ರೈತರಿಗೆ ಅಡಿಕೆ ಮಿಷನ್ ಮೀಟರ್ ಶಾಕ್..!
– ವಿದ್ಯುತ್ ಇಲಾಖೆ ನಿಯಮದ ವಿರುದ್ಧ ಭಾರೀ ಆಕ್ರೋಶ
– ಮಾತನಾಡದ ನಾಯಕರು: ರೈತರ ದನಿ ಕೇಳೋರು ಯಾರು?
NAMMUR EXPRESS NEWS
ಮಲೆನಾಡು/ ಕರಾವಳಿ: ಅಡಿಕೆ ಬೆಳೆಗಾರರಿಗೆ ಅಡಿಕೆ ಕೊಯ್ಲು ಮಾಡುವ ಸಮಯ ಬಂದಿದ್ದು ಇದೀಗ ವಿದ್ಯುತ್ ಮೀಟರ್ ತಲೆನೋವಾಗಿ ಪರಿಣಮಿಸಿದೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರು ವರ್ಷವಿಡಿ ಎಲ್ಲಾ ಔಷಧಿಗಳನ್ನು ರೋಗಗಳಿಗೆ ಪ್ರಯೋಗ ಮಾಡಿ ಈಗ ಉಳಿದ ಕೊನೆಯನ್ನು ತೆಗೆದು ಆಕಾರ ಮಾಡಿಕೊಂಡು, ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡ ರೈತರಿಗೆ ಈಗ ವಿದ್ಯುತ್ ಮೀಟರ್ ಶಾಕ್ ಎದುರಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಎಲೆಚುಕ್ಕಿ. ಸೇರಿ ಅನೇಕ ರೋಗಗಳಿಂದ ಅಡಿಕೆ ಫಸಲು ನೆಲಕಚ್ಚಿದೆ. ಲಕ್ಷ ಲಕ್ಷ ಸಾಲ ಮಾಡಿಕೊಂಡ ರೈತ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಸರ್ಕಾರದ ಅಡಿಯಲ್ಲಿರುವ ಎಸ್ಕಾಂಗಳಿಂದ ಅಡಿಕೆ ಬೆಳೆಗಾರರಿಗೆ ಏಕಾಏಕಿ ಅಡಿಕೆ ಮಿಷನ್ ಬಳಸುವ ವಿದ್ಯುತ್ತಿಗೆ ಪ್ರತ್ಯೇಕ ಮೀಟರ್ ಅಳವಡಿಸಿಕೊಳ್ಳಿ ಎಂಬ ಸೂಚನೆ ಓಡಾಡುತ್ತಿರುವುದು ರೈತರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ.
ಇರೋ ಮೀಟರ್ ಹಾಕಿದರೆ ನಷ್ಟ ಏನು?
ಬಡ, ಮಧ್ಯಮ ವರ್ಗದ ರೈತ ತಾನು ಬೆಳೆಯುವ ಸುಮಾರು 15 ಕ್ವಿಂಟಾಲ್ ಅಡಿಕೆ ಆಕಾರ ಮಾಡಿಕೊಳ್ಳಲು ಗೊರಬಲು ಪಾಲಿಶ್ ಬಳಸಿದರೂ ಸಹ ಸರಿಸುಮಾರು 100 ಯೂನಿಟ್ ವಿದ್ಯುತ್ ಮಾತ್ರ ಬಳಸುತ್ತಾನೆ. ಅಡಿಕೆ ಮಿಷನ್ ನಿಗೆ ಕಮರ್ಷಿಯಲ್(LT7) ವಿದ್ಯುತ್ ಸಂಪರ್ಕ ಪಡೆದುಕೊಳ್ಳಿ ಎನ್ನುವ ಕಂಪನಿಗಳು ತಾತ್ಕಾಲಿಕ ಸಂಪರ್ಕವಾದರೆ ನಾಲ್ಕು ಸಾವಿರ ಕಟ್ಟಿ ಎನ್ನುತ್ತದೆ(ಹಾಗೂ ಉಳಿದ ಹಣವನ್ನು ನಿಮ್ಮ ಮನೆಯ ವಿದ್ಯುತ್ ಸಂಪರ್ಕಕ್ಕೆ ಅಡ್ಜಸ್ಟ್ ಮಾಡುತ್ತೇವೆ ಎನ್ನುತ್ತದೆ), ಆಗ ಪ್ರತಿ ಯೂನಿಟ್ ಕಾಸ್ಟ್ ರೂ.7, ವಿದ್ಯುತ್ತಿಗೆ ಸರಿ ಸುಮಾರು 100 ಯೂನಿಟ್ಟಿಗೆ 700 ರೂಪಾಯಿ ಆಗುತ್ತದೆ. ಆದರೆ ಇನ್ನು ಕಾಯಂ ಬಳಕೆಗೆ ಸಂಪರ್ಕ(LT5) ಪಡೆದುಕೊಂಡರೆ ಮೀಟರ್ ಮಿನಿಮಮ್ ಮತ್ತು ಪ್ರತಿ ಬಳಸಿ ಆರು ರೂ. ಆಗುತ್ತದೆ. ಹೇಗೂ ಇರಲಿ ಈಗ ನಾವು ಬಳಸುತ್ತಿರುವ ವಿದ್ಯುತ್ತಿಗೆ ಮನೆ ಮೀಟರ್ ನಿಂದ ಬಳಸಿದಾಗ 50 ಯೂನಿಟ್ ನಂತರ 5 ರೂಪಾಯಿ, 100 ಯೂನಿಟ್ ನಂತರ ಬಳಸಿದ ಎಲ್ಲಾ ಯುನಿಟ್ಟಿಗೆ 7 ರೂಪಾಯಿ ಕಟ್ಟುತ್ತೇವೆ. ಆದರೂ ಇದೀಗ ಇಲಾಖೆ ಕುರುಡು ನೀತಿ ರೈತ ವಲಯದಲ್ಲಿ ಆಕ್ರೋಶ ಹೆಚ್ಚಿಸಿದೆ.
ನಾಯಕರು ಮಾತನಾಡುತ್ತಿಲ್ಲ ಏಕೆ?
ಮಲೆನಾಡ ರೈತರ ಈ ಸಮಸ್ಯೆ ಬಗ್ಗೆ ಕಾಂಗ್ರೆಸ್ ಶಾಸಕರು, ನಾಯಕರು ಮಾತನಾಡುತ್ತಿಲ್ಲ. ಹೋಗಲಿ ಬಿಜೆಪಿ ಶಾಸಕರು ಕೂಡ ದನಿ ಎತ್ತಿಲ್ಲ. ಒಟ್ಟಿನಲ್ಲಿ ರೈತರ ಸಮಸ್ಯೆ ಯಾರಿಗೂ ಬೇಡವಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಮ್ಮೂರ್ ಎಕ್ಸ್ ಪ್ರೆಸ್ ಅಗ್ರಹಿಸುತ್ತದೆ.