ಮಂಗಳೂರು : ಅನ್ಲೈನ್ ಹೂಡಿಕೆ ಆಮಿಷವೊಡ್ಡಿ 11 ಲ.ರೂ. ವಂಚನೆ
– ಅಂಕೋಲಾ: ಮರಕ್ಕೆ ಇನೋವಾ ಕಾರು ಡಿಕ್ಕಿ: ಓರ್ವ ಮೃತ
– ವಿಟ್ಲ : ಶಾಲಾ ಕೊಠಡಿಯ ಬಾಗಿಲು ಮುರಿದು ಕಂಪ್ಯೂಟರ್ ಮಾನಿಟರ್ ಕದ್ದ ಕದೀಮರು
-ಸುಳ್ಯ : ರಸ್ತೆಯಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ ನಾಲ್ವರು ಕಾರ್ಮಿಕರಿಗೆ ಗಾಯ
– ಅಜೆಕಾರು :ಲಂಚ ಸ್ವೀಕರಿಸುತ್ತಿದ್ದಾಗಲೇ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ
NAMMUR EXPRESS KARAVALI :
ಮಂಗಳೂರು: ಆನ್ಲೈನ್ ವಂಚನೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ದಿಢೀರ್ ಶ್ರೀಮಂತರಾಗುವ
ಹಪಾಹಪಿಯಲ್ಲಿ ಮೋಸ ಹೋಗುವುದು ಕಡಿಮೆಯಾಗುತ್ತಿಲ್ಲ. ಮಂಗಳೂರಿನ ವ್ಯಕ್ತಿಯೊಬ್ಬರು ಮನೆಯಲ್ಲೇ ಕುಳೀತು ನಿತ್ಯ 3,000 ರೂ. ಗಳಿಸುವ ಆಸೆಗೆ ಬಲಿಬಿದ್ದು ಬರೋಬ್ಬರಿ 11 ಲ.ರೂ. ಕಳೆದುಕೊಂಡಿದ್ದಾರೆ, ಆನ್ಲೈನ್ನಲ್ಲಿ ಪಾರ್ಟ್ಟೈಂ ಉದ್ಯೋಗದ ಆಮಿಷವೊಡ್ಡಿ 10.88 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚಿಸಿದ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಯುಯೇಟ್ ಮೀಡಿಯಾ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ಆ. 26ರಂದು ವಾಟ್ಸ್ ಆ್ಯಪ್ ಸಂದೇಶಕಳುಹಿಸಿದ್ದ. ಆನ್ಲೈನ್ನಲ್ಲಿ ಟಾಸ್ಕ್ ಗಳ ಮೂಲಕ ಪ್ರತಿದಿನ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಸಂದೇಶದಲ್ಲಿ ತಿಳಿಸಿದ್ದ. ಇದನ್ನು ನಂಬಿ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ 1,000 ರೂ.ಗಳಿಂದ 3,000 ರೂ.ಗಳನ್ನು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಹಣ ಜಮೆಯಾಗಿತ್ತು. ಆದರೆ ಆನಂತರವೂ ಹಣ ಹೂಡಿಕೆಗೆ ಅಪರಿಚಿತ ಒತ್ತಾಯಿಸಿದ್ದೆ. ಅದರಂತೆ ದೂರುದಾರರಿಂದ ಹಂತಹಂತವಾಗಿ ಆ.28ರ ವರೆಗೆ ಒಟ್ಟು 10.88 ಲಕ್ಷ ರೂ ವರ್ಗಾಯಿಸಿಕೊಂಡು ಯಾವುದೇ ಮೊತ್ತ ಮರುಪಾವತಿಸದೆ ವಂಚಿಸಿದ್ದಾನೆ.
ಮರಕ್ಕೆ ಇನೋವಾ ಕಾರು ಡಿಕ್ಕಿ: ಓರ್ವ ಮೃತ
ಅಂಕೋಲಾ:ತಾಲೂಕಿನ ಸರಳೇಬೈಲ್ ಬಳಿ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಹೈದ್ರಾಬಾದಿನಿಂದ ಗೆಳೆಯರು ( AP 29 AY 0011 ) ಇನೋವಾ ಕಾರಿನಲ್ಲಿ ಅಂಕೋಲಾ ಮಾರ್ಗವಾಗಿ ಗೋಕರ್ಣ, ಗೋವಾ ಮತ್ತಿತರೆಡೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅಂಕೋಲಾದ ಸರಳೇಬೈಲ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿನ ಮರಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಶಾಲಾ ಕೊಠಡಿಯ ಬಾಗಿಲು ಮುರಿದು ಕಂಪ್ಯೂಟರ್ ಮಾನಿಟರ್ ಕದ್ದ ಕದೀಮರು
ವಿಟ್ಲ: ಶಾಲಾ ಕೊಠಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಂಪ್ಯೂಟರ್ ಮಾನಿಟರ್ ಕಳವುಗೈದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಣಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಕರ್ನಾಟಕ ಪ್ರೌಢಶಾಲೆ ಮಾಣಿ ಮತ್ತುಕರ್ನಾಟಕ ಆಂಗ್ಲಮಾಧ್ಯಮ ಶಾಲೆ ಮಾಣಿ ಇದರ ಸಂಚಾಲಕರಾದ ಇಬ್ರಾಹಿಂ ಕೆ ನೀಡಿದ ದೂರಿನ ಮೇರೆಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕರ್ನಾಟಕ ಪ್ರೌಢ ಶಾಲೆ ಮತ್ತು ಕರ್ನಾಟಕ ಆಂಗ್ಲಮಾಧ್ಯಮ ಶಾಲೆಗೆ ನುಗ್ಗಿದ ಕಳ್ಳರು ಶಾಲಾ ತರಗತಿ ಕೊಠಡಿ ಮತ್ತು ಶಾಲಾ ಆಫೀಸ್ ಕೊಠಡಿಯ ಬಾಗಿಲುಗಳ ಬೀಗವನ್ನು ಮುರಿದು ಒಳಪ್ರವೇಶಿಸಿ ಅಂದಾಜು ರೂ 7000/- ಮೌಲ್ಯದ ಕಂಪ್ಯೂಟರ್ ಮಾನಿಟರನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ರಸ್ತೆಯಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ : ನಾಲ್ವರು ಕಾರ್ಮಿಕರಿಗೆ ಗಾಯ
ಸುಳ್ಯ : ಇಲ್ಲಿಗೆ ಸಮೀಪದ ಅಡ್ಡಾರಿನಲ್ಲಿ ಹೊಟೇಲ್ ಬಳಿ ಇಂದು ಬೆಳ್ಳಂಬೆಳಗ್ಗೆ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರು ಕೆಲಸದ ನಿಮಿತ್ತ ನಿನ್ನೆ ಅಡಾರಿಗೆ ಆಗಮಿಸಿ ಹೋಟೆಲ್ ಎದುರುಗಡೆ ಇರುವ ಅಂಗಡಿಯೊಂದರ ವರಾಂಡದಲ್ಲಿ ಆಶ್ರಯ ಪಡೆದಿದ್ದರು. ಅದರಲ್ಲಿ ನಾಲ್ಕು ಮಂದಿ ಕಾರ್ಮಿಕರು ರಸ್ತೆ ಬದಿ ನಿಂತಿದ್ದರೆನ್ನಲಾಗಿದೆ.
ಇಂದು ಬೆಳಗ್ಗೆ ಹುಣಸೂರು ಕಡೆಯಿಂದ ಬಂದ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸಿ ರಸ್ತೆ ಬದಿ ನಿಂತಿದ್ದ ನಾಲ್ವರು ಕಾರ್ಮಿಕರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಂತಿದ್ದಲಾರಿಗೂ ಡಿಕ್ಕಿಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿಯ ಪ್ರಕಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಲಂಚ ಸ್ವೀಕರಿಸುತ್ತಿದ್ದಾಗಲೇ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ
ಅಜೆಕಾರು : ನಾಡ ಕಛೇರಿಗೆ ಲೋಕಾಯಕ್ತ ಪೊಲೀಸರು ದಾಳಿ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದಾಗಲೇ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಆ. 31 ರಂದು ಸಂಭವಿಸಿದೆ. ಕಂದಾಯ ಇಲಾಖಾ ಸಿಬ್ಬಂದಿ ನಿಜಾಮ್ ಎಂಬವವರು ಸಂತತಿ ನಕ್ಷೆಯ ಕೆಲಸಕ್ಕೆ ಲಂಚ ಸ್ವೀಕರಿಸುವ ವೇಳೆ ಉಡುಪಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಸದ್ಯ ನಾಡ ಕಛೇರಿಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