ಕರಾವಳಿ ಪತ್ರಿಕೋಧ್ಯಮದ ಕೊಂಡಿ ಕಳಚಿತು!
– ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ, ನಿರೂಪಕ ಮನೋಹರ ಪ್ರಸಾದ್ ನಿಧನ
– ಅಪಾರ ಸ್ನೇಹಿತರು, ಪತ್ರಕರ್ತರ ಕಂಬನಿ
NAMMUR EXPRESS NEWS
ಮಂಗಳೂರು: ಕರಾವಳಿ ಭಾಗದ ಕನ್ನಡ ಪತ್ರಿಕೋದ್ಯಮದ ಧೀಮಂತ ಪತ್ರಕರ್ತ, ಅತ್ಯುತ್ತಮ ನಿರೂಪಕ, ಲೇಖಕ, ಮನೋಹರ ಪ್ರಸಾದ್ (65) ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರ ನಟ, ಕತೆಗಾರ ಹಾಗೂ ಅಪಾರ ಭಾಷಾ ಪಾಂಡಿತ್ಯವಿದ್ದ ಮನೋಹರ ಪ್ರಸಾದ್ ಅವರು ಅನೇಕ ಕಾರ್ಯಕ್ರಮಗಳನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ನಿರೂಪನೆ ಮಾಡುತ್ತಾ ಜನಸಾಮಾನ್ಯರಿಗೂ ಚಿರಪರಿಚಿತರಾಗಿದ್ದರು.
ಕಾರ್ಕಳ ಮೂಲದವರು
ಮೂಲತಃ ಕಾರ್ಕಳ ತಾಲೂಕಿನ ಕರುವಾಲು ಗ್ರಾಮದವರು. ಅವರ ತಂದೆ ಶಿಕ್ಷಕರಾಗಿ ತಾಯಿ ಗೃಹಿಣಿಯಾಗಿದ್ದರು. ಮನೋಹರ ಪ್ರಸಾದ್ ಅವರು ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ “ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ “ಉದಯವಾಣಿ’ಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಅಲ್ಲಿಂದ ಆರಂಭಗೊಂಡು ಮುಖ್ಯ ವರದಿಗಾರರಾಗಿ, ಬಳಿಕ ಬ್ಯೂರೋ ಚೀಫ್ ಮತ್ತು ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಸೇವೆ ಸಲ್ಲಿಸಿ ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು.
ಸಂದ ಪ್ರಶಸ್ತಿ ಗೌರವಗಳು:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರ ಮೊದಲಾದ ಹಲವು ಗೌರವಗಳು ಅವರಿಗೆ ಒಲಿದುಬಂದಿತ್ತು.