ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನೆನಪು ಮಾತ್ರ!
– ಹೃದಯಾಘಾತದಿಂದ ಪುತ್ತೂರಿನಲ್ಲಿ ಇಂದು ನಿಧನ
– ಸ್ತ್ರೀ ವೇಷಧಾರಿಯಾಗಿ ಯಕ್ಷಪ್ರಿಯರನ್ನು ರಂಜಿಸಿದ್ದ ಕುಂಬ್ಳೆ
NAMMUR EXPRESS NEWS
ಧರ್ಮಸ್ಥಳ ತಿರುಗಾಟ ಮೇಳದಲ್ಲಿ ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸ್ತ್ರೀ ವೇಷಧಾರಿಯಾಗಿ ಯಕ್ಷಪ್ರಿಯರನ್ನು ರಂಜಿಸಿದ್ದ ಕುಂಬ್ಳೆ ಶ್ರೀಧರ ರಾವ್ ಅವರು ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಪುತ್ತೂರಿನ ನೆಕ್ಕಿಲಾಡಿಯ ತಮ್ಮ ನಿವಾಸದಲ್ಲಿ ಇರುವಾಗ 76 ವರ್ಷದ ಕುಂಬ್ಳೆ ಶ್ರೀಧರ ರಾವ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ.
ಶ್ರೀಧರ ರಾವ್ ಅವರು, ಕಾಸರಗೋಡಿನ ಕುಂಬ್ಳೆಯಲ್ಲಿ 1948ರಲ್ಲಿ ಜನಿಸಿದ್ದರು. ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕಲಾವಿದರಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಅದರಲ್ಲಿಯೂ ಧರ್ಮಸ್ಥಳ ಮೇಳವೊಂದರಲ್ಲೇ ಅವರು ಸುಮಾರು 50 ವರ್ಷಗಳ ಕಾಲ ವೇಷಧಾರಿಯಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಧರ್ಮಸ್ಥಳ ದೇವಿ ಮಹಾತ್ಮೆಯ ಅನ್ನು ದೇವಿ, ಈಶ್ವರ, ಸೀತಾ ಪರಿತ್ಯಾಗದ ಸೀತೆ, ಲಕ್ಷ್ಮಣ, ಸುದರ್ಶನ ವಿಜಯದ ಲಕ್ಷ್ಮಿ, ವಿಷ್ಣು ದಮಯಂತಿ ಸ್ವಯಂವರ ದಮಯಂತಿ, ಭೀಷ್ಮ ವಿಜಯದ ಅಂಬೆ, ದೇವಿ ಮಹಾತ್ಮೆಯ ದೇವಿ ಮೊದಲಾದ ಪಾತ್ರಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಕೂಡ ಅವರಿಗೆ ಸಂದಿದೆ. ಶ್ರೀಧರ ರಾವ್ ಅವರು ದಾಕ್ಷಾಯಿಣಿ, ಸುಭದ್ರೆ, ದ್ರೌಪದಿ, ಅಮ್ಮುದೇವಿ ಮುಂತಾದ ಸ್ತ್ರೀ ಪಾತ್ರಗಳಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಇನ್ನೊಂದೆಡೆ, ಇವರು ತಾಳಮದ್ದಳೆ ಅರ್ಥಧಾರಿಯೂ ಆಗಿ ಕಲಾಸೇವೆಯಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡಿದ್ದರು. ಕಲಾವಿದನ ಸಾವಿಗೆ ನಮ್ಮೂರ್ ಎಕ್ಸ್ ಪ್ರೆಸ್ ಶ್ರದ್ದಾಂಜಲಿ ಅರ್ಪಿಸುತ್ತದೆ.