ಅಡಿಕೆಗೆ ಈ ವರ್ಷ ಆತಂಕ!?
– ಮಲೆನಾಡಿನಲ್ಲಿ ಬೆಳೆಗೆ, ಅಡಿಕೆ ಕೊಯ್ಲು ಮಾಡಲು ಮಳೆ ಅಡ್ಡಿ
– ದೊಡ್ಡ ಸಂಸ್ಥೆಗಳಿಂದ ಅಡಿಕೆಯನ್ನು ಹಿಂಪಡೆಯುತ್ತಿರುವ ರೈತರು!
– ಕುಸಿತದ ಧಾರಣೆಯಲ್ಲಿ ಅಡಿಕೆ ಮಾರಲಾಗದೆ ರೈತರು ಕಂಗಾಲು
NAMMUR EXPRESS NEWS
ಶಿವಮೊಗ್ಗ /ಚಿಕ್ಕಮಗಳೂರು: ಕಳೆದ ಆರೇಳು ವಾರಗಳಿಂದ ಅಡಿಕೆ ದರದಲ್ಲಿ ಉಂಟಾದ ಧಾರಣೆಯ ಕುಸಿತದ ಸಂಚಲನ ಮಲೆನಾಡು ಅಡಿಕೆ ಮಾರುಕಟ್ಟೆಯ ಎಪಿಎಂಸಿ ಒಳಗಿನ ಸಹಕಾರಿ ಸಂಘಗಳ ಅಡಿಕೆಗೆ ಹೆಚ್ಚು ಬಾಧಿಸುತ್ತಿದೆ.
ಕಳಪೆ ಅಡಿಕೆ ಮಿಶ್ರಣ, ಗೊರಬಲು ಫಾಲಿಶ್ ಯಂತ್ರದ ಗಟ್ಟಿ ಅಡಿಕೆ ಮಿಶ್ರಣ, ಚೇಣಿದಾರರು ಕ್ವಾಲಿಟಿ ಅಡಿಕೆ ಕೊಡ್ತಾ ಇಲ್ಲ, ಗುಟ್ಕಾ ಕಂಪನಿಯವರು ಅಡಿಕೆ ಕ್ವಾಲಿಟಿ ಸರಿ ಇಲ್ಲದೆ ಕೆಲ ಸಂಸ್ಥೆಗಳ ಅಡಿಕೆಗಳ ಅನೇಕ ಲೋಡ್ಗಳನ್ನು ರಿಟರ್ನ್ಸ್ ಮಾಡಿದಾರೆ, ಅಡಿಕೆ ಬಿಡ್ ಮಾಡುವವರು ಈಗ ಸಹಕಾರ ಸಂಸ್ಥೆಗಳಿಗೆ ಕಮ್ಮಿಯಾಗಿದೆ, ಎಪಿಎಂಸಿ ಯಾರ್ಡ್ನಲ್ಲೇ ಅಡಿಕೆಗೆ ಬಣ್ಣ ಬಳಿದು ಗುಣಮಟ್ಟ ಕುಸಿಯುತ್ತಿರುವುದು, ಹೆಚ್ಚುತ್ತಿರುವ ವಿದೇಶಿ ಅಕ್ರಮ ಆಮದು ಅಡಿಕೆ…ಹೀಗೆ ಅನೇಕ ಕಾರಣಗಳು ಎಪಿಎಂಸಿ ಯಾರ್ಡ್ನಿಂದ ಒಂದೊಂದಾಗಿ ಹೊರಗೆ ಬರುತ್ತಿದ್ದಂತೆ ಅಡಿಕೆ ಧಾರಣೆ ಗಣನೀಯವಾಗಿ ಕುಸಿಯುತ್ತಿದೆ.
