ಕಾರ್ಕಳ ಕ್ರಿಯೇಟಿವ್ ಕಾಲೇಜಲ್ಲಿ ಎನ್.ಎಸ್.ಎಸ್ ಘಟಕ ಶುರು
– ಎನ್.ಎಸ್.ಎಸ್ ರಾಜ್ಯ ಸಂಯೋಜನಾಧಿಕಾರಿ ಡಾ. ಗುಬ್ಬಿಗೂಡು ರಮೇಶ್ ಸೇರಿ ಅನೇಕ ಗಣ್ಯರು ಹಾಜರ್
NAMMUR EXPRESS NEWS
ಕಾರ್ಕಳ: ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ನೂತನ ಘಟಕದ ಉದ್ಘಾಟನೆಗೊಂಡಿತು.
ದೇಶಕ್ಕಾಗಿ ನಾವು, ಸೇವೆಗೆ ಸದಾ ಸಿದ್ಧ ಎಂಬ ಘೋಷವಾಕ್ಯದೊಂದಿಗೆ ಕಾರ್ಯಚರಿಸುವ ದೇಶದ ಬಹುದೊಡ್ಡ ಸ್ವಯಂ ಸೇವಕ ಸಂಘಟನೆಯಾದ “ರಾಷ್ಟ್ರೀಯ ಸೇವಾ ಯೋಜನೆ” ಯ ನೂತನ ಘಟಕದ ಉದ್ಘಾಟನೆಯನ್ನು ಎನ್.ಎಸ್.ಎಸ್ ರಾಜ್ಯ ಸಂಯೋಜನಾಧಿಕಾರಿ ಡಾ. ಗುಬ್ಬಿಗೂಡು ರಮೇಶ್ ಸಿ ಜಿ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ಒಂದು ಉತ್ಕೃಷ್ಟವಾದ ಚೇತನ ಶಕ್ತಿಯಿದೆ. ಸಮಾಜಕ್ಕಾಗಿ ನಾವು ಏನನ್ನಾದರೂ ಮಾಡಬೇಕು. ಅದು
ಶಾಶ್ವತವಾಗಿ ಉಳಿಯುವಂತದ್ದಾಗಿರಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಸೇವೆಯೆಂಬ ಮಹಾಯಜ್ಞದಲ್ಲಿ ತೊಡಗಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕರಾದ ರಾಜು ಅವರು ರಾಷ್ಟ್ರೀಯ ಸೇವಾ ಯೋಜನೆಯಿಂದ ಗ್ರಾಮೀಣ ಪ್ರದೇಶ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ. ಇದರಿಂದ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ. ಅಂತಹ ಪುಣ್ಯಕಾರ್ಯದಲ್ಲಿ ನಾವೆಲ್ಲ ಕೈಜೋಡಿಸೋಣ, ಯಾವ ಕೆಲಸವೂ ಕೈಕಟ್ಟಿ ಕುಳಿತರೆ ಮುಂದೆ ಸಾಗುವುದಿಲ್ಲ. ಒಂದೇ ಮನಸ್ಸಿನಿಂದ ಪ್ರಯತ್ನಿಸಿದರೆ ಯಶಸ್ಸು ನಮ್ಮದಾಗುತ್ತದೆ ಎಂದು ಹಿತನುಡಿಗಳನ್ನಾಡಿದರು. ಮಾನ್ಯತೆ ಮತ್ತು ಅನುದಾನ ವಿಭಾಗದ ಸಹಾಯಕ ನಿರ್ದೇಶಕರಾದ ಮೊಹಮ್ಮದ್ ಜಿಯಾಉಲ್ಲಾಖಾನ್ ಮಾತನಾಡಿ ಎನ್.ಎಸ್.ಎಸ್ ನ ಗುರಿ ಮತ್ತು ಉದ್ದೇಶಗಳಾದ ಸೇವೆ ಮತ್ತು ಅರ್ಪಣಾ ಮನೋಭಾವ ಎಲ್ಲ ವಿದ್ಯಾರ್ಥಿಗಳೂ ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಸಹಾಯಕ ನಿರ್ದೇಶಕರಾದ ಆನಂದ ಪಿ ಅವರು ಮಾತನಾಡಿ, ಜಗತ್ತಿನ ಅನೇಕ ಜಟಿಲ ಸಮಸ್ಯೆಗಳಿಗೂ ಪರಿಹಾರವಿದೆ. ವಿದ್ಯಾರ್ಥಿ ದೆಸೆಯಿಂದಲೇ ಭಿನ್ನವಾಗಿ ಆಲೋಚಿಸುವ ಮತ್ತು ನಾಯಕತ್ವಗುಣವನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕರಾದ ಮಾರುತಿ, ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ವಿಭಾಗಾಧಿಕಾರಿ ಶಸವಿತಾ ಎರ್ಮಾಳ್, ದ.ಕ ಜಿಲ್ಲಾ ಉಪನಿರ್ದೇಶಕರಾದ ಸಿ.ಡಿ.ಜಯಣ್ಣ, ಕ್ರೀಡಾ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ , ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಬಿ.ಗಣನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ಒಂದು
ಬಹುಮುಖ್ಯ ಸಂಘಟನಾತ್ಮಕ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಸಂಘಟನಾ ಮನೋಭಾವ, ಪರಸ್ಪರ ಸಹಕಾರ, ಸಹಬಾಳ್ವೆಯನ್ನು ಬೆಳೆಸಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಉಪನ್ಯಾಸಕ ವೃಂದ, ಉಪನ್ಯಾಸಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತಿದ್ದರು. ಉಪನ್ಯಾಸಕ ಲೋಹಿತ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು, ರಾ.ಸೇ.ಯೋ ಯ ಕಾರ್ಯಕ್ರಮಾಧಿಕಾರಿ ಉಮೇಶ್ ವಂದಿಸಿದರು.