ಕಾರ್ಕಳದ ಪರಶುರಾಮ ಮೂರ್ತಿ ನಾಪತ್ತೆ: ಭಾರೀ ಕೋಲಾಹಲ!
– ಶಾಸಕ ಸುನೀಲ್ ಕುಮಾರ್ ವಿರುದ್ಧ ಆಕ್ರೋಶ
– ಕಾಂಗ್ರೆಸ್ ಪ್ರತಿಭಟನೆ: ಏನಿದು ವಿವಾದ…?!
– ಹೊಸ ಪ್ರತಿಮೆ ಮಾಡಲು ಕೊಡಲಾಗಿದೆಯಾ?!
NAMMUR EXPRESS NEWS
ಕಾರ್ಕಳ: ಕಾರ್ಕಳ ಪರಶುರಾಮ ಪ್ರತಿಮೆ ವಿವಾದ ಇದೀಗ ಸ್ಥಳೀಯವಾಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಭಾರೀ ಪ್ರಚಾರದೊಂದಿಗೆ ಲೋಕಾರ್ಪಣೆಗೊಂಡಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕಿನಲ್ಲಿದ್ದ ಪರಶುರಾಮ ವಿಗ್ರಹ ಇದೀಗ ನಾಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ವಿವಾದ ಇದೀಗ ಕಾಂಗ್ರೆಸ್ ಪಾಳಯಕ್ಕೆ ದಾಳವಾಗಿ ಪರಿಣಮಿಸಿದ್ದು, ಸೋಮವಾರ ಕಾರ್ಕಳದಲ್ಲಿ ನೂರಾರು ಕಾರ್ಯಕರ್ತರು ಸುನೀಲ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಮೆ ಕಾಣೆಯಾಗಿದ್ದು ಯಾಕೆ..ಏನಿದು ವಿವಾದ?
ಕಾರ್ಕಳ ತಾಲೂಕಿನ ಬೈಲೂರು ಸಮೀಪ ನಿರ್ಮಾಣ ಮಾಡಲಾದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಶುರುವಾದಾಗಿನಿಂದಲೂ ಒಂದಿಲ್ಲೊಂದು ರೀತಿ ವಿವಾದ ಸೃಷ್ಟಿಯಾಗುತ್ತಾ ಬಂದಿದೆ. ಇದೀಗ ಪರಶುರಾಮನ ವಿಗ್ರಹ ಮಾಯವಾಗಿದ್ದು ಪಾದ ಮತ್ತು ಕಾಲು ಮಾತ್ರ ಉಳಿದಿದೆ. ವಿಗ್ರಹದ ಸೊಂಟದ ಮೇಲ್ಬಾಗ ಕಾಣೆಯಾಗಿದೆ.
ಪರಶುರಾಮನ ವಿಗ್ರಹ ಸ್ಥಾಪನೆ ಬಳಿಕ ಮೂರ್ತಿಯ ಗುಣಮಟ್ಟದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಮೂರ್ತಿ ನೈಜತೆಯನ್ನು ಬಹಿರಂಗ ಪಡಿಸುವಂತೆ ಸಮಾನ ಮನಸ್ಕರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಅಷ್ಟೆ ಅಲ್ಲ, ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಪರಶುರಾಮ ವಿಗ್ರಹ ನಾಪತ್ತೆಯಾಗಿದೆ ಎಂಬ ದೂರು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದೆ.
ರಾಜಕೀಯ ದಾಳವಾದ ಪರಶುರಾಮ!
ಪರಶುರಾಮ ಪ್ರತಿಮೆಯಲ್ಲಿ ದ್ರೋಣ್ ಕ್ಯಾಮೆರಾ ಮೂಲಕ ಮೂರ್ತಿ ಮಾಯವಾಗಿರುವ ವಿಷಯ ಬಹಿರಂಗವಾಗಿದೆ. ಮೂರ್ತಿ ಹುಡುಕಿಕೊಡುವಂತೆ ದಿವ್ಯ ನಾಯಕ್ ಎಂಬವರು ನಗರ ಠಾಣೆಯ ಮೆಟ್ಟಿಲು ಏರಿದ್ದಾರೆ. ಮತ್ತೊಂದೆಡೆ ಫೈಬರ್ ಪ್ರತಿಮೆ ಸ್ಥಾಪಿಸಿ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿ, ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾರ್ಕಳ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಹಲವು ಅನುಮಾನ…!
ಥೀಮ್ ಪಾರ್ಕ್ 11.54 ಕೋಟಿ ರೂಗಳ ಯೋಜನೆಯಾಗಿದ್ದು ಅದರಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಪರಶುರಾಮನ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡುವುದೆಂದು ನಿರ್ಧಾರ ಆಗಿತ್ತು. ಕೆಂಗೇರಿಯ ಪ್ರತಿಮೆ ತಯಾರಿ ಸಂಸ್ಥೆಯೊಂದಕ್ಕೆ ಇದರ ಕಾಂಟ್ರಾಕ್ಟ್ ನೀಡಲಾಗಿತ್ತು.ಆದರೆ ಕಾಂಟ್ರಾಕ್ಟ್ ದಾರರಿಗೆ ಕೇವಲ 1 ಕೋಟಿ ರೂ ಅಷ್ಟೇ ಪಾವತಿಯಾಗಿದ್ದರಿಂದ ಅವರು ಅರ್ಧ ಮೂರ್ತಿಯನ್ನಷ್ಟೇ ನಿರ್ಮಿಸಿಕೊಟ್ಟಿದ್ದು, ಉಳಿದ ಭಾಗವನ್ನು ತರಾತುರಿಯಲ್ಲಿ ಫೈಬರ್ ನಿಂದ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗಷ್ಟೇ ಇಲ್ಲಿಗೆ ಭೇಟಿ ನೀಡಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಷಯ ತಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸಿಬಿಐ ತನಿಖೆಗೆ ಹೋರಾಟಗಾರರ ಪಟ್ಟು!
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಗರಣ ಸಿಬಿಐ ತನಿಖೆಗೆ ಒಪ್ಪಿಸುವಂತೆ ಉಡುಪಿ ಜಿಲ್ಲಾಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ. ಪರಶುರಾಮನ ಮೂರ್ತಿಯನ್ನು ಕಂಚಿನಮೂರ್ತಿ ಎಂದು ಸುಳ್ಳು ಕಥೆ ಕಟ್ಟಿ ಪೈಬರ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಈಗ ಹಗರಣ ಬೆಳಕಿಗೆ ಬರುತ್ತಿದ್ದಂತೆ ಪೈಬರ್ ಮೂರ್ತಿಯನ್ನು ಬದಲಾಯಿಸಿ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹೊರಟ, ಇದರಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಸಂಬಂಧಿತ ಅಧಿಕಾರಿಗಳು, ಅಭಿಯಂತರರು, ಹಗರಣದ ಪ್ರಧಾನ ರೂವಾರಿ ಕಾರ್ಕಳ ಶಾಸಕ ವಿ.ಸುನಿಲ್ಕುಮಾರ್ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಹಿಂದೂತ್ವದ ಹೆಸರಿನಲ್ಲಿಅಧಿಕಾರಕ್ಕೆ ಬಂದ ಕಾರ್ಕಳ ಶಾಸಕರು ನಮ್ಮೆಲ್ಲರ ಆರಾಧ್ಯ ದೇವರು ಪರಶುರಾಮನ ಹೆಸರಿನಲ್ಲಿ ಮಾಡಿರುವ ಭ್ರಷ್ಟಾಚಾರ ಹಿಂದೂ ಸಮಾಜಕ್ಕೆ ಮಾಡಿದ ಮಹಾದ್ರೋಹ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸ ಪ್ರತಿಮೆ ಮಾಡಲು ಕೊಡಲಾಗಿದೆಯಾ?!
ಪ್ರತಿಮೆಯನ್ನು ತುರ್ತಾಗಿ ನಿರ್ಮಾಣ ಮಾಡಿರುವ ಕಾರಣ ಆಗ ತಾತ್ಕಾಲಿಕ ಪ್ರತಿಮೆ ನಿರ್ಮಾಣ ಮಾಡಲಾಗಿದೆಯೇ..? ಈಗ ಹೊಸ ಪ್ರತಿಮೆ ಅಲ್ಲಿ ನಿರ್ಮಿಸಲು ಕರಾರು ಆಗಿದೆಯಾ ಎಂಬ ಬಗ್ಗೆ ಮಾತುಗಳು ಕೇಳಿ ಬಂದಿವೆ.