ಪರಿಸರ ಸ್ವಚ್ಛತೆಗೆ ಬದುಕು ಮೀಸಲಿಟ್ಟ ಕಾರ್ಕಳದ ಗ್ರೀನ್ ಮ್ಯಾನ್!
– ಫೆಲಿಕ್ಸ್ ವಾಸ್ ಎಂಬ ಪರಿಸರ ಪ್ರೇಮಿಯ ಕಥೆ
– ಪ್ರತಿ ದಿನ 5 ಕಿಮಿ ಕಸ ಹೆರಕುವ ಪರಿಸರ ಪ್ರೇಮಿ
– ಕಾರ್ಕಳ ಸಿಂಗಾಪುರ ಮಾಡುವ ಕನಸು!
NAMMUR EXPRESS NEWS
ಕಾರ್ಕಳ: ಪರಿಸರ ಮಾಲಿನ್ಯದ ನಡುವೆ ಪರಿಸರ ಸ್ವಚ್ಚವಾಗಿಡುವುದು ದೊಡ್ಡ ಸವಾಲು. ಎಷ್ಟೇ ಪರಿಸರ ಸ್ವಚ್ಛ ಮಾಡಿದ್ರೂ ಮತ್ತೆ ಕಸ ಚೆಲ್ಲಿ ಮಲಿನಗೊಳಿಸುವವರೆ ಹೆಚ್ಚು . ಆದರೆ ಕಾರ್ಕಳದ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರ ಸಮಾಜ ಸೇವೆ ಈಗ ರಾಜ್ಯಕ್ಕೆ ಮಾದರಿಯಾಗಿದೆ. ಹೌದು. ಉಡುಪಿ ಜಿಲ್ಲೆ ಕಾರ್ಕಳದ ಮಂಗಳ ಪಾದೆ ಫೆಲಿಕ್ಸ್ ವಾಸ್ ನಿತ್ಯ ಸುಮಾರು ಐದು ಕಿ ಮೀ ವ್ಯಾಪ್ತಿಯ ಕಸವನ್ನು ಕೈಯಲ್ಲೇ ಹೆರಕುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಎಪ್ಪತ್ತೈದು ವರ್ಷದ ಹಿರಿ ವಯಸ್ಸಿನ ಫೆಲಿಕ್ಸ್ ವಾಸ್ ನಿತ್ಯ ಮುಂಜಾನೆ 5.30 ವಾಕಿಂಗ್ ಹೊರಟು ಕೈಯಲ್ಲಿ ಗೋಣಿ ಚೀಲ ಜೊತೆಗೊಂದು ಹ್ಯಾಂಡ್ ಸ್ಟಿಕ್ ಹಿಡಿದು ಸಾಗುತ್ತಾರೆ. ಸಾಗುವಾಗ ನಿತ್ಯ ರಸ್ತೆ ಪಕ್ಕದಲ್ಲಿನ ಪ್ಲಾಸ್ಟಿಕ್ ಗಳನ್ನು ತುಂಬಿಸಿಕೊಂಡು ಪುರಸಭೆ ವಾಹನಕ್ಕೆ ನೀಡುತ್ತಾರೆ. ಇವರ ಈ ಕೆಲಸ ಈಗ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬಂಡೆಗಲ್ಲ ಪ್ರದೇಶದಲ್ಲಿ ಗಿಡನೆಟ್ಟು ಪೋಷಿಸಿದರು!
ಮಂಗಳ ಪಾದೆ ಪ್ರದೇಶ ಸಂಪೂರ್ಣ ಬಂಡೆಗಳಿಂದ ಕೂಡಿದ ಪ್ರದೇಶವಾಗಿದೆ. ಅದಕ್ಕಾಗಿ ರಸ್ತೆ ಪಕ್ಕದಲ್ಲಿ ಸಾಗುವ ಸಾರ್ವಜನಿಕರಿಗೆ ನೆರಳಾಗಲು ವಿವಿಧ ಮಾವಿನ ಗಿಡಗಳು ,ಔಷಧೀಯ ಗುಣದ ಗಿಡಗಳು ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತಿದ್ದಾರೆ. ಇಲ್ಲಿಯವರೆಗೆ ಒಟ್ಟು ಐವತ್ತು ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸುತಿದ್ದಾರೆ. .ಬಿರು ಬೇಸಿಗೆಯಲ್ಲಿ ತಮ್ಮ ಮನೆಯಿಂದಲೆ ಐವತ್ತು ಕ್ಯಾನ್ ಗಳಲ್ಲಿ ನಿತ್ಯ ನೀರುಣಿಸಿ ಮರವನ್ನಾಗಿಸಿದ್ದಾರೆ .
ಐದು ಕಿ.ಮೀ ರಸ್ತೆ ಕಸವಿಲ್ಲದ ರಸ್ತೆ!
