ಹೆಬ್ರಿಯಲ್ಲಿ ನೀರಲ್ಲಿ ಮುಳುಗಿ ವೈದ್ಯ ಸೇರಿ ಇಬ್ಬರು ಸಾವು.!
– ಈಜಲು ಹೋಗಿ ಓರ್ವ ನೀರುಪಾಲು: ಸ್ನೇಹಿತನ ರಕ್ಷಣೆ ಮಾಡಲು ಹೋಗಿ ಮೃತಪಟ್ಟ ವೈದ್ಯ
– ಶೃಂಗೇರಿ ವೈದ್ಯ ಸಾವು: ಏನಿದು ಘಟನೆ..?
NAMMUR EXPRESS NEWS
ಶೃಂಗೇರಿ/ಹೆಬ್ರಿ: ಹೆಬ್ರಿ ಸಮೀಪ ಸೀತಾನದಿ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ವೈದ್ಯ ಸೇರಿದಂತೆ ಇಬ್ಬರು ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಶಿವಮೊಗ್ಗ ಮೂಲದ, ಶೃಂಗೇರಿಯ ಧನ್ವಂತರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ದೀಪಕ್(34) ಹಾಗೂ ಶಿವಮೊಗ್ಗದ ಉದ್ಯಮಿ ಸಿನು ಡ್ಯಾನಿಯಲ್ ಮೃತರು. ಡಾ. ದೀಪಕ್, ಸಿನು ಡ್ಯಾನಿಯಲ್ ಹಾಗೂ ಡಾ. ವಿನ್ಸೆಂಟ್ ಮೋಹನ್ ಮೂವರು ಆಪ್ತರಾಗಿದ್ದರು.
ಭಾನುವಾರ ಒಟ್ಟಿಗೆ ಹೆಬ್ರಿಯಲ್ಲಿ ಊಟ ಮಾಡಿದ್ದಾರೆ. ಬಳಿಕ ಸೋಮೇಶ್ವರ ಕಡೆ ಹೋಗುವಾಗ ಸೀತಾನದಿಯಲ್ಲಿ ಸ್ನಾನಕ್ಕಿಳಿದಿದ್ದಾರೆ. ಸಿನು ಡ್ಯಾನಿಯಲ್ ಸ್ನಾನ ಮಾಡುತ್ತಾ ಮುಂದೆ ಹೋಗಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಡಾ. ದೀಪಕ್ ನೀರಿಗೆ ಹಾರಿ ಅವರನ್ನು ರಕ್ಷಿಸಲು ಮುಂದಾಗಿದ್ದು ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ. ಡಾ. ವಿನ್ಸೆಂಟ್ ಸ್ನೇಹಿತರನ್ನು ರಕ್ಷಿಸಲು ನದಿಗೆ ಧುಮುಕಿದರೂ ಈಜು ಬಾರದ ಕಾರಣ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅಲ್ಲಿದ್ದ ಮರದ ಬೇರೊಂದನ್ನು ಹಿಡಿದು ಮೇಲೆ ಬಂದಿದ್ದಾರೆ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.