ಪರಶುರಾಮ ಥೀಮ್ ಪಾರ್ಕ್ ಮತ್ತೆ ಮುನ್ನೆಲೆಗೆ!
– ಪರಶುರಾಮ ಥೀಂ ಪಾರ್ಕ್ನ ಕಾಮಗಾರಿ ಪ್ರಾರಂಭಿಸಲು ಅಗ್ರಹ
– ತಹಶೀಲ್ದಾರರಿಗೆ ಮನವಿ ಸಲ್ಲಿಸಿದ 6 ಗ್ರಾಮ ಪಂಚಾಯತ್ ಅಧ್ಯಕ್ಷರು – ಸದಸ್ಯರು
NAMMUR EXPRESS NEWS
ಕಾರ್ಕಳ : ಬೈಲೂರು ಉಮಿಕ್ಕಲ್ ಬೆಟ್ಟದಲ್ಲಿನ ಪರಶುರಾಮ ಥೀಂ ಪಾರ್ಕ್ನ ಕಾಮಗಾರಿಯನ್ನು ಪ್ರಾರಂಭಿಸಿ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡುವಂತೆ ಯರ್ಲಪಾಡಿ ಗ್ರಾಮ ಪಂಚಾಯತ್, ನೀರೆ ಗ್ರಾಮ ಪಂಚಾಯತ್, ಬೈಲೂರು ಗ್ರಾಮ ಪಂಚಾಯತ್, ಪಳ್ಳಿ ಗ್ರಾಮ ಪಂಚಾಯತ್, ಕುಕ್ಕುಂದೂರು ಗ್ರಾಮ ಪಂಚಾಯತ್ ಹಾಗೂ ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಮೇ 6 ರಂದು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲೇನಿದೆ?
ಬೈಲೂರು-ಯರ್ಲಪಾಡಿ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ಇಡೀ ಉಡುಪಿ ಜಿಲ್ಲೆಯಲ್ಲಿಯೇ ಪ್ರವಾಸೋದ್ಯಮ ದೃಷ್ಟಿಯಲ್ಲಿ ಗಮನಸೆಳೆದಿದ್ದು, ದಿನಂಪ್ರತಿ ಸಾವಿರಾರು ಜನ ಪ್ರವಾಸಿಗರು ಈ ಬೆಟ್ಟಕ್ಕೆ ಆಗಮಿಸಿ ಥೀಂ ಪಾರ್ಕ್ ವೀಕ್ಷಣೆ ಮಾಡುತ್ತಿದ್ದು, ಒಂದು ಉತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಆದರೆ ಥೀಂ ಪಾರ್ಕ್ ಬಗ್ಗೆ ಕೆಲವೊಂದು ಆರೋಪಗಳು ಬಂದಿದ್ದು, ಥೀಂ ಪಾರ್ಕ್ ಕಾಮಗಾರಿಯು ಸ್ಥಗಿತಗೊಂಡಿತ್ತು.
2023ರ ಅ. 4 ರಂದು ಜಿಲ್ಲಾಧಿಕಾರಿತವರು ಥೀಂ ಪಾರ್ಕ್ನ ಪರಶುರಾಮ ಮೂರ್ತಿಯ ಕೆಲವೊಂದು ಮರುವಿನ್ಯಾಸ ಹಾಗೂ ಬಾಕಿಯಿದ್ದ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಮಿತ್ತ ಕಾಮಗಾರಿ ಆರಂಭಿಸಿ ಶೀಘ್ರ ಮುಕ್ತಾಯಗೊಳಿಸುವಂತೆ ಆದೇಶ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ಕಾಮಗಾರಿ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಇದು ಹಲವು ಚರ್ಚೆಗಳಿಗೂ ಕಾರಣವಾಗಿತ್ತು. ನಂತರ ಇದೇ ಮೇ ತಿಂಗಳ ಆರಂಭ ದಿನಗಳಲ್ಲಿ ಮರು ಪ್ರಾರಂಭಗೊಂಡ ಕಾಮಗಾರಿಯನ್ನು ಕೆಲವೇ ಗಂಟೆಗಳಲ್ಲಿ ಮತ್ತೆ ನಿಲ್ಲಿಸಿರುವುದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ನಮಗೆ ಆಘಾತವನ್ನುಂಟುಮಾಡಿದೆ ಹಾಗೂ ಅತೀವ ನೋವನ್ನುಂಟು ಮಾಡಿದೆ ಎಂದಿದ್ದಾರೆ.
ಸ್ಥಾಪಿತ ಹಿತಾಸಕ್ತಿಯ ಕೈವಾಡ
ಕೆಲವೊಂದು ಸ್ಥಾಪಿತ ಹಿತಾಸಕ್ತಿದಾರರು ಉಮಿಕ್ಕಲ್ ಬೆಟ್ಟಕ್ಕೆ ಹೋಗುವ ಸಾರ್ವಜನಿಕ ರಸ್ತೆಗೆ ಹತ್ತಾರು ಲೋಡ್ ಮಣ್ಣನ್ನು ಹಾಕಿ ರಸ್ತೆಗೆ ತಡೆಯನ್ನೊಡ್ಡಿರುತ್ತಾರೆ. ಇದು ಕಾನೂನು ಬಾಹಿರವಾಗಿದ್ದು, ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದಲೇ ಮಾಡಿರುವುದಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖೇದಕರ. ಒಟ್ಟಾರೆ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿ ತಡೆಯುವಲ್ಲಿ ಸ್ಥಾಪಿತ ಹಿತಾಸಕ್ತಿಯ ಕೈವಾಡ ಎದ್ದು ಕಾಣುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಮ್ ಪಾರ್ಕ್ ಮೊದಲಿನಂತೆಯೇ ಜನಾಕರ್ಷಣೀಯ ಕೇಂದ್ರವಾಗಿ ರೂಪುಗೊಳ್ಳುವುದು ನಮ್ಮೆಲ್ಲ ಜನಪ್ರತಿನಿಧಿಗಳ ಹಾಗೂ ಸ್ಥಳೀಯ ಜನರ ಒತ್ತಾಸೆಯಾಗಿದ್ದು. ಇಂತಹ ಪ್ರವಾಸೋದ್ಯಮ ಯೋಜನೆಯನ್ನು ಯಾವುದೇ ಸ್ಥಾಪಿತ ಹಿತಾಸಕ್ತಿಗೆ ಬಲಿಯಾಗಲು ಬಿಡದೆ ಜನತೆಗೆ, ಪ್ರವಾಸಿಗರಿಗೆ ಮುಕ್ತ ಪ್ರವೇಶ ಅತಿ ಶೀಘ್ರವಾಗಿ ದೊರೆಯುವಂತೆ ಮಾಡಬೇಕು. ಆದ್ದರಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.