ಮಲೆನಾಡಲ್ಲಿ ಎಲೆಚುಕ್ಕಿ ರೋಗ: ಪುಡಿಕಾಸು ಸಾಕಾಗುತ್ತಾ?
– ಎಲೆಚುಕ್ಕಿ ರೋಗ ನಿವಾರಣೆ ಸಂಶೋಧನೆಗೆ 52 ಲಕ್ಷ
– ಆರಗ ಪ್ರಶ್ನೆಗೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಮಾಹಿತಿ
– ರೋಗದಿಂದ ಅಡಿಕೆ ಫಸಲು, ತೂಕ ಅರ್ಧಕರ್ದ ಕಡಿಮೆ!
NAMMUR EXPRESS NEWS
ಬೆಳಗಾವಿ/ಶಿವಮೊಗ್ಗ : ಅಡಿಕೆ ಬೆಳೆಗೆ ತಗಲುತ್ತಿರುವ ಎಲೆಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗ ನಿವಾರಣೆಗಾಗಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಕೈಗೊಂಡಿರುವ ಸಂಶೋಧನಾ ಕಾರ್ಯಕ್ಕಾಗಿ 52 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ವಿಧಾನಸಭೆಗೆ ತಿಳಿಸಿದ್ದಾರೆ. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಸಂಶೋಧನೆಗೆ ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಸರ್ಕಾರ ಬಿಡುಗಡೆ ಮಾಡಲು ಸಿದ್ದವಿದೆ.ಈ ರೋಗಗಳ ನಿವಾರಣೆಗೆ ಸೂಕ್ತ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ, ಈಗಿನ ಕಾಂಗ್ರೆಸ್ ಸರ್ಕಾರ ಎರಡೂ ಸರ್ಕಾರಗಳು ಪುಡಿ ಕಾಸು ಕೊಟ್ಟು ಎಲ್ಲಾ ಮಾಡಿದ್ದೇವೆ ಎಂದು ಫೋಸು ಕೊಡುವ ಕೆಲಸ ಮಾಡುತ್ತಿವೆ. ಮಲೆನಾಡು, ಕರಾವಳಿಯ ಬಹುತೇಕ ತೋಟಗಳಲ್ಲಿ ಎಲೆ ಚುಕ್ಕಿ ರೋಗ ಹರಡುತ್ತಿದೆ. ಈ ವರ್ಷ ರೋಗದಿಂದ ಶೇ.50ರಷ್ಟು ಅಡಿಕೆ ಫಸಲು ಕಡಿಮೆ ಇದೆ. ತೂಕ ಕಡಿಮೆ ಆಗುತ್ತಿದೆ. ಆದರೆ ಜನ ನಾಯಕರು ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿಲ್ಲ ಎಂಬ ಆರೋಪ ರೈತ ವಲಯದಿಂದ ಕೇಳಿ ಬಂದಿದೆ.
ದಿನೇ ದಿನೇ ರೋಗ ಹೆಚ್ಚಳ!
ಸರ್ಕಾರ ಸಂಶೋಧನೆ ನಡೆಸಲು ಯಾವುದೊ ಒಂದು ಮೋರಿಗೆ ಕೊಡುವಷ್ಟು ದುಡ್ಡು ಕೊಟ್ಟಿದೆ. ಆದರೆ ಅದನ್ನು ಕೂಡ ಅಧಿಕಾರಿಗಳು ಸರಿಯಾಗಿ ಮಾಡುತ್ತಿಲ್ಲ. ಇನ್ನೊಂದೆಡೆ ಹತ್ತಾರು ಜಿಲ್ಲೆಗಳ ಜೀವನಾಧಾರ ಬೆಳೆ ಅಡಿಕೆ. ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ಸಂಪೂರ್ಣ ಇದರ ಮೇಲೆ ಅವಲಂಭಿತವಾಗಿದೆ. ಆದರೆ ಈ ಸಮಸ್ಯೆ ಬಗ್ಗೆ ಯಾವುದೇ ಸರ್ಕಾರ, ಜನ ನಾಯಕರು ಗಂಭೀರವಾಗಿ ಯೋಚನೆ ಮಾಡದಿರುವುದು ದುರಂತವೇ ಸರಿ. ಈ ಬಗ್ಗೆ ದೊಡ್ಡ ಆಂದೋಲನ ರೈತ ವಲಯದಿಂದ ಆಗಬೇಕಿದೆ.ಇಲ್ಲವಾದಲ್ಲಿ ಮುಂದೆ ಮಲೆನಾಡು ದೊಡ್ಡ ದುರಂತಕ್ಕೆ ಜಾರಲಿದೆ.