ಟಾಪ್ ನ್ಯೂಸ್ ಕರಾವಳಿ
ಮೊಬೈಲ್ ಬಳಕೆ ಬೇಡ ಎಂದಿದಕ್ಕೆ ಇಬ್ಬರು ಸಾವು!
– ಬಾವಿಗೆ ಹಾರಿದ ಪಿಯುಸಿ ವಿದ್ಯಾರ್ಥಿ: ನೇಣು ಬಿಗಿದುಕೊಂಡ 14ರ ಬಾಲಕಿ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಸಾವು
– ಛೇ… ಎಂಥಾ ಕಾಲ ಬಂತು ಸಾರ್
NAMMUR EXPRESS NEWS
ಮಂಗಳೂರು: ಮೊಬೈಲ್ ಬಳಕೆಯ ಬಗ್ಗೆ ಹೆತ್ತವರು ಗದರಿಸಿದ್ದಕ್ಕೆ ಇಬ್ಬರು ಅಪ್ರಾಪ್ತ ಮಕ್ಕಳು ಸಾವಿಗೆ ಶರಣಾದ ಪ್ರತ್ಯೇಕ ಘಟನೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಪಿಯುಸಿ ವಿದ್ಯಾರ್ಥಿ ಪ್ರಥಮೇಶ್ ಬ್ಯಾಗ್ ಸಹಿತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಕರಾಯದಲ್ಲಿ ನೀಲಮ್ ಎಂಬ ಜಾರ್ಖಂಡ್ ಮೂಲದ ಬಾಲಕಿ ನೇಣು ಬಿಗಿದು ಸಾವನ್ನಪ್ಪಿದ್ದಾಳೆ.
ಬಾವಿಗೆ ಹಾರಿದ ಪಿಯುಸಿ ವಿದ್ಯಾರ್ಥಿ!
ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಹಾಗು ಅಂಜಾರು ಪೊಲೀಸ್ ಕ್ವಾಟ್ರಸ್ ಬಳಿಯ ನಿವಾಸಿ ಪ್ರಥಮೇಶ್ (17) ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಚಾಳಿ ಕಡಿಮೆ ಮಾಡಲು ಮನೆಯವರು ಮೊಬೈಲ್ ತೆಗೆದಿಟ್ಟಿದ್ದರು.
ಕಾಲೇಜಿಗೆಂದು ತೆರಳಿದ್ದ ವಿದ್ಯಾರ್ಥಿ, ಅತ್ತ ಕಾಲೇಜಿಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದ. ಸೋಮವಾರ ಎಷ್ಟು ಹುಡುಕಿದರೂ ಹುಡುಗ ಸಿಕ್ಕಿರಲಿಲ್ಲ. ಮಂಗಳವಾರ ಬೆಳಗ್ಗೆ ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜಿನ ಸಮೀಪ ಜನವಸತಿ ರಹಿತ ಬಾವಿಯಲ್ಲಿ ಶಾಲಾಬ್ಯಾಗ್ ತೇಲುತ್ತಿರುವ ಮಾಹಿತಿ ಲಭಿಸಿತ್ತು. ಪೊಲೀಸರು ಹುಡುಕಾಡಿ ಬಾವಿಯಿಂದ ವಿದ್ಯಾರ್ಥಿಯ ಮೃತದೇಹ ಹೊರ ತೆಗೆದಿದ್ದಾರೆ.
ನೇಣು ಬಿಗಿದುಕೊಂಡು 14ರ ಬಾಲಕಿ!
ಮೊಬೈಲ್ನಲ್ಲಿ ವಿಡಿಯೋ ಕರೆ ಮಾಡಿ ಮಾತನಾಡುವುದನ್ನು ಆಕ್ಷೇಪಿಸಿದ ತಾಯಿಯ ಮೇಲೆ ಮುನಿಸಿಕೊಂಡ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.
ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಜಾರ್ಖಂಡ್ ರಾಜ್ಯದ ಕುಟುಂಬದ ಬಾಲಕಿ ನೀಲಮ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಂಡ್ನ ಲಾತೆಹಾರ್ ಜಿಲ್ಲೆಯ ಜಲ್ತಾ ಪರ್ಸಾರಿ ಲೆಡ್ನ ನಿವಾಸಿಯಾಗಿರುವ ಸರ್ಜು ಬುಯ್ಯಾನ್ ಎಂಬವರು ತನ್ನ ಪತ್ನಿ, ಮಗಳೊಂದಿಗೆ ವಾರದ ಹಿಂದೆ ಕರಾಯದ ಕೊಂಬೆಟ್ಟಿ ಮಾರು ಎಂಬಲ್ಲಿ ಜಗದೀಶ್ ಸರಳಾಯ ಎಂಬವರ ತೋಟದ ಕೆಲಸಕ್ಕೆ ಆಗಮಿಸಿದ್ದರು.
ಭಾನುವಾರ ರಾತ್ರಿ 7.30ರ ಸುಮಾರಿಗೆ ತೋಟದ ಮಾಲೀಕರು ಒದಗಿಸಿದ ವಾಸ್ತವ್ಯದ ಕೋಣೆಯಲ್ಲಿ ನೀಲಮ್ ಮೊಬೈಲ್ನಲ್ಲಿ ಸಂಬಂಧಿಕಳೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದಳು. ಇದಕ್ಕೆ ತಾಯಿ ಆಕ್ಷೇಪಿಸಿ, ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಸಿಟ್ಟಾದ ಬಾಲಕಿ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.