳೆ: ಅಣ್ಣ ತಂಗಿಯರ ಪುತ್ರಿಯರು ನಾಪತ್ತೆ!
NAMMUR EXPRESS NEWS
ಉಡುಪಿ: ಎಸ್.ಬಿ.ಐ ಡೆಬಿಟ್ ಕಾರ್ಡನ್ನು ಆಕ್ಟಿವೇಶನ್ ಮಾಡುವುದಾಗಿ ಹೇಳಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಓಟಿಪಿ ಪಡೆದು 4.99 ಲಕ್ಷ ರೂ. ವಂಚಿಸಿದ್ದಾನೆ. ಅಬ್ದುಲ್ ಕರೀಮ್ ಎಂಬ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಮಣಿಪಾಲ ಶಾಖೆ ಎಸ್.ಬಿ ಖಾತೆ ಯಿಂದ ರೂ.49999 ರಂತೆ ಕ್ರಮಾವಾಗಿ 10 ಸಲ ವ್ಯವಹಾರ ನಡೆಸಿ ಒಟ್ಟು ರೂ. 4,99,990 ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ಮೋಸ ಮಾಡಿದ್ದಾನೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ
ಬೈಂದೂರು: ಬೈಂದೂರು ಶಿರೂರು ನೆರೆಗುದ್ದೆ ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾಸ್ಥಿತಿಯಲ್ಲಿ ಬಿದ್ದಿದ್ದ ಯುವಕನೊಬ್ಬನನ್ನು ಆಂಬ್ಯುಲೆನ್ಸ್ ಸಿಬ್ಬಂದಿಗಳು ಕರ್ತವ್ಯ ನಿಷ್ಠೆ ತೋರಿಸಿ ಪ್ರಾಣ ಉಳಿಸಿರುವ ಘಟನೆ ಮಂಗಳವಾರ ರಾತ್ರಿ 10:00ಗೆ ರೈಲ್ವೆ ಇಲಾಖೆ ನೀಡಿದ ಮಾಹಿತಿಯ ಮೇರೆಗೆ ಆರೋಗ್ಯ ಕವಚ 108 ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರೈಲ್ವೇ ಸುರಂಗ ಮಾರ್ಗದೊಳಗೆ ಸುಮಾರು 3ಕಿ.ಮೀ ನಡೆದು ಕೊಂಡು ಹೋಗಿ ಹಳಿಯ ಪಕ್ಕದಲ್ಲಿ ಬಿದ್ದ ವ್ಯಕ್ತಿಯನ್ನು ಸ್ವಚ್ಚರ್ ನಲ್ಲಿ ತಂದು ಸಿಎಸ್ಸಿ ಬೈಂದೂರ್ ಆಸ್ಪತ್ರೆಗೆ ದಾಖಲು ಮಾಡಿದರು.ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಸರ್ಕಾರಿ ಆಸ್ಪತ್ರೆ ಕುಂದಾಪುರ ದಾಖಲು ಮಾಡಿದ್ದಾರೆ. ಆಂಬ್ಯುಲೆನ್ಸ್ ಪೈಲೆಟ್ ಶರಣಬಸವ, ಇ ಎಂ ಟಿ ಪ್ರತಿಭಾ ಆಸ್ಪತ್ರೆಗೆ ದಾಖಲು ಮಾಡಿ ಕರ್ತವ್ಯ ನಿಷ್ಠೆ ತೋರಿಸಿದ್ದಾರೆ.