ಕಾರ್ಕಳ ಪುರಸಭೆ ವ್ಯಾಪ್ತಿಯ ಮಂಗಳಪಾದೆ, ಮಿಯ್ಯರು ಚರ್ಚ್ ಭಾಗ, ಸ್ವರಾಜ್ಯ ಮೈದಾನ, ಭುವನೇಂದ್ರಕಾಲೇಜು ರಸ್ತೆಗಳಲ್ಲಿ ಕಸಗಳು ಕಾಣಸಿಗುವುದೆ ಕಮ್ಮಿ , ಕಾಲೇಜು ವಿದ್ಯಾರ್ಥಿಗಳು ಫೆಲಿಕ್ಸ್ ವಾಜ್ ಅವರ ಪರಿಸರ ಜಾಗೃತಿ ಗೆ ಮನಸೋತು ಎಲ್ಲ ವಿದ್ಯಾರ್ಥಿಗಳಿಗಳಿಗೂ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.ಇವರ ಸ್ವಚ್ಚತಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ
ಹಸಿರು ವಾರ್ಡ್… ಜಾಗೃತಿಯ ಬೋರ್ಡ್!
ಮಂಗಳ ಪಾದೆ ವಾರ್ಡ್ ನಲ್ಲಿ ಎಲ್ಲಿ ನೋಡಿದರೂ ಹಸಿರ ದರ್ಶನ ಕಾಣಿಸುತ್ತದೆ. ಈ ಸ್ವಚ್ಛಂದ ಪರಿಸರ ಕಣ್ಣಿಗೆ ಹಬ್ಬ. ಈ ವಾರ್ಡ್ ನಲ್ಲಿ ಸಾಗುವಾಗ ಪ್ರತಿ ನೂರು ಮೀ ವ್ಯಾಪ್ತಿಯಲ್ಲಿ ಸುಮಾರು ಪರಿಸರ ಜಾಗೃತಿ ಮೂಡಿಸುವ ಬೋರ್ಡ್ ಹಾಗು ದಾರಿ ಸೂಚಕಗಳನ್ನು ನಿಲ್ಲಿಸಲಾಗಿದೆ. ಈ ಪರಿಸರದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಬೋರ್ಡ್ ಗಳನ್ನು ನಿರ್ಮಿಸಿ ಪರಿಸರ ಉಳಿಸುವ ಕಾರ್ಯವನ್ನು ಮಾಡುತಿದ್ದಾರೆ. ವಾಹನಗಳು ಸಾಗುವಾಗ ದಾರಿ ಸೂಚಕಗಳನ್ನು ನಿಲ್ಲಿಸಿದ್ದಾರೆ.
ಮನಗೆದ್ದ ಕಸದ ಮರ
ಮಂಗಳ ಪಾದೆ ವ್ಯಾಪ್ತಿಯ ಪ್ರತಿ ನೂರು ಮೀ ರಸ್ತೆಯಲ್ಲಿ ಹಸಿಕಸ ಒಣಕಸವನ್ನು ವಿಂಗಡಿಸಿ ರಸ್ತೆ ಬದಿಯಲ್ಲಿ ಕಬ್ಬಿಣದ ಕಂಬವನ್ನು ಸರಳನ್ನು ಸೇರಿಸಿ ರೆಂಬೆಗಳಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಕಪಕ್ಕದ ಮನೆಯರು ಕಸವನ್ನು ವಿಂಗಡಿಸಿ ಕಬ್ಬಿಣದ ಕಂಬಕ್ಕೆ ನೇತು ಹಾಕುತ್ತಾರೆ. ಇದರಿಂದಾಗಿ ಪರಿಸರದಲ್ಲಿ ಸಾಕುಪ್ರಾಣಿಗಳ ಬಂದು ಕಸವನ್ನು ಎಳೆದು ಹಾಕಲು ಸಾಧ್ಯವಾಗುವುದಿಲ್ಲ. ಸ್ವರಾಜ್ಯ ಮೈದಾನದ ಬಳಿ ದೊಡ್ಡಗಾತ್ರದ ಚೀಲಗಳನ್ನು ನೇತುಹಾಕಿ ದ್ದಾರೆ.ಪುರಸಭೆ ವಾಹನವು ನಿತ್ಯ ಆಗಮಿಸಿ ವಾಹನದಲ್ಲಿ ಕಸವನ್ನು ತುಂಬಿಕೊಂಡು ಹೋಗುತ್ತಾರೆ.
ತಮ್ಮ ವಾಹನವೇ ಕಸದ ಗಾಡಿ!
