ಕರಾವಳಿಯಲ್ಲಿ ಮಳೆಗೆ ಮತ್ತಿಬ್ಬರು ಬಲಿ!
– ಮಳೆಗೆ ಭೀಕರ ಅಪಘಾತ: ಒಬ್ಬ ವ್ಯಕ್ತಿ ಸಾವು; ಇಬ್ಬರ ಸ್ಥಿತಿ ಗಂಭೀರ
– 20 ವರ್ಷದ ವಿದ್ಯಾರ್ಥಿನಿ ವಿದ್ಯುತ್ ಶಾಕ್ಗೆ ಬಲಿ
– ಸಿಎ ಓದುತ್ತಿದ್ದ ಆಶ್ನಿ ಶೆಟ್ಟಿ ಮನೆಯ ಗದ್ದೆಯಲ್ಲಿ ದಾರುಣ ಸಾವು
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಬೆಳಗ್ಗಿನಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಳೆ ಪರಿಣಾಮವಾಗಿ ಸದ್ಯಕ್ಕೆ ಒಂದೇ ದಿನ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಶುಕ್ರವಾರ ಮುಂಜಾನೆ ಮಂಗಳೂರು ತಾಲೂಕಿನ ಗುರುಪುರದಲ್ಲಿ 20 ವರ್ಷದ ವಿದ್ಯಾರ್ಥಿನಿ ವಿದ್ಯುತ್ ಶಾಕ್ಗೆ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಸಂಚರಿಸುವ ಹೆದ್ದಾರಿಯಲ್ಲಿ ಪುಂಜಾಲಕಟ್ಟೆಯ ಬಳಿ ಲಾರಿಯೊಂದು ಪಲ್ಟಿಯಾಗಿ ಒಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಜತೆಗೆ ಲಾರಿ ಅಡಿಗೆ ಸಿಲುಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿಯನ್ನು ಫರಂಗಿಪೇಟೆಯ ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ. ಲಾರಿಯು ಶಾಮಿಯಾನವನ್ನು ತುಂಬಿಕೊಂಡು ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದ ವೇಳೆ, ಪುಂಜಾಲಕಟ್ಟೆಯ ಶ್ರೀ ರಾಮಾಂಜನೇಯ ಮಂದಿರದ ಬಳಿ ತಿರುವಿನಲ್ಲಿ ಲಾರಿ ಪಲ್ಟಿಯಾಗಿದೆ. ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿ ಕೆಳಗೆ ಸಿಲುಕಿಕೊಂಡಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವುದಕ್ಕೆ ನೆರವಾಗಿದ್ದಾರೆ.
ಮಂಗಳೂರಿನ ಗುರುಪುರದಲ್ಲಿ ವಿದ್ಯುತ್ ಶಾಕ್ಗೆ ಮತ್ತೊಂದು ಬಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಪಾರಂಭವಾದ ಒಂದೆರಡು ತಿಂಗಳಿನಿಂದೀಚೆಗೆ ಮೂವರು ವ್ಯಕ್ತಿಗಳು ವ್ಯಕ್ತಿಗಳು ವಿದ್ಯುತ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡ ಘಟನೆ ಬೆನ್ನಲ್ಲೇ ಶುಕ್ರವಾರ ಜಿಲ್ಲೆಯಲ್ಲಿ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿ ವಿದ್ಯಾರ್ಥಿನಿಯೊಬ್ಬರು ಪ್ರಾಣ ಕಳೆದುಕೊಂಡಿರುವುದು ವಿಪರ್ಯಾಸ. ಮಂಗಳೂರು ತಾಲೂಕಿನ ಗುರುಪುರದ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 7 ಗಂಟೆಗೆ ಈ ದುರ್ಘಟನೆ ನಡೆದಿದೆ. ಕಲ್ಲಕಲಂಬಿ ನಿವಾಸಿ ಹರೀಶ್ ಎಂಬವರ ಪುತ್ರಿ ಆಶ್ನಿ ಶೆಟ್ಟಿ(20) ಮೃತ ಯುವತಿ. ಆಶ್ನಿ ಸಿಎ ಓದುತ್ತಿದ್ದು, ಮನೆಯಿಂದ ದನ ಕಟ್ಟಲು ಗದ್ದೆಗೆ ಹೋದಾಗ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ವಿದ್ಯುತ್ ಶಾಕ್ನಿಂದ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಮೆಸ್ಕಾಂನವರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ.