ಲವ್ ಜಿಹಾದ್ ವಿರುದ್ಧ ಪ್ರತಿಭಟನೆಗಿಲ್ಲ ಅನುಮತಿ!
– ಪೊಲೀಸರಿಂದ ಅನುಮತಿ ನಿರಾಕರಣೆ: ವಿಎಚ್ಪಿ ವಿರೋಧ
NAMMUR EXPRESS NEWS
ಲವ್ ಜಿಹಾದ್ ಪ್ರಕರಣಗಳನ್ನು ಖಂಡಿಸಿ, ಲವ್ ಜಿಹಾದ್ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರಿನಲ್ಲಿ ಅಪರಾಹ್ನ ನಿಗದಿಯಾಗಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪೊಲೀಸರು ಒತ್ತಡಕ್ಕೆ ಮಣಿದು ಅನುಮತಿ ನಿರಾಕರಿಸಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಲವ್ ಜಿಹಾದ್ಗೆ ಮುಗ್ಧ ಹಿಂದೂ ಹೆಮ್ಮಕ್ಕಳು ಬಲಿಯಾಗುತ್ತಿದ್ದು ಹಿಂದೂ ಸಮಾಜ ಆತಂಕಕ್ಕೆ ಒಳಗಾಗಿದೆ. ಮೊನ್ನೆಯಷ್ಟೇ ಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ, ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ ಎಂದು ಹಿಂದೂ ಮಹಿಳಾ ಸುರಕ್ಷಾ ಸಮಿತಿಯ ಪ್ರಮುಖರಾದ ಶ್ರೀಲಕ್ಷ್ಮಿ ಮಠದ ಮೂಲೆ, ಸುಕನ್ಯಾ ರಾವ್ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಉಂಟಾಗಿರುವ ಲವ್ ಜಿಅಹದ್ ಸಮಸ್ಯೆ ಪರಿಹಾರಕ್ಕೆ ಮುಂದಾಗಿರಬೇಕೆ ಹೊರತು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದ್ದು. ಸಾರ್ವಜನಿಕ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವಾಗ ಪೊಲೀಸರು ಅಡ್ಡಿಪಡಿಸಬಾರದ್ದು. ಸಂವಿಧಾನ ನೀಡಿರುವ ಹಕ್ಕನ್ನು ಪೊಲೀಸರು ಕಸಿದುಕೊಂಡಿದ್ದಾರೆ ಎಂದು ನ್ಯಾಯವಾದಿ ಹರೀಶ್ ಕುಮಾರ್ ಹೇಳಿದ್ದಾರೆ.
ಕುಂದಾಪುರ: ಬೃಹತ್ ಮರವೊಂದು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಅಲ್ಲಿ ಚಲಿಸುತ್ತಿದ್ದ ಶಾಲಾ ಬಸ್ವೊಂದು ಅಪಾಯದಿಂದ ಪಾರಾದ ಘಟನೆ ಕುಂದಾಪುರದ ಹೆಮ್ಮಾಡಿ ಗ್ರಾಮದ ಸಂತೋಷ್ ನಗರ ರಸ್ತೆಯಲ್ಲಿ ಶನಿವಾರ ನಡೆದಿದೆ. ಜಿಲ್ಲೆಯಲ್ಲಿ ಬೆಳಗ್ಗಿನಿಂದ ಭಾರೀ ಮಳೆಯಾಗಿದ್ದು, ಪರಿಣಾಮವಾಗಿ ಗಾಳಿಗೆ ಮರವೊಂದು ಧರೆಗೆ ಉರುಳಿದೆ. ಈ ವೇಳೆ ವಿದ್ಯುತ್ ಕಂಬಗಳು ಕೂಡ ಬುಡಮೇಲಾಗಿವೆ. ಈ ಸಂದರ್ಭದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ವೊಂದು ಕೇವಲ 20 ಮೀಟರ್ ದೂರದಲ್ಲಿ ಇತ್ತು. ಒಂದುವೇಳೆ ವಿದ್ಯುತ್ ಕಂಬ ಅಥವಾ ಮರವು ಬಸ್ ಮೇಲೆ ಉರುಳಿ ಬೀಳುತ್ತಿದ್ದರೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಕೂಡಲೇ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್ ಕಂಬ ತೆರವುಗೊಳಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಸ್ಥಳೀಯರ ಸಹಕಾರದಿಂದ ಮರ ತೆರವು ಕಾರ್ಯ ಕೂಡ ನಡೆಯುತ್ತಿದೆ. ಇದರಿಂದ ಕೆಲವು ಹೊತ್ತು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗಿದೆ.
ಉಡುಪಿ: ಹೆದ್ದಾರಿ ಮಧ್ಯೆ ಪಿಕಪ್ ಪಲ್ಟಿ; ಚಾಲಕನಿಗೆ ಗಾಯ
ಹಣ್ಣು ತುಂಬಿದ್ದ ಪಿಕಪ್ ವಾಹನ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸರ್ಕಲ್ನಲ್ಲಿ ಸೋಮವಾರ ನಡೆದಿದೆ. ಹುಬ್ಬಳ್ಳಿಯಿಂದ ಉಡುಪಿಯತ್ತ ಸಾಗುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಪಲ್ಟಿಯಾಗಿದೆ. ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ಜಾಹೀರಾತಿನ ಬ್ಯಾರಿಕೇಡ್ ಅಳವಡಿಸಿದ್ದೇ ಚಾಲಕನಿಗೆ ಗೊಂದಲವುಂಟಾಗಿ ವಾಹನ ಪಲ್ಟಿಯಾಗಲು ಕಾರಣವೆನ್ನಲಾಗಿದೆ. ರಸ್ತೆಯ ಮಧ್ಯದಲ್ಲಿ ಅವೈಜ್ಞಾನಿಕವಾಗಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ರಾತ್ರಿಯ ವೇಳೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಅಳವಡಿಸುವುದು ಮತ್ತು ರಾತ್ರಿಯ ವೇಳೆ ಬ್ಯಾರಿಕೇಡ್ ರಸ್ತೆಯಿಂದ ತೆರವು ಮಾಡಬೇಕೆಂದು ಸ್ಥಳೀಯರು ಹಾಗೂ ಚಾಲಕರು ಮನವಿ ಮಾಡಿದ್ದಾರೆ.