ಫೆಲಿಕ್ಸ್ ವಾಸ್ ಅವರ ಕಾರಿನಲ್ಲಿ ಹಾರೆ, ಪಿಕ್ಕಾಸಿ , ಕಸತುಂಬಿಸಲು ಗೋಣಿ ಚೀಲ, ಸುತ್ತಿಗೆ, ಹಗ್ಗ , ಗಿಡಗಳು, ಕಸವನ್ನು ತುಂಬಿಸಲು ಸ್ಟಿಕ್ , ಮಾಸ್ಕ್ ,ಗ್ಲೌಸ್ , ಪರಿಸರ ಜಾಗೃತಿಯ ಬೋರ್ಡ್, ಬುಟ್ಟಿ ಗಳನ್ನು ಕಾರಿನಲ್ಲಿ ಇಟ್ಟುಕೊಂಡು ಸಾಗುತ್ತಾರೆ. ಕಸವನ್ನು ಹಾಕಿದ್ದರೆ ಅಲ್ಲೊಂದು ಬೋರ್ಡ್ ನೆಟ್ಟು ಪರಿಸರ ಜಾಗೃತಿಯ ಬೋರ್ಡ್ ಹಾಕುತ್ತಾರೆ.
ಗಲ್ಫ್ ರಾಷ್ಟ್ರಗಳಲ್ಲಿ ವಾಹನ ಚಾಲಕರಾಗಿ ಮೂವೈತ್ತದು ವರ್ಷ ದುಡಿದು ಬಳಿಕ ಕಾರ್ಕಳದಲ್ಲಿಯೆ ನೆಲೆಸಿದರು. ಪರಿಸರ ಉಳಿಸಲು ಪಣತೊಟ್ಟು ಬದಲಾವಣೆಗೆ ಕಾರಣರಾದರು. ಪ್ರತಿ ಬೋರ್ಡ್ , ದಾರಿ ಮಾಹಿತಿಗಳು ,ಕಸದ ಮರ , ನಿರ್ಮಾಣ ಮಾಡಲು ಸ್ವಂತ ಖರ್ಚಿನಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರ ಸಹಕಾರವನ್ನು ನಿರೀಕ್ಷಿಸಿಲ್ಲ .
ಪರಿಸರ ಸ್ವಚ್ಛತೆಗೆ 3 ಗಂಟೆ ಮೀಸಲು!
ನಿತ್ಯ ಮೂರು ಘಂಟೆ ಪರಿಸರ ಸ್ವಚ್ಛ ತೆ ಮೀಸಲಿಟ್ಟ ಫೆಲಿಕ್ಸ್ ವಾಜ್ , ಮೂವತ್ತು ಕೆಜಿ ಕಸ ಸಂಗ್ರಹಿಸುತ್ತಾರೆ, ನಿತ್ಯ ಮೂರುಘಂಟೆ ಪ್ರಯಾಣಿಸಿ ಐದು ಕಿಮೀ ಸಂಚರಿಸುತ್ತಾರೆ. ಒಂಬತ್ತು ವರ್ಷಗಳಿಂದ ಸತತವಾಗಿ ರೂಢಿಸಿಕೊಂಡಿರುವ ಫೆಲಿಕ್ಸ್ ಉತ್ತಮ ವ್ಯಾಯಾಮ ಜೊತೆ ಪರಿಸರ ಜಾಗೃತಿಗೆ ಪ್ರೇರಣೆಯಾಗಿದ್ದಾರೆ
ನಮ್ಮ ಕಾರ್ಕಳವೇ ನಮಗೆ ಸಿಂಗಪುರ!
ಸ್ವಚ್ಛ ನಗರವೆಂದು ಸಿಂಗಾಪುರ ವನ್ನು ಉದಾಹರಣೆಗೆ ನೀಡುವ ಬದಲು ನಮ್ಮೂರೆ ಸ್ವಚ್ಛ ಮಾಡೋಣ , ಬದಲಾವಣೆ ನಮ್ಮಿಂದಲೆ ಪ್ರಾರಂಭವಾಗಲಿ . ವ್ಯಾಯಮದ ಜೊತೆ ಪರಿಸರ ಉಳಿಸಲು ಸಣ್ಣ ಪ್ರಯತ್ನ. ಸ್ವಚ್ಛ ಬ್ರಿಗೆಡ್ ಕಾರ್ಯಕರ್ತರ ಜೊತೆ ಜೊತೆಯಾಗುತ್ತಾರೆ. ಅವರೆಲ್ಲರ ಸಹಕಾರವು ಇದೆ ಎನ್ನುತ್ತಾರೆ ಫೆಲಿಕ್ಸ್ ವಾಜ್ ಪುರಸಭೆ ವ್ಯಾಪ್ತಿಯ ಕೆಲಸವನ್ನು ತಾನೇ ಖುದ್ದಾಗಿ ಮಾಡುತ್ತಾರೆ. ಅವರನ್ನು ಪುರಸಭೆ ಸ್ವಚ್ಚತಾ ರಾಯಭಾರಿಯನ್ನಾಗಿ ಗುರುತಿಸಿದೆ ಕಾರ್ಕಳ ಪುರಸಭೆ ಸದಸ್ಯ ವಿನ್ನಿ ಮಂಡೋನ್ಸಾ ಹೇಳಿದ್ದಾರೆ.