ಅನಿವಾಸಿ ಭಾರತೀಯರಿಗೆ ಡಾ.ಆರತಿ ಕೃಷ್ಣ ಆಸರೆ!
* ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ
* ಎನ್ ಆರ್ ಕೆ ಹೆಸರಿನಲ್ಲಿ ವಿದೇಶದಲ್ಲಿರುವ ಕನ್ನಡಿಗರಿಗೆ ಗುರುತಿನ ಚೀಟಿ
* ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ವಿದೇಶದಲ್ಲಿನ ಕನ್ನಡಿಗರಿಗೆ ಸಹಕಾರ,ಸಮಸ್ಯೆಗೆ ಪರಿಹಾರ
NAMMUR EXPRESS NEWS
ಕೊಪ್ಪ: ಸುಮಾರು 18 ಕೋಟಿಯಷ್ಟು ಭಾರತೀಯ ಜನರು ವಿದೇಶದಲ್ಲಿದ್ದು ನಮ್ಮ ಸಮಿತಿಯಿಂದ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಸಚಿವಾಲಯ ಆರಂಭಗೊಂಡಲ್ಲಿ ಹೊರ ದೇಶದ ಕನ್ನಡಿಗರಿಗೆ ಭದ್ರತೆ ಕಲ್ಪಿಸಿದಂತಾಗುತ್ತದೆ. ಈಗಾಗಲೇ ಕೇರಳ ಸಚಿವಾಲಯ ತೆರೆದಿದ್ದು ತಮಿಳನಾಡು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಪಂಜಾಬ್ ಸರ್ಕಾರ ಇಲಾಖೆ ಹೊಂದಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದ್ದಾರೆ.
2016ರಲ್ಲಿ ಸಿದ್ದರಾಯಯ್ಯ ಅವರ ಸರ್ಕಾರದಲ್ಲಿ ಸಚಿವಾಲಯ ಆರಂಭಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಚುನಾವಣೆ ಕಾರಣ ಹಾಗೇ ಸ್ಥಗಿತವಾಗಿತ್ತು. ಈಗ ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯ ಸಿ ಎಂ ಆಗಿದ್ದಾರೆ,ಈ ಪ್ರಕ್ರಿಯೆಗೆ ವೇಗ ದೊರಕಿದೆ ಎಂದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ವಿದೇಶದಲ್ಲಿ ಸಮಸ್ಯೆಯಾದಲ್ಲಿ ಪರಿಹಾರ ಕಲ್ಪಿಸುವ ಯೋಜನೆ ರೂಪುಗೊಂಡಿದೆ. ಸಮಿತಿಯಿಂದ ಹೊರ ದೇಶದ ಕನ್ನಡ ಸಂಘಟನೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ದೊರೆಯಲಿದೆ. ಸಮಸ್ಯೆಯಲ್ಲಿರುವ ಕನ್ನಡಿಗರನ್ನು ವಿದೇಶದಿಂದ ಯಾವುದೇ ಸಮಸ್ಯೆ ಇಲ್ಲದೆ ಕರೆತರುವ ಪ್ರಯತ್ನ ಮಾಡಲಾಗಿದೆ. ವಿದೇಶಗಳಿಗೆ ಉದ್ಯೋಗದ ನಿಮಿತ್ತ ತೆರಳುವ ಕನ್ನಡಿಗರು ಯಾವುದೇ ರೀತಿಯಲ್ಲಿ ಮೋಸ ಹೋಗಬಾರದು, ಏಜೆಂಟ್ ನಂಬಿ ಹಣ ನೀಡಬಾರದು, ವಿದೇಶದ ಉದ್ಯೋಗದ ಬಗ್ಗೆ ಮೊದಲೇ ತಿಳುವಳಿಕೆ ಹೊಂದಬೇಕು. ಅನುಮಾನ ಇದ್ದಲ್ಲಿ ನಮ್ಮ ಕಛೇರಿ ಸಂರ್ಪಕಿಸಿ ಎಂಬ ಸಲಹೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ 2016 ರಲ್ಲಿ ವಿದೇಶದಲ್ಲಿನ ಕನ್ನಡಿಗರಿಗೆ ಎನ್ ಆರ್ ಕೆ ಹೆಸರಿನಲ್ಲಿ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿತ್ತು ನಂತರ ಸ್ಥಗಿತಗೊಂಡಿತ್ತು, ಈಗ ಮತ್ತೆ ಈ ಪ್ರಕ್ರಿಯೆ ಪುನರಾರಂಭಗೊಳ್ಳಲಿದೆ. ಈ ಬಗ್ಗೆ ಸರ್ಕಾರ ಚರ್ಚಿಸಿ ಬಜೆಟ್ ತಯಾರಿಸಿದ್ದು ಶೀಘ್ರದಲ್ಲೇ ವಿದೇಶದಲ್ಲಿ ನೆಲಸಿರುವ ಕನ್ನಡಿಗರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ತಿಳಿಸಿದರು.
ಮಲೆನಾಡ ಮಗಳ ಸಾಧನೆ
ಡಾ.ಆರತಿ ಕೃಷ್ಣ ಅವರು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾಗಿದ್ದು ಸರ್ಕಾರದ ಹುದ್ದೆಯಾಗಿದೆ. ವಿಧಾನ ಸೌಧದಲ್ಲಿ ಇವರ ಕಚೇರಿ ಕೂಡ ಇದೆ. ಡಾ. ಆರತಿ ಕೃಷ್ಣ ಅವರು ಮಲೆನಾಡಿನಲ್ಲಿ ಕಳೆದ ಅನೇಕ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.