ಕರಾವಳಿ ಟಾಪ್ ನ್ಯೂಸ್
ಈಜಲು ಹೋದ ಇಬ್ಬರು ಯುವಕರು ನೀರುಪಾಲು!
– ಮರವೂರು ಫಲ್ಗುಣಿ ನದಿಯಲ್ಲಿ ಘಟನೆ: ಶೋಧ ಕಾರ್ಯ
* ವಿಟ್ಲ: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಯ ಅಂಗಡಿಗೆ ಬೆಂಕಿ!
* ಮೂಡುಬಿದಿರೆ:ರಸ್ತೆ ಹೊಂಡಗಳಿಗೆ ಬಾಳೆಗಿಡ ನೆಟ್ಟು ಆಕ್ರೋಶ!
* ಕೈಕಂಬ:ಸ್ಕೂಟರ್ ಸೀಟ್ ಕೆಳಗಡೆ ಹಾವು,ಬೆರಳಿಗೆ ಕಚ್ಚಿತು!
* ಸುಳ್ಯ:ಬೈಕ್ ಮೇಲೆ ಜಿಗಿದ ಕಡವೆ, ಸವಾರನಿಗೆ ಗಾಯ
NAMMUR EXPRESS NEWS
ಮಂಗಳೂರು: ಈಜಲು ತೆರಳಿದ್ದ ಇಬ್ಬರು ಯುವಕರು ಮರವೂರು ಫಲ್ಗುಣಿ ನದಿಯಲ್ಲಿ ನೀರುಪಾಲಾದ ಘಟನೆ ಭಾನುವಾರ ಸಂಭವಿಸಿದೆ.
ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆಯ ಬಳಿಯ ಫಲ್ಗುಣಿ ನದಿಯಲ್ಲಿ ನಾಲ್ವರು ಯುವಕರು ಭಾನುವಾರ ಸಾಯಂಕಾಲ 4 ಗಂಟೆಗೆ ಈಜಲು ತೆರಳಿದ್ದರು. ಈ ವೇಳೆ ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಕೋಡಿಕಲ್ ನಿವಾಸಿಗಳಾದ ಅರುಣ್(19) ಹಾಗೂ ದೀಕ್ಷಿತ್(18) ಈಜಿ ಪಾರಾಗಿದ್ದಾರೆ. ನಾಪತ್ತೆಯಾದವರ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಆಗಮಿಸಿ, ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ವಿಟ್ಲ: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಯ ಅಂಗಡಿಗೆ ಬೆಂಕಿ!
ವಿಟ್ಲ: ಅಂಗಡಿಗೆ ತೆರಳಿದ್ದ ಅಪ್ರಾಪ್ತ ಬಾಲಕಿಗೆ ಅನ್ಯಕೋಮಿನ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ 40 ವರ್ಷ ಪ್ರಾಯದ ಅಶ್ರಫ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯು ಅಂಗಡಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿರುವುದರಿಂದ ಆ ಅಂಗಡಿಯ ವ್ಯಾಪಾರ ಪರ ಪರವಾನಿಗೆಯನ್ನು ರದ್ದುಗೊಳಿಸುವಂತೆ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಮನವಿ ನೀಡಿದ್ದರು.
ಇದೀಗ ಆರೋಪಿ ಅಶ್ರಫ್ ನ ಗೂಡಂಗಡಿಗೆ ಯಾರೋ ಕಿಡಿಗೇಡಿಗಳು ತಡರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
* ಮೂಡುಬಿದಿರೆ:ಹದಗೆಟ್ಟ ರಸ್ತೆ,ರಸ್ತೆ ಹೊಂಡಗಳಿಗೆ ಬಾಳೆಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ!
ಮೂಡುಬಿದಿರೆ: ಬೆಮ್ಮಣ್-ಮೂಡುಬಿದಿರೆ ಸಂಪರ್ಕ ರಸ್ತೆಯ ಹಾದಿಯಲ್ಲಿರುವ ಪುತ್ತಿಗೆ ಮತ್ತು ಪಾಲಡ್ಕ ರಸ್ತೆಯ ದುರವಸ್ಥೆಯಿಂದ ವಾಹನ ಸಹಿತ ಜನ ಸಂಚಾರಕ್ಕೆ ಕಷ್ಟ ಸಾಧ್ಯವಾಗಿದ್ದು ದುರಸ್ತಿ ಮಾಡಲು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರಿಂದ ಪುತ್ತಿಗೆ ಗುಡ್ಡೆಯಂಗಡಿ ಬಸ್ ನಿಲ್ದಾಣದಿಂದ ಪಾಲಡ್ಕ ಮಾವಿನಕಟ್ಟೆಯವರೆಗೆ ಗ್ರಾಮಸ್ಥರು ಬೃಹತ್ ಪ್ರತಿಭಟನಾ ಜಾಥ ನಡೆಸಿದರು. ಪುತ್ತಿಗೆ, ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ಒಗ್ಗಟ್ಟಾಗಿ ಪ್ರತಿಭಟನೆ ಮಾಡಿದ್ದು, ಸಂಬಂಧಪಟ್ಟವರು ಕೂಡಲೇ ಸ್ಪಂದಿಸುವಂತೆ ಆಗ್ರಹಿಸುತ್ತೇವೆ ಎಂದರು. ರಸ್ತೆಯಲ್ಲಿದ್ದ ಹೊಂಡಗಳಿಗೆ ಬಾಳೆಗಿಡಗಳನ್ನು ನೆಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದ ಗ್ರಾಮಸ್ಥರು ರಸ್ತೆಯನ್ನು ಆದಷ್ಟು ಬೇಗ ಸರಿಪಡಿಸಿಕೊಡುವಂತೆ ಆಗ್ರಹಿಸಿದರು.
