- ಸಹಕಾರ ಭಾರತಿಗೆ ಬೆಂಬಲ ನೀಡಲು ಆರಗ ಮನವಿ
- ರೈತರ ಅಭಿವೃದ್ಧಿಗೆ ಮತ್ತೆ ನಾಗರಾಜ ಶೆಟ್ಟಿ ಸಾರಥ್ಯ?
ತೀರ್ಥಹಳ್ಳಿ: ತೀರ್ಥಹಳ್ಳಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ನ.5ರಂದು ನಡೆಯಲಿದ್ದು, ಸಹಕಾರ ಭಾರತಿಯ 8 ಮಂದಿಗೆ ಷೇರುದಾರರು ಬೆಂಬಲ ನೀಡಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಷೇರುದಾರರಲ್ಲಿ ಮನವಿ ಮಾಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರಗ ಅವರು, ಟಿಎಪಿಸಿಎಂಎಸ್ ಸುಮಾರು 30 ವರ್ಷದಿಂದ ಉತ್ತಮ ಕೆಲಸ ಮಾಡುತ್ತಿದೆ. ಹಿರಿಯ ಸಹಕಾರಿ ನರಸಿಂಹ ನಾಯಕ, ನಾಗರಾಜ್ ಶೆಟ್ಟಿ ಸಾರಥ್ಯದಲ್ಲಿ ತಾಲೂಕಿನ ಟಿಎಪಿಸಿಎಂಎಸ್ ರೈತರ ಪರವಾಗಿ ಬೆಳೆದು ನಿಂತಿದೆ. ರಾಜ್ಯದಲ್ಲಿ ಬೃಹತ್ ಸಹಕಾರಿ ಸಂಸ್ಥೆಯಾಗಿ ಮಾದರಿಯಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿ ಭಾರತಿ ತಂಡ ಕೆಲಸ ಮಾಡುತ್ತಿದೆ. ಹೀಗಾಗಿ ಸಹಕಾರ ಭಾರತಿ ತಂಡದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಹಗರಣದ ಕೂಪದಿಂದ ಅಭಿವೃದ್ಧಿಯೆಡೆಗೆ!: ತೀರ್ಥಹಳ್ಳಿ ತಾಲೂಕು ಸೊಸೈಟಿ ಹಿಂದೆ ಹೇಗಿತ್ತು. ಟೇಬಲ್ ಕುರ್ಚಿ ಮಾರಿ ಸಂಬಳ ಕೊಡುವ ಸ್ಥಿತಿ ಇತ್ತು. ಹಗರಣಗಳ ರಾಶಿ ಕೂಡಿಡಲಾಗಿತ್ತು. ಸಾಲಗಳ ಪಟ್ಟಿ ಬೆಳೆದಿತ್ತು. ಪ್ರತಿಷ್ಠೆಗಾಗಿ ಅನೇಕರು ಕುರ್ಚಿಗೆ ಬಂದು ಕೂತಿದ್ದರು. ಹಣ ಹಗರಣದ ದೋಷಾರೋಪ ಇತ್ತು. ನಾನು ಮತ್ತು ಕಡಿದಾಳ್ ದಿವಾಕರ್ ಸೇರಿ ಆಯ್ದ ಸಹಕಾರಿಗಳನ್ನು ಅವಿರೋಧ ಆಯ್ಕೆ ಮಾಡಿದ್ದೆವು. ಬೆನಕ ಭಟ್, ನಾಗರಾಜ್ ಶೆಟ್ಟಿ, ನಾರಾಯಣ ರಾವ್, ಸುಧಾಕರ್ ನಾಕುಂಜಿ ಸೇರಿ ಪಕ್ಷಾತೀತ ಸಹಕಾರಿಗಳ ಕೆಲಸದಿಂದ ಸಹಕಾರಿ ಬೆಳೆಯಿತು ಎಂದು ಆರಗ ಹೇಳಿದರು.
ಅಭಿವೃದ್ಧಿ ಶಕೆ: ತೀರ್ಥಹಳ್ಳಿ ಟಿಎಪಿಸಿಎಂಎಸ್ನಿಂದ ಒಳ್ಳೆಯ ಕಲ್ಯಾಣ ಮಂಟಪ ನಿರ್ಮಾಣವಾಗಿದೆ. ಎಸ್ಬಿಐ ಬಿಲ್ಡಿಂಗ್, ಟಿಎಪಿಎಂಸಿಎಸ್ ಮಳಿಗೆ ಲಾಭ ತರುತ್ತಿವೆ. ಬಾಡಿಗೆಯಿಂದಲೇ ಸಿಬ್ಬಂದಿ ಸಂಬಳ ಆಗುತ್ತಿದೆ. ನರಸಿಂಹ ನಾಯಕ ಬಳಿಕ ನಾಗರಾಜ್ ಶೆಟ್ಟರ ಸೇವೆ, ಮಾರ್ಕೆಟ್ ನಿಯಂತ್ರಣ ಸಂಸ್ಥೆಯನ್ನು ಲಾಭದತ್ತ ತಂದು ನಿಲ್ಲಿಸಿದೆ. ಈಗ ನಾಗರಾಜ ಶೆಟ್ಟರ ನಾಯಕತ್ವವನ್ನು ಪಕ್ಷಮೀರಿ ಪ್ರೀತಿ ಮಾಡುತ್ತಾರೆ. ಹೀಗಾಗಿ ಸಹಕಾರಿ ಭಾರತಿ ತಂಡವನ್ನು ತಾವೆಲ್ಲರೂ ಬೆಂಬಲಿಸಲು ಮನವಿ ಮಾಡಿದ್ದಾರೆ.
ಅಭ್ಯರ್ಥಿಗಳು ಯಾರು ಯಾರು?: ಸಹಕಾರ ಭಾರತಿ ತಂಡವನ್ನು ಗೆಲ್ಲಿಸಿ ರೈತರ ಪರ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ನ. 5ರಂದು ಎಲ್ಲಾ ಷೇರುದಾರರು ಆಗಮಿಸಿ ನಾಗರಾಜ ಶೆಟ್ಟರ ನಾಯಕತ್ವದಲ್ಲಿ ಸ್ಪರ್ಧೆ ಮಾಡಿರುವ 1. ಗಿರಿಯಪ್ಪ ಗೌಡ ಜೆ(ಸಾಮಾನ್ಯ), 2.ಚಂದ್ರಶೇಖರ್ ಎಂ.ವಿ(ಹಿಂದುಳಿದ ವರ್ಗ ಎ), 3.ನಾಗರತ್ನ ಮುರುಘರಾಜ್( ಮಹಿಳಾ ಮೀಸಲು), 4.ನಾಗರಾಜ ಶೆಟ್ಟಿ(ಸಾಮಾನ್ಯ), 5.ಪವಿತ್ರ ಚಂದ್ರ( ಮಹಿಳಾ ಮೀಸಲು), 8. ಮೋಹನ್ ಟಿ(ಪರಿಶಿಷ್ಟ ಜಾತಿ ಮೀಸಲು), 10.ರಾಜಕಮಲ್ ಎಚ್(ಸಾಮಾನ್ಯ), 14. ಶಿವಕುಮಾರ್ ಕಾನುಕೊಪ್ಪ ಕೆ.ಎಸ್( ಹಿಂದುಳಿದ ಪ್ರವರ್ಗ-ಬಿ) ಈ ಮೇಲ್ಕಂಡ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಆರಗ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ನಾಗರಾಜ ಶೆಟ್ಟಿ, ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್ ಬಾಳೆಬೈಲು, ಸಹಕಾರ ಭಾರತಿ ಪ್ರಮುಖರಾದ ಕಲ್ಕುಳಿ ಮಹೇಶ್, ಬಸವರಾಜ ಹೊದಲ ಇದ್ದರು.