ಕೇರಳ ಲಾಟರಿ 50 ಲಕ್ಷ ರೂ. ಬಹುಮಾನ
ಉಪ್ಪಿನಂಗಡಿ: ಬಡತನ ವಿದ್ದರೂ ನಿಷ್ಠೆ, ಪ್ರಾಮಾಣಿಕತೆ ಯಿಂದ ದುಡಿದು ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿರುವ ಇಳಂತಿಲ ಗ್ರಾಮದ ಏನ್ಮಾಡಿಯ ಚಂದ್ರಯ್ಯ ಕುಂಬಾರ ಅವರನ್ನು ಕೊನೆಗೂ ಅದೃಷ್ಟ ಲಕ್ಷ್ಮೀ ಕೈ ಹಿಡಿದಿದ್ದು, ಕೇರಳ ರಾಜ್ಯ ಲಾಟರಿ ಯಲ್ಲಿ 50 ಲಕ್ಷ ರೂ. ಗೆದ್ದಿದ್ದಾರೆ. ವ್ಯಕ್ತಿಯಲ್ಲಿ ಮೇಸ್ತ್ರಿ ಯಾಗಿರುವ ಅವರು ಕಾನತ್ತೂರಿನ ಶ್ರೀ ನಾಲ್ವರ್ ದೈವಸ್ಥಾನ ಕ್ಷೇತ್ರಕ್ಕೆ ಹೋದಾಗ 500 ರೂಪಾಯಿಯ ಓಣಂ ಬಂಪರ್ ಲಾಟರಿ ಟಿಕೇಟ್ ಖರೀದಿಸಿದ್ದರು. ಅದರ ಬಂಪರ್ ಬಹುಮಾನ 25 ಕೋಟಿ ಆಗಿದ್ದು, ಇವರು ಮೂರನೇ ಬಹುಮಾನ ಗೆದ್ದುಕೊಂಡಿದ್ದಾರೆ.
ಅಣ್ಣ ತಂಗಿಯರ ಪುತ್ರಿಯರು ನಾಪತ್ತೆ
ಕುಂಬಳೆ : ಸೆ. 24ರಂದು ವರ್ಕಾಡಿ ನಿವಾಸಿ 15ರ ಹರೆಯದ ಬಾಲಕಿಯ ಹೆತ್ತವರು ಉಳ್ಳಾಲದಲ್ಲಿ ನಡೆದಿದ್ದ ವಿವಾಹಕ್ಕೆ ತೆರಳಿದ್ದರು. ಇಬ್ಬರು ಹೆಣ್ಮಕ್ಕಳ ಸಹಿತ ನಾಲ್ವರು ಮಕ್ಕಳು ಮನೆಯಲ್ಲಿ ಉಳಿದುಕೊಂಡಿದ್ದರು. ಸಂಜೆ ಮನೆಗೆ ವಾಪಸಾದಾಗ ಮಗಳು ನಾಪತ್ತೆಯಾಗಿದ್ದಳು. ಉಳಿದ ಮಕ್ಕಳಲ್ಲಿ ಪ್ರಶ್ನಿಸಿದಾಗ ಬಾಲಕಿ ಮುಟ್ಟಿಂಗೆ ತೆರಳಿರುವುದಾಗಿ ತಿಳಿಸಿದ್ದಾರೆ.
ಬಾಲಕಿಯ ತಂದೆ ಮುಟ್ಟಂನಲ್ಲಿರುವ ಸಹೋದರಿಯ ಮನೆಗೆ ಕರೆ ಮಾಡಿ ವಿಚಾರಿಸಿದಾಗ ತನ್ನ 22ರ ಹರೆಯದ ಯುವತಿಯೂ ನಾಪತ್ತೆಯಾಗಿದ್ದಾಳೆಂದು ತಿಳಿಸಿ ದ್ದಾರೆ. ಈ ಇಬ್ಬರು ಜತೆಯಾಗಿ ಹೋಗಿರಬಹುದೆಂದು ಶಂಕಿಸಿ ಇತರೆಡೆ ಹುಡುಕಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಮತ್ತು ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಇವರಿಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ.ಇವರ ಪತ್ತೆಗೆ ವಿವಿಧ ಸ್ಥಳಗಳಲ್ಲಿರುವ ಸಿಸಿಟಿವಿ ಕೆಮರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.