ರೈತರ ರಾಶಿ ಇಡಿ ಅಡಿಕೆಗೆ ₹ 35,000ದಿಂದ ₹ 45,000 ಟೆಂಡರ್ ಧಾರಣೆ ಬೀಳುತ್ತಿದ್ದು, ಕುಸಿತದ ಧಾರಣೆಯಲ್ಲಿ ಅಡಿಕೆ ಮಾರಲಾಗದೆ ಕಂಗಾಲಾಗಿದ್ದಾರೆ. ಒಂದೆರಡು ವಾರಗಳು ಮರು ಟೆಂಡರ್ಗೆ ಬಿಟ್ಟರೂ, ಕುಸಿದ ದರದ ಎಸ್ಎಂಎಸ್ ನೋಡಿ, ಬೇರೆ ದಾರಿ ಕಾಣದೆ ರೈತರು ತಮ್ಮ ರಾಶಿ ಇಡಿ ಅಡಿಕೆಯನ್ನು ಹಿಂಪಡೆದು ಓಪನ್ ಮಾರುಕಟ್ಟೆಯಲ್ಲಿ ಮಾರಲು ಮುಂದಾಗುತ್ತಿದ್ದಾರೆ. ₹ 35,000 ಧಾರಣೆ ಕಂಡ ರಾಶಿ ಇಡಿ ಅಡಿಕೆಗೆ ಹೊರಗಡೆ ರೈತರ ಮನೆ ಅಂಗಳದಲ್ಲಿ ₹ 48,000ಕ್ಕೆ ಮಾರಾಟ ಆಗುತ್ತಿದೆ. ಇಷ್ಟೆಲ್ಲ ಆಗುತ್ತಿದ್ದರೂ, ಸಹಕಾರಿ ಸಂಸ್ಥೆಗಳು ಧಾರಣೆ ಕುಸಿಯುತ್ತಿಲ್ಲ ಎಂದು ತೋರಿಸಲು ಬೆರಳೆಣಿಕೆಯ ಕೆಲವು ಲಾಟ್ಗಳಿಗೆ ₹ 49,000 ಬೆಲೆ ಕಾಣಿಸಿ ಒಂದು ಬ್ಯಾಲೆನ್ಸ್ ಮಾಡುವ ಪ್ರಯತ್ನವೂ ನೆಡೆದಿದೆ! ಆದರೆ ದಿನ ಕಳೆದಂತೆ, ಅಡಿಕೆ ವ್ಯವಹಾರ ಮಾಡುವ ಬಹುತೇಕ ರೈತರು, ನಿಜವಾಗಿ ಧಾರಣೆ ಕುಸಿಯುತ್ತಿರುವುದರ ಪರಿಣಾಮದಿಂದ ಕಂಗಾಲಾಗಿದ್ದಾರೆ.
ಕಳಪೆ ಅಡಿಕೆ, ವಿದೇಶಿ ಅಡಿಕೆ, ಗಟ್ಟಿ ಅಡಿಕೆ, ಗೊರಬಲು ನಿಶ್ರಣದ ಅಡಿಕೆ ಎನ್ನುವ ಮೇಲಿನ ಹತ್ತಾರು ಕಾರಣಗಳಿಂದ ರಾಶಿ ಇಡಿ ಅಡಿಕೆಗೆ ಐದಾರು ವಾರಗಳ ಹಿಂದೆ ಇದ್ದ ಸುಮಾರು ₹ 50,000 ಧಾರಣೆ, ಈಗ ಕುಸಿದು ಬೆರಳೆಣಿಕೆಯ ಕೆಲವು ರಾಶಿ ಇಡಿ ಅಡಿಕೆ ಲಾಟ್ಗಳಿಗೆ ಮಾತ್ರ ₹ 49,000 ಬರುತ್ತಿದ್ದರೂ, ಉಳಿದ ಹೆಚ್ಚಿನ ರಾಶಿ ಇಡಿ ಲಾಟ್ಗಳಿಗೆ ಈಗ ₹ 35,000- ₹ 40,000 ಮಾತ್ರ. ಪರಿಣಾಮ, ಪ್ರತಿದಿನ ಅನೇಕ ರೈತರು ತಮ್ಮ ಅಡಿಕೆಯನ್ನು ಬಿಡಿಸಿಕೊಂಡು ಹೋಗುತ್ತಿದ್ದಾರೆ. ಹಿಂಪಡೆದ ಅಡಿಕೆಯನ್ನು ಮನೆಯ ಅಂಗಳಕ್ಕೇ ಬರುವ ಅಡಿಕೆ ಖರೀದಿದಾರರಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಕೆಲವು ಸಂಸ್ಥೆಗಳಲ್ಲಿ ₹ 35,000 ಟೆಂಡರ್ ಬಂದು, ಅಷ್ಟೊಂದು ಕಡಿಮೆ ಬೆಲೆಗೆ ಮಾರಲಾಗದೆ ರೈತರು ಹಿಂಪಡೆದ ಅಡಿಕೆಯನ್ನು ಮನೆ ಅಂಗಳದಲ್ಲಿ ಬಂದು ಖರೀದಿ ಮಾಡುವ ವ್ಯಾಪಾರಸ್ತರು,₹ 47,000-₹ 48,000ಕ್ಕೆ ಖರೀದಿಸುತ್ತಿದ್ದಾರೆ.
ಮಳೆ.. ಕೊಳೆ… ರೋಗ ಈಗ ಸಮಸ್ಯೆ!
ಮಲೆನಾಡಿನ ಈ ವರ್ಷದ ಅಡಿಕೆ ಕುಯಿಲು ಮಾಡಲು ಮಳೆ ಬಿಡುತ್ತಿಲ್ಲ. ಈಗಾಗಲೆ ಜುಲೈ- ಆಗಸ್ಟ್ ನಲ್ಲಿ ಬಿದ್ದ ದಾಖಲೆಯ ಮಳೆಗೆ ಕೊಳೆ ರೋಗ ಬಂದು ಸಾಕಷ್ಟು ಅಡಿಕೆ ಫಸಲು ನಷ್ಟ ಆಗಿದೆ. ಅಡಿಕೆ ಎಲೆ ಚುಕ್ಕಿ ರೋಗವು ಕಳೆದೆರಡು ವರ್ಷಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮಲೆನಾಡಿನ ಅಡಿಕೆ ತೋಟವನ್ನು ವ್ಯಾಪಿಸುತ್ತಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.