ತಿಂಗಳ ಅಂತ್ಯದವರೆಗೂ ಕರಾವಳಿಯ ಪ್ರವಾಸ ಕಷ್ಟ!
– ವಿವಿಧ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ
– ಮಳೆ ಹೆಚ್ಚುವ ಭೀತಿ ಹಿನ್ನೆಲೆ ನಿರ್ಧಾರ
NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಭೇಟಿಗೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧವನ್ನು ಆಗಸ್ಟ್ ಅಂತ್ಯದವರೆಗೂ ವಿಸ್ತರಿಸಿದೆ. ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ನಡೆದ ದುರ್ಘಟನೆಯ ಅನಂತರದಲ್ಲಿ ಬೀಚ್ ಸಹಿತ ಜಲಪಾತ ಹಾಗೂ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಇದೀಗ ಉಡುಪಿ ಜಿಲ್ಲಾದ್ಯಂತ ಮಳೆ ಕಡಿಮೆಯಾಗಿದ್ದರೂ ನಿರ್ಬಂಧವನ್ನು ವಾಪಸ್ ಪಡೆದಿಲ್ಲ. ಈ ತಿಂಗಳ ಅಂತ್ಯದವರೆಗೂ ನಿರ್ಬಂಧ ಇರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಳೆಗಾಲದಲ್ಲಿ ಯಾವಾಗ ಬೇಕಾದರೂ ಮಳೆಯ ಪ್ರಮಾಣ ಹೆಚ್ಚಾಗಬಹುದು. ನಿರ್ಬಂಧ ವಾಪಸ್ ಪಡೆದ ಅನಂತರದಲ್ಲಿ ಪುನಃ ಪರಿಸ್ಥಿತಿ ನಿಯಂತ್ರಿಸುವುದು ತತ್ಕ್ಷಣದಲ್ಲಿ ಕಷ್ಟವೂ ಆಗಬಹುದು. ಹೀಗಾಗಿ ಮಾಸಾಂತ್ಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ನಿರ್ಬಂಧ ತೆರವುಗೊಳಿಸುವ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.