- ಚಿಕ್ಕಮಗಳೂರಲ್ಲಿ ನಡೆದ ದುರ್ಘಟನೆ
- ಅಣ್ಣ, ತಮ್ಮ ಸೇರಿ ಐವರ ದುರಂತ ಅಂತ್ಯ
ಚಿಕ್ಕಮಗಳೂರು: ಮೂಡಬಿದರೆಯಲ್ಲಿ ನಾಲ್ವರು ನೀರುಪಾಲಾಗಿರುವ ಘಟನೆ ಮಾಸುವ ಮುನ್ನ ಚಿಕ್ಕಮಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಸೇರಿ ಐವರು ನೀರುಪಾಲಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ವಸ್ತಾರೆಯ ಹರಕೆರೆ ಎಂಬಲ್ಲಿ ಈ ಘಟನೆ ನಡೆದಿದ್ದು, ಅಣ್ಣನನ್ನು ಕಾಪಾಡಲು ತಮ್ಮ, ತಮ್ಮನನ್ನು ಕಾಪಾಡಲು ಅಣ್ಣ ಸೇರಿದಂತೆ ಐವರು ಸಾವನ್ನಪ್ಪಿದ್ದು, ಇಡೀ ಊರು ಶೋಕದಲ್ಲಿ ಮುಳುಗಿದೆ.
ಮೃತರನ್ನು ಸುದೀಪ್(22), ಸಂದೀಪ್(23), ರಘು(22), ದಿಲೀಪ್(24)ದೀಪಕ್(24) ಎಂದು ಗುರುತಿಸಲಾಗಿದೆ.
ನ.20ರಂದು ಸಂದೀಪ್ ಎಂಬುವರ ಸಹೋದರಿ ಮದುವೆ ನಡೆದಿದ್ದು, ಬೀಗರ ಊಟವೂ ಆಗಿತ್ತು. ಬಳಿಕ ಕೆರೆಯಲ್ಲಿ ಮೀನು ಹಿಡಿದು ಊಟ ಮಾಡಲು ಹೋದವರು ವಾಪಾಸ್ ಬರಲಿಲ್ಲ. ಐವರು ಅಣ್ಣ ತಮ್ಮಂದಿರು ಮೀನಿಗೆ ಗಾಳ ಹಾಕುವ ಮುನ್ನ ನೀರಿಗೆ ಇಳಿದಿದ್ದಾರೆ. ಓರ್ವ ನೀರಲ್ಲಿ ಮುಳುಗಿದ್ದು, ಒಬ್ಬರ ನಂತರ ಒಬ್ಬರು ಆತನನ್ನು ರಕ್ಷಿಸಲು 6 ಮಂದಿ ಇಳಿದಿದ್ದಾರೆ. ಬಾನು ಎಂಬಾತ ಈಜಿ ದಡ ಸೇರಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಹಂಚರವಳ್ಳಿ ಕೃಷ್ಣಮೂರ್ತಿ ಕುಸುಮ ದಂಪತಿಯ ಮಕ್ಕಳು ಸಾವಿನ ಕದ ತಟ್ಟಿದ್ದಾರೆ. ಪೊಲೀಸರು ಬೋಟ್ ಬಳಸಿ ಶವ ಹೊರ ತೆಗೆದಿದ್ದಾರೆ. ಇಡೀ ಊರಿಗೆ ಊರೇ ಮೌನವಾಗಿದೆ.
ಸಂದೀಪ್ ಸಾಕಿದ್ದ ನಾಯಿ ಸಂದೀಪ್ ಸಾವಿಗೆ ಕಣ್ಣೀರು ಹಾಕಿದ್ದು, ಆತನ ಮರಣೋತ್ತರ ಪರೀಕ್ಷೆ ತೆಗೆದುಕೊಂಡು ಹೋಗುವಾಗ ಕಾರಿನ ಜತೆಯೇ ಓಡಿ ಬಂದ ದೃಶ್ಯ ಎಲ್ಲರ ಮನ ಕಲಕುವಂತೆ ಮಾಡಿತು.