ಕಾರ್ಕಳ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ!
– ಮೂವರು ಮಹಿಳೆಯರಿಗೆ ಗಾಯ; ಒಬ್ಬರ ಸ್ಥಿತಿ ಗಂಭೀರ
– ಮರುಕಳಿಸಿದ ವೇಣೂರು ಘಟನೆ: ಪೊಲೀಸ್ ತನಿಖೆ!
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆಯ ಕಜೆ ಎಂಬ ಪ್ರದೇಶದಲ್ಲಿ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಮೂವರು ಮಹಿಳೆಯರು ಗಾಯಗೊಂಡಿರುವ ಘಟನೆ ನಡೆದಿದೆ. ಗರ್ನಲ್ ತಯಾರಿಕಾ ಘಟಕ ಇದಾಗಿದ್ದು, ಈ ಸ್ಫೋಟದ ವೇಳೆ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸುಷ್ಮಾ ಎಂದು ಗುರುತಿಸಲಾಗಿದ್ದು, ಅವರಿಗೆ ಆರೋಗ್ಯ ಸ್ಥಿತಿ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಕಾರ್ಕಳ ನಗರ ಠಾಣಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಡಿವೈಎಸ್ಪಿ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣ-ಪುಟ್ಟ ಗಾಯವಾಗಿರುವ ಮಹಿಳೆಯರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಮೂರು ಪ್ರತ್ಯೇಕ ಕಟ್ಟಡಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಗರ್ನಲ್ ತಯಾರಿಸಲಾಗುತ್ತಿತ್ತು. ಒಂದು ತಯಾರಿಕಾ ಘಟಕದಲ್ಲಿ ಬುಧವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಸಿಡಿಮದ್ದು ಸ್ಫೋಟದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಹೊತ್ತಿ ಉರಿದು ಸಂಪೂರ್ಣ ಹಾನಿಯಾಗಿದೆ.
ಮರುಕಳಿಸಿದ ವೇಣೂರು ಘಟನೆ!
ಕೆಲವು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿಯೂ ಇದೇರೀತಿ ಭಾರೀ ಪ್ರಮಾಣದ ಸಿಡಿಮದ್ದು ಸ್ಫೋಟಗೊಂಡು ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಆ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತವು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲ ಸ್ಫೋಟಕ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಅಲ್ಲದೆ ತಾತ್ಕಾಲಿಕವಾಗಿ ಸ್ಫೋಟಕ ತಯಾರಿಕಾ ಘಟಕಗಳನ್ನು ಮುಚ್ಚಿಸಿ ಅಕ್ರಮ ಸ್ಫೋಟಕ ದಾಸ್ತಾನು ಬಗ್ಗೆ ಕಠಿಣ ಕ್ರಮ ಜರುಗಿಸಿತ್ತು. ಆದರೆ, ಇದೀಗ ಉಡುಪಿ ಜಿಲ್ಲೆಯಲ್ಲಿ ಇದೇ ಮಾದರಿಯ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.