ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ಶ್ರಾವಣ ಸಂಭ್ರಮ
– ನಾಡಿನ ಸಂಪ್ರದಾಯ ಪ್ರತಿನಿಧಿಸಿದ ಮಹಿಳಾ ಕಾರ್ಯಕರ್ತರು
– ಶಾಸಕ ಸುನಿಲ್ ಕುಮಾರ್, ಬೋಳ ಪ್ರಭಾಕರ್ ಕಾಮತ್ ಮೆಚ್ಚುಗೆ
NAMMUR EXPRESS NEWS
ಕಾರ್ಕಳ : ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ರಾಜಕೀಯ ಚಟುವಟಿಕೆಗಳೊಂದಿಗೆ ನಮ್ಮ ಸಂಸ್ಕೃತಿ-ಸಂಪ್ರದಾಯವನ್ನು ಉಳಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ಶಕ್ತಿಕೇಂದ್ರದಿಂದ ಮಹಿಳೆಯರು ಭಾಗವಹಿಸಿರುವುದು ಶ್ಲಾಘನೀಯ. ನಮ್ಮ ಸಾಂಸ್ಕೃತಿಕ ಸಂಗತಿಗಳನ್ನು ಮೆಲುಕು ಹಾಕುವಂತಹ ಶ್ರಾವಣ ಸಂಭ್ರಮ ಅಭಿನಂದನಾರ್ಹ ಎಂದು ಶಾಸಕ ಸುನಿಲ್ ಕುಮಾರ್ ಹರ್ಷ ವ್ಯಕ್ತಪಡಿಸಿದರು. ಅವರು ಸೆ. 1ರಂದು ಕಾರ್ಕಳ ಬಿಜೆಪಿ ಮಹಿಳಾ ಮೊರ್ಚಾ ವತಿಯಿಂದ ಬಂಡೀಮಠದ ರಾಮಕ್ಷತ್ರೀಯ ಸಭಾಭವನದಲ್ಲಿ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪಕ್ಷದ ಹಿರಿಯ ಮುಖಂಡರು, ಉದ್ಯಮಿಗಳು ಆಗಿರುವ ಬೋಳ ಪ್ರಭಾಕರ್ ಕಾಮತ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶಭ ಹಾರೈಸಿದರು.
ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಸಂಧ್ಯಾ ರಮೇಶ್ ಮಾತನಾಡಿ, ಮಹಿಳೆ ಕೇವಲ ಅಡಿಗೆ ಕೋಣೆಗೆ ಮೀಸಲು ಎಂಬ ಒಂದು ಕಾಲ ಘಟ್ಟ ಈಗಿಲ್ಲ, ಅವಳು ಪರಿಣಿತಳು, ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡು ಮುಂಚೂಣಿಯಲ್ಲಿದ್ದಾಳೆ. ಜಾನಪದದ ಸೊಗಡನ್ನು ವಿವಿದ ಶಕ್ತಿಕೇಂದ್ರದ ಮಹಿಳೆಯರು ಉಣಬಡಿಸಿರುವುದು ತುಂಬ ಸಂತಸ ತಂದಿದೆ. ಎಲ್ಲಾ ಕ್ಷೇತ್ರದಲ್ಲೂ ತಾನು ನಿಪುಣಳು ಎಂಬುದನ್ನು ನಮ್ಮ ಮಹಿಳಾ ಮೋರ್ಚಾದ ಸದಸ್ಯೆಯರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ನಮ್ಮ ನೆಲದ ಸಂಸ್ಕೃತಿ, ಹಬ್ಬ ಹರಿದಿನಗಳು, ಪೂರ್ವಜರ ಆಚಾರ ವಿಚಾರಗಳು, ಕಟ್ಟು ಪಾಡುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಅನಿರ್ವಾಯತೆ ಪ್ರಸ್ತುತ ಸಮಾಜಕ್ಕಿದೆ. ಈ ನಿಟ್ಟಿನಲ್ಲಿ ಮಹಿಳೆ ಮೋರ್ಚಾದವರು ಹಬ್ಬಗಳ ಮಾಸ ಶ್ರಾವಣವನ್ನು ಆಧರಿಸಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ದೇಶದ ಸುಭದ್ರತೆಯ ನೆಲೆಯಲ್ಲಿ ಮೋರ್ಚಾದಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.
ವಿವಿಧ ಶಕ್ತಿ ಕೇಂದ್ರದ ಸದಸ್ಯರಿಂದ ಜಾನಪದ ಗೀತೆ, ಜಾನಪದ ನೃತ್ಯ ಹಾಗೂ ದೇಶಭಕ್ತಿ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲ ಕುಂದರ್, ರಾಜ್ಯ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ರವೀಂದ್ರ ಕುಮಾರ್ ಕುಕ್ಕುಂದೂರು ಜಿಲ್ಲಾ ಬಿಜೆಪಿ ವಕ್ತರ ಸತೀಶ್ ಶೆಟ್ಟಿ ುಟ್ಲುಪಾಡಿ, ತಾಲೂಕು ವಕ್ತಾರ ರವೀಂದ್ರ ಮೊಯಿಲಿ, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯಾ ಡಿ. ಬಂಗೇರ ಸ್ವಾಗತಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮೋರ್ಚಾ ನಗರ ಶಕ್ತಿ ಕೇಂದ್ರದ ಮಮತಾ ಸುವರ್ಣ ವಂದಿಸಿದರು.