ಭೂಮಿ ಹುಣ್ಣಿಮೆ ಹಬ್ಬ: ಭೂಮಿ ತಾಯಿಗೆ ಪೂಜೆ
– ರಾತ್ರಿ ಅಡುಗೆ ಮಾಡಿ ಮುಂಜಾನೆ ಭೂಮಿಗೆ ಅರ್ಪಣೆ
– ಮನೆ ಮನೆಯಲ್ಲೂ ಸಂಭ್ರಮದ ಹಬ್ಬ
NAMMUR EXPRSS NEWS
ಮಲೆನಾಡು, ಕರಾವಳಿ ಭಾಗದ ಪ್ರಮುಖ ಹಬ್ಬ ಭೂಮಿ ಹುಣ್ಣಿಮೆ ಹಬ್ಬವನ್ನು ಜನತೆ, ರೈತರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು. ಶುಕ್ರವಾರವೇ 101 ಸೊಪ್ಪು, ತರಕಾರಿ, ಪದಾರ್ಥ ಒಟ್ಟು ಹಾಕಿ ಹಸಿರಾಗಿ ನಿಂತ ಭೂಮಿ ತಾಯಿಗೆ ಬಯಕೆ ಹಾಕಿ ಪೂಜೆ ಮಾಡಿ ಹಬ್ಬ ಆಚರಣೆ ಮಾಡಲಾಯಿತು. ಶುಕ್ರವಾರ ಹೆರಕು ಸೊಪ್ಪು ಹೆರಕಿ ರಾತ್ರಿ ಎಲ್ಲಾ ಅಡುಗೆ ಮಾಡಿದ ಬಳಿಕ ಮುಂಜಾನೆ ಕೋಳಿ ಕೂಗುವ ಮುನ್ನ ಭೂಮಿಗೆ ಪೂಜೆ ಮಾಡಿ, ಬಯಕೆ ತೀರಿಸಲಾಯಿತು.
ಮಲೆನಾಡಿನ ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಭೂ ತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ. ಹೀಗಾಗಿ ರೈತರು ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು, ಆಕೆಗೆ ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ.
ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ನೂರಾ ಒಂದು ಸೊಪ್ಪಿನ ಕುಡಿ ಪಲ್ಯ ಮಾಡಿ ಅನ್ನ ಮಿಶ್ರಿತ ಬಯಕೆ ಹಾಕುತ್ತರೆ. ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಮಲೆನಾಡಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ (ದೀವರು) ಸಮುದಾಯದಲ್ಲಿ ಈ ಸಂಪ್ರದಾಯ ವಿಶಿಷ್ಟವಾಗಿದೆ. ಸೀಗೆ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ.