ಚಿನ್ನದ ಪದಕ ಗೆದ್ದ ಕೊಪ್ಪದ ಸ್ನೇಹಾ!
– 27 ನೇ ರಾಷ್ಟ್ರೀಯ ಫೆಡರೇಶನ್ ಹಿರಿಯರ ಅಥ್ಲೆಟಿಕ್ಸ್ ಸ್ಪರ್ಧೆ
– ಓಡಿಶಾದಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸ್ನೇಹಾ
– ಮಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ
NAMMUR EXPRESS NEWS
ಕೊಪ್ಪ: ಓಡಿಶಾದಲ್ಲಿ ನಡೆದ 27 ನೇ ರಾಷ್ಟ್ರೀಯ ಫೆಡರೇಶನ್ ಹಿರಿಯರ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಚಿಕ್ಕಮಗಳೂರು ಜಿಲ್ಲೆಯ ಸ್ನೇಹಾ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಮಲೆನಾಡಿಗೆ ಕೀರ್ತಿ ತಂದಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ನಡೆದ ಅಥ್ಲೆಟಿಕ್ ಚಾಂಪಿಯನ್ ಶಿಪ್ 100 ಮೀಟರ್ ಓಟದಲ್ಲಿ 11 ಸೆಕೆಂಡ್ ನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಪಂಚಾಯಿತಿಯ ಸತ್ಯನಾರಾಯಣ ಎಸ್.ಎಸ್ ಹಾಗೂ ಶಾಲಿನಿ ಕೆ.ಎ ಅವರ ಪುತ್ರಿಯಾಗಿರುವ ಸ್ನೇಹಾ ಮಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿ
ರಾಷ್ಟ್ರೀಯ ಕ್ರೀಡಾಕೂಟ 2023 ಗೋವಾದಲ್ಲಿ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಮತ್ತು 4×100 ಮೀಟರ್ ರಿಲೇಯಲ್ಲಿ ಕಂಚು, ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್ ಶಿಪ್ 2023-ಬೆಂಗಳೂರಿನಲ್ಲಿ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ದಸರಾ ಸಿಎಂ ಕಪ್ 2023-ಮೈಸೂರಿನಲ್ಲಿ 100 ಮೀಟರ್ ಓಟದಲ್ಲಿ ಚಿನ್ನದ ಪದಕ, ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ -ತಮಿಳುನಾಡು ಅಥ್ಲೆಟಿಕ್ಸ್ ನಲ್ಲಿ 100 ಮೀಟರ್ ಮತ್ತು 4×100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ, ದಕ್ಷಿಣ ವಲಯದ ಅಥ್ಲೆಟಿಕ್ ಚಾಂಪಿಯನ್ ಶಿಪ್ – ಚೆನ್ನೈ ನಲ್ಲಿ 100 ಮೀಟರ್ ಮತ್ತು 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕವನ್ನು ಕಳೆದ ವರ್ಷ ಪಡೆದಿದ್ದಾರೆ. ಬೆಂಗಳೂರು, ತಮಿಳುನಾಡು, ಗೋವಾ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದು ಮಲೆನಾಡಿಗೆ ಹೆಸರು ತಂದಿದ್ದಾರೆ.