ಕಾರ್ಕಳ ಟಾಪ್ 3 ನ್ಯೂಸ್
ಕಾರ್ಕಳ ಲಯನ್ಸ್ ಕ್ಲಬ್ ಸಮಾಜ ಸೇವೆ ಹೆಜ್ಜೆ!
– ಅಶಕ್ತರಿಗೆ ನೆರವು: ಆಹಾರದ ಕಿಟ್ ವಿತರಣೆ
ಕಾರ್ಕಳ ಶಂಕರ ಪ್ರತಿಷ್ಠಾನದ ಶೃಂಗೇರಿ ಪ್ರವಾಸ
– ಉಡುಪಿಯ ವಿದ್ಯಾ ಮಾರ್ಗದರ್ಶನದಲ್ಲಿ ನಡೆದ ಭಜನೆ
ಕಾರ್ಕಳದಲ್ಲಿ ಕಳ್ಳರ ಕಾಟ: 10 ಲಕ್ಷ ಮೌಲ್ಯದ ಚಿನ್ನಾಭರಣ ವಶ
– ಬೈಕಿಗೆ ಡಿಕ್ಕಿ ಹೊಡೆದ ಲಾರಿ: ಇಂಜಿನಿಯರ್ ವಿದ್ಯಾರ್ಥಿಗೆ ಗಾಯ
NAMMUR EXPRESS NEWS
ಕಾರ್ಕಳ: ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಲಯನ್ಸ್ ಜಿಲ್ಲೆ 317ಸಿ ಇದರ ಆಶ್ರಯದಲ್ಲಿ ಅಶಕ್ತರಿಗೆ ನೆರವು ನೀಡುವ ದೃಷ್ಟಿಯಿಂದ ಕಾರ್ಕಳ ಲಯನ್ಸ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಇಬ್ಬರಿಗೆ ಆಹಾರ ಕಿಟ್ ವಿತರಿಸಲಾಯಿತು.
ಲಯನ್ಸ್ ನಿಂದ ಜಿಲ್ಲಾ ಗವರ್ನರ್ ಹನೀಫ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಜರುಗಿತು. ಈ ಸಂದರ್ಭದಲ್ಲಿ ಜಿಲ್ಲೆಯ ಮಾಜಿ ಗವರ್ನರ್ ಎನ್. ಎಂ. ಹೆಗ್ಡೆ, ಪ್ರಾಂತ್ಯಾಧ್ಯಕ್ಷ ಹರೀಶ್ ಬೆಳಂಜೆ, ವಲಯಾಧ್ಯಕ್ಷ ಶಾಕೀರ್ ಹುಸೇನ್, ಟಿ. ಜಿ. ಆಚಾರ್ಯ, ಸಂಪುಟ ಸದಸ್ಯರು, ಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ನಿತ್ಯಾನಂದ ಭಂಡಾರಿ ಮತ್ತು ವಿವಿಧ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಂಕೇತಿಕವಾಗಿ ವಿವಿಧ ಕ್ಲಬ್ಬಿನಿಂದ ಆಹಾರ ಕಿಟ್ ಗಳನ್ನು ಅಗತ್ಯವಿರುವವರಿಗೆ ನೀಡಲಾಯಿತು. ಲಯನ್ಸ್ ಹೆಬ್ರಿ ಸಿಟಿ ಕ್ಲಬ್ಬಿನ ಟಿ. ಜಿ. ಆಚಾರ್ಯ ನಿರೂಪಿಸಿ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಅಧ್ಯಕ್ಷೆ ಜ್ಯೋತಿ ರಮೇಶ್ ಧನ್ಯವಾದವಿತ್ತರು.
ಕಾರ್ಕಳ ಶಂಕರ ಪ್ರತಿಷ್ಠಾನದ ಶೃಂಗೇರಿ ಪ್ರವಾಸ
ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳ ಶಂಕರ ಪ್ರತಿಷ್ಠಾನದ ಸೆ.1ರಂದು ಸಂಭ್ರಮಾಚರಣೆ ಪ್ರಯುಕ್ತ ಶೃಂಗೇರಿ ಪ್ರವಾಸ ಕಾರ್ಯಕ್ರಮ ನಡೆಯಿತು.
ಅನಂತಶಯನ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಶೃಂಗೇರಿಗೆ 58 ಜನ ಸದಸ್ಯರು ಗುರುಗಳ ಭೇಟಿಗೆ, ಶೃಂಗೇರಿ ಜಗದ್ಗುರುಗಳಿಗೆ ಮತ್ತು ಶಾರದಾಂಬೆಗೆ ಜಯಕಾರ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆಯನ್ನು ನಡೆಸಿದರು. ಬಜೆಗೋಳಿಯ ಉಮೇಶ್ ರಾವ್ ದಂಪತಿಗಳ ಮನೆಯಲ್ಲಿ ಸದಸ್ಯರಿಗೆ ಉಪಹಾರ ವ್ಯವಸ್ಥೆಯಿದ್ದು, ಉಪಹಾರ ತಯಾರಕರು ನಾಗಭೂಷಣ ಹೆಬ್ಬಾರ್ ಮತ್ತು ಬಳಗದವರಾಗಿದ್ದರು.
ಉಡುಪಿಯ ವಿದ್ಯಾ ಅವರ ಮಾರ್ಗದರ್ಶನದಲ್ಲಿ ನಡೆದ ಭಜನೆ ಒಂದು ಇತಿಹಾಸವನ್ನು ಸೃಷ್ಟಿಸಿತು. ಭಗವದ್ ಭಕ್ತರು ಮೆರೆದ ಸ್ಥಾನಿಕ ಬ್ರಾಹ್ಮಣ ಸಮಾಜ ಸಂಭ್ರಮಿಸುತ್ತಿದ್ದು, ಗುರುಗಳ ಪಾದ ಪೂಜೆ ಯನ್ನು ಭಕ್ತಿಯಿಂದ ನಡೆಸಲಾಯಿತು. ಶೃಂಗೇರಿ ಜಗದ್ಗುರುಗಳ ಪ್ರತಿನಿಧಿಗಳು, ಮಂಗಳೂರಿನ ಸತ್ಯಶಂಕರ ಬೊಲ್ಲಾವರು ಸದಸ್ಯರನ್ನು ಬರಮಾಡಿಕೊಂಡಿದ್ದು, ಗುರು ಬಿಕ್ಷೆ ನಂತರ ಗುರುಗಳಿಂದ ಫಲಮಂತ್ರಾಕ್ಷತೆ ಪಡೆದು ಶಾರದಾಂಬೆಯ ಪ್ರಸಾದ ರೂಪವಾಗಿದ್ದ ಸೀರೆಗಳನ್ನು ಪಡೆದರು.
ಕಾರ್ಕಳದಲ್ಲಿ ಕಳ್ಳರ ಕಾಟ: 10 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಕಾರ್ಕಳ: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಗುರ್ಗಾಲ್ ಗುಡಡೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿ ಲಾಕರ್ ನಲ್ಲಿರಿಸಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮಾಳ ನಿವಾಸಿ ಸಂತೋಷ್, ಟಿ(32) ಬಂಧಿತ ಆರೋಪಿ.
ಈತ ಸುಮಾರು 33 ಪವನ್ ತೂಕದ 10,05,000 ರೂ. ಅಂದಾಜು ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.ಬಂಧಿತ ಆರೋಪಿಯಿಂದ ಕಳವು ಮಾಡಿದ 33 ಪವನ್ ತೂಕದ 10,05,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೈಕಿಗೆ ಡಿಕ್ಕಿ ಹೊಡೆದ ಕಾರು, ಓರ್ವನಿಗೆ ಗಾಯ: ಕಾರ್ಕಳ ತಾಲೂಕು ಅಲೆವೂರು ಗ್ರಾಮದ ಶ್ರೀಜೇಶ್ ಜಿ (24) ಎಂಬವರು ಕಾರ್ಕಳ ತಾಲೂಕು ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ನಲ್ಲಿ ದ್ವಿತೀಯ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದು ದಿನಾಂಕ 02-09-2024 ರಂದು ತನ್ನ ಬೈಕಿನಲ್ಲಿ ಅಲೆವೂರಿನಿಂದ ನಿಟ್ಟೆ ಕಾಲೇಜಿಗೆ ರಾಜ್ಯ ಹೆದ್ದಾರಿಯಲ್ಲಿ ಉಡುಪಿ-ಪಳ್ಳಿ-ಕಾರ್ಕಳ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕೈರಬೆಟ್ಟು ಎಂಬಲ್ಲಿ ತಲುಪುವಾಗ ಎದುರಿನಿಂದ ಅಂದರೆ ಕಾರ್ಕಳ ಕಡೆಯಿಂದ ಪಳ್ಳಿಕಡೆಗೆ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದೊಂದಿಗೆ ಬಿದ್ದ ಶ್ರೀಜೇಶ್ ಜಿ.ಇವನ ಬಲಕೈ ಹಗೂ ಬಲಕಾಲಿಗೆ ರಕ್ತಗಾಯವಾಗಿದ್ದು , ಗಾಯಾಳುವನ್ನು ಕಾರ್ಕಳ ಟಿಎಂಎ ಪೈ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.