ಕಾರ್ಕಳದಲ್ಲಿ ಹಲಸು ಹವಾ..!
– ಉದ್ಯೋಗ ಸೃಷ್ಟಿಯತ್ತ ಹಲಸಿನ ಹಣ್ಣು
– ಹಲಸು ಸಂಸ್ಕರಣಾ ಘಟಕ ಉದ್ಘಾಟನೆ
NAMMUR EXPRESS NEWS
ಕಾರ್ಕಳ : ನಿಟ್ಟೆ ಪಡುಬಿದ್ರೆ ಹೆದ್ದಾರಿಯಲ್ಲಿರುವ ಹಲಸು ಸಂಸ್ಕರಣಾ ಘಟಕವು ಘಟಕವು ಡಾ. ಎ. ಪಿ ಆಚಾರ್ಯ ಅವರ ಕನಸಿನ ಕೂಸಾಗಿದೆ. ಅವರ ಮೂಲಕ ಸುಫಲ ರೈತ ಉತ್ಪಾದಕ ಘಟಕವು ಸುಮಾರು ಮೂರು ವರುಷಗಳ ಕಾಲ ಹಲಸಿನ ಹಣ್ಣಿನ ಬಗ್ಗೆ ಅಧ್ಯಯನ ಮಾಡಿ, ಅದರಿಂದ ತಯಾರಿಸಲಾಗುವ ವಿವಿಧ ಖಾದ್ಯಗಳು ಮತ್ತು ಆರೋಗ್ಯಕ್ಕೆ ಆಗುವ ಉಪಯೋಗಗಳ ಮೂಲಕ, ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು, ಅವರಿಗೆ ಆರ್ಥಿಕವಾಗಿ ಸಹಕಾರಿಯಾಗಲು ಈ ಘಟಕದ ನಿರ್ಮಾಣವಾಗಿದೆ. ಹಲಸು ಬೆಳೆಗಾರರಿಗೆ ಉತ್ತಮ ಆದಾಯ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಂಎಸ್ಎಂಇಯ ಅಧೀನದಲ್ಲಿ ಹಾಗೂ ಧರ್ಮಸ್ಥಳ ಸಿರಿ ಉತ್ಪನ್ನ ಘಟಕದ ಮೂಲಕ ಈ ಸುಫಲ ರೈತ ಉತ್ಪಾದಕ ಘಟಕವು ನಿರ್ಮಾಣ ಗೊಂಡಿರುತ್ತದೆ.
ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಬೆಂಬಲದಿಂದ ಸುಫಲ ರೈತ ಉತ್ಪಾದಕ ಕಂಪನಿ ಆಶ್ರಯದಲ್ಲಿ ಅಟಲ್ ಇಂಕ್ಯುಬೇಷನ್ ಸೆಂಟರ್ ನ ಹಲಸು ಸಂಸ್ಕರಣಾ ಘಟಕ ನಿಟ್ಟೆಯಲ್ಲಿ ಸಿದ್ದಗೊಂಡಿದೆ. ಹಲಸಿನ ಕೃಷಿಯ ಮೂಲಕ ಸಮುದಾಯದ ಸಬಲೀಕರಣ ಉತ್ತೇಜಿಸುವ ನಿಟ್ಟಿನಲ್ಲಿ ಹಲಸು ಸಂಸ್ಕರಣ ಘಟಕ ಕಾರ್ಯಚರಿಸಲಿದೆ. ದಿನಕ್ಕೆ 6 ಸಾವಿರ ಹಲಸು ಸಂಸ್ಕರಣೆ 20 ಟನ್ ಸಂಗ್ರಹ ಸಾಮರ್ಥ್ಯವನ್ನು ಘಟಕ ಹೊಂದಿದೆ. ಬಿಸಿ ನೀರಿನಲ್ಲಿ ಶುಚಿಗೊಳಿಸುವ ಲೆಂಚಿಂಗ್ ಮೆಷಿನ್ ಪಲ್ಟಿoಗ್ ಮೆಷಿನ್, ಹವೆಯಿಂದ ಕಾರ್ಯಚರಿಸುವ ಹಲ್ವಾ ಮೇಕಿಂಗ್ ಮೆಷಿನ್, ಬೃಹತ್ ಬಾಯ್ಲರ್, ಪ್ಯಾಕಿಂಗ್ ಮೆಷಿನ್, ಆಯಿಲ್ ಕಂಟ್ರೋಲರ್, ಬೃಹತ್ ಫ್ರಿಡ್ಜ್, ಬ್ಯಾಕ್ಟೀರಿಯಾ ನಿಯಂತ್ರಿಸುವ ಮೆಷಿನ್ ಹೀಗೆ ಅತ್ಯಾಧುನಿಕ ತಂತ್ರಜ್ಞಾನ, ಸಾಮಾನ್ಯ ಸೌಲಭ್ಯ ಘಟಕ ಹೊಂದಿದೆ.
ಹಲಸು ಹಣ್ಣು ಮಾತ್ರವಲ್ಲದೆ ಇತರ ಹಣ್ಣುಗಳು ಮತ್ತು ತರಕಾರಿಗಳನ್ನು ಸಹ ಸಂಸ್ಕರಿಸುತ್ತದೆ. ಘಟಕವು ಒಂದು ಕೋಟಿ ರೂ ವೆಚ್ಚದಲ್ಲಿ ಕಟ್ಟಡ, ಮೂರು ಕೋಟಿ ರೂ ವೆಚ್ಚದಲ್ಲಿ ವಿವಿಧ ಯಂತ್ರಗಳು ಸೇರಿ ಸುಮಾರು 6.5 ಕೋಟಿ ರೂ ವೆಚ್ಚದಲ್ಲಿ ಸಂಸ್ಕರಣ ಘಟಕ ಚಟುವಟಿಕೆ ಆರಂಭಿಸಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಘಟಕ ಕಾರ್ಯರಾಂಬಿಸುತ್ತಿದ್ದು ಸುಮಾರು ಒಂದು ಸಾವಿರ ಉದ್ಯೋಗ ಸೃಷ್ಟಿಸುವ ಸಾಧ್ಯತೆಗಳಿದ್ದು ಮಹಿಳೆಯರಿಗೆ ವಿಫಲ ಉದ್ಯೋಗಾವಕಾಶಗಳನ್ನು ಕೇಂದ್ರ ಒದಗಿಸಲಿದೆ. ರೈತರಿಗೆ ಆದಾಯ ಹೆಚ್ಚಳ, ಮಾರುಕಟ್ಟೆ ಪ್ರವೇಶ ಸುಧಾರಣೆ, ಸುಸ್ಥಿರ ಕೃಷಿ ಉತ್ತೇಜಿಸಲು ಘಟಕ ಸಹಕಾರಿಯಾಗಿದೆ. ಕರಾವಳಿ ಭಾಗದಲ್ಲಿ ಹಲಸು ಹಣ್ಣುಗಳಿದ್ದು, ಹಲಸು ಸಂಸ್ಕರಣ ಘಟಕಕ್ಕೆ ಅಗತ್ಯವಿರುವ ಹಲಸು ಪೈಕಿ ಶೇ.50 ಅನ್ನು ಉಡುಪಿ, ದ. ಕ ಜಿಲ್ಲೆಯಿಂದ ಸಿಗಲಿದೆ.
ಉಳಿದಂತೆ ರಾಜ್ಯದ ಇತರ ಜಿಲ್ಲೆ, ಪಕ್ಕದ ಕೇರಳ, ತಮಿಳುನಾಡು ಮುಂತಾದ ಕಡೆಗಳಿಂದ ಆಮದು ತರಿಸಿಕೊಳ್ಳಲು ಸಿದ್ಧತೆ ನಡೆಸಿದ್ದು ಹಲಸು ಬೆಳೆಗಾರರ ಸಂಘ ರಚಿಸಲಾಗಿದೆ. ಆರಂಭದಲ್ಲಿ 150 ಪ್ರೊಡಕ್ಟ್ ಉತ್ಪಾದಿಸಲಾಗುತ್ತಿದೆ. ಸಿರಿ ಸಂಸ್ಥೆ ಎಂ ಟಿ ಆರ್ ಮೊದಲಾದ ಬ್ರಾಂಡ್ ಉತ್ಪನ್ನಗಳು ಹಾಗೂ ವಿದೇಶಿ ಕಂಪನಿಗಳ ಜೊತೆ ಮಾರುಕಟ್ಟೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಚಿಪ್ಸ್, ಜ್ಯೂಸ್, ಪಾಯಸ, ಇಡ್ಲಿ, ದೋಸೆ, ಗಟ್ಟಿ, ಪತ್ತೋಳಿ, ಮಾಂಬಳ, ಮುಳಕ, ಗೆಣಸಲೆ, ಬನ್ಸ್, ಶೀರಾ, ಹೋಳಿಗೆ, ಹಪ್ಪಳ ಹೀಗೆ ಹಲವು ಬಗೆಯ ಖಾದ್ಯಗಳನ್ನು ಹಲಸಿನಿಂದ ತಯಾರಿಸಲಾಗುತ್ತಿದೆ. ಬೀಜ ಕೂಡ ಪದಾರ್ಥ, ಖಾದ್ಯ ತಯಾರಿಕೆಗೆ ಬಳಕೆಯಾಗುತ್ತಿದೆ. ನಿಟ್ಟೆ ಸುಫಲ ರೈತ ಉತ್ಪಾದಕ ಮತ್ತು ಹಲಸು ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭವು ಮಾ. 15ರಂದು ನೆರವೇರಿದೆ.