* ಕೈಕಂಬ:ಸ್ಕೂಟರ್ ಸೀಟ್ ಕೆಳಗಡೆ ಹಾವು,ಬೆರಳಿಗೆ ಕಚ್ಚಿ ಗಾಯ!
ಕೈಕಂಬ: ದ್ವಿಚಕ್ರ ವಾಹನದ ಸೀಟಿನ ಕೆಳಗಡೆ ನುಸುಳಿ ಕೂತಿದ್ದ ಕನ್ನಡಿ ಹಾವು ವಾಹನ ಸವಾರನಿಗೆ ಕಚ್ಚಿದ ಘಟನೆ ಕುಪ್ಪೆಪದವಿನಲ್ಲಿ ರಾತ್ರಿ ನಡೆದಿದೆ. ಕುಪ್ಪೆಪದವಿನನಲ್ಲಿ ಸೈಬರ್ ಸೆಂಟರ್ ನಡೆಸುತ್ತಿರುವ ಇಮ್ತಿಯಾಜ್ ಅವರು ಹಾವು ಕಡಿತಕ್ಕೆ ಒಳಗಾದವರು. ಅವರು ಸೆ. 27ರಂದು ರಾತ್ರಿ ಕೆಲಸ ಮುಗಿಸಿ ಮಸೀದಿಗೆ ಹೋಗಿ ಅಲ್ಲಿಂದ ಮನೆಗೆ ತೆರಳಲು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಳಿ ಬಂದು ಸ್ಕೂಟರ್ನ ಸೀಟ್ ತೆರೆದು ಕಾಗದ ಪತ್ರಗಳನ್ನು ಇಡುವ ಸಂದರ್ಭದಲ್ಲಿ ಸೀಟಿನ ಕೆಳಗಡೆಯಿದ್ದ ಹಾವು ಬೆರಳಿಗೆ ಕಚ್ಚಿದ್ದು,ಇಮ್ತಿಯಾಜ್ ಅವರನ್ನು ತತ್ಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
* ಬೈಕ್ ಮೇಲೆ ಜಿಗಿದ ಕಡವೆ: ಸವಾರನ ಭುಜಕ್ಕೆ ತೀವ್ರ ಗಾಯ!
ಸುಳ್ಯ: ಪಂಜ – ಗುತ್ತಿಗಾರು ರಸ್ತೆಯ ಜಳಕದಹೊಳೆ ಎಂಬಲ್ಲಿ ಸೆ. 27ರಂದು ರಾತ್ರಿ ಕಡವೆಯೊಂದು ಬೈಕ್ ಮೇಲೆ ಜಿಗಿದು ಸವಾರ ಬೇರ್ಯ ತಿರುಮಲೇಶ್ವರ ಗಾಯಗೊಂಡಿದ್ದಾರೆ.
ಪಂಜ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಜ, ಸುಬ್ರಹ್ಮಣ್ಯ ಪರಿಸರದ ಅರಣ್ಯ ಪ್ರದೇಶಗಳಲ್ಲಿ ಕಡವೆ, ಕಾಡುಕೋಣ, ಕಾಡಾನೆ ಇನ್ನಿತರ ಕಾಡುಪ್ರಾಣಿಗಳು ಆಗಾಗ್ಗೆ ಕಾಣಿಕೊಳ್ಳುತ್ತಿವೆ. ಕೃಷಿ ತೋಟಕ್ಕೂ ಲಗ್ಗೆ ಇಡುತ್ತಿವೆ. ಕಾಡುಕೋಣ, ಕಡವೆ ರಸ್ತೆಗೆ ಜಿಗಿದು ರಸ್ತೆ ದಾಟುವುದು ಕೆಲವೊಮ್ಮೆ ಕಂಡುಬರುತ್ತದೆ.
ಅವರ ಕೈ ಕಾಲು, ಭುಜದ ಭಾಗಕ್ಕೆ ತೀವ್ರ ಗಾಯವಾಗಿದ್ದು ಕಡಬದ ಆಸ್ಪತ್ರೆಗೊಯ್ಯಲಾಗಿದೆ.