- 500ಕ್ಕೂ ಹೆಚ್ಚು ಮಂದಿಯಿಂದ ನಡಿಗೆ
- ರಾಜಕೀಯ ಗಿಮಿಕ್ ಎಂದ ಶಾಸಕ ಜ್ಞಾನೇಂದ್ರ!
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆರಗ ಸಮೀಪದ ಬೀಸುವಿನಲ್ಲಿ ಬಗರ್ ಹುಕುಂ ರೈತನ 2000 ಸಾವಿರ ಅಡಿಕೆ ಗಿಡ ಕಡಿದ ಪ್ರಕರಣ ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಾಯಕತ್ವದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ವಿಯಾಗಿದೆ.
ಶನಿವಾರ ಬೆಳಗ್ಗೆ 8ರಿಂದ ಶುರುವಾದ ಪಾದಯಾತ್ರೆ ಆರಗ-ಸಂಕದಹೊಳೆ ಮಾರ್ಗವಾಗಿ ತೀರ್ಥಹಳ್ಳಿ ತಲುಪಿತು. ಸುಮಾರು 300 ಜನ ಕಾರ್ಯಕರ್ತರು ನಾಯಕನ ಜತೆ ಹೆಜ್ಜೆ ಹಾಕಿದರು. ತೀರ್ಥಹಳ್ಳಿಯ ಅರಣ್ಯ ಅಧಿಕಾರಿಗಳ ಕಚೇರಿ ಎದುರು ಅರಣ್ಯ ಅಧಿಕಾರಿಗಳ ಪ್ರತಿಕೃತಿ ದಹನ ಮಾಡಲಾಯಿತು. ಬಳಿಕ ಅರಣ್ಯ ಇಲಾಖೆ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿಯಲ್ಲಿ ಅಧಿಕಾರಿಗಳು ಶಾಸಕರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದಕ್ಕೆ ಈ ಕೃತ್ಯವನ್ನು ಮಾಡಿಸಿದ್ದಾರೆ. ಆರ್ಎಫ್ಒ ಪ್ರೆಶರ್ ಇದೆ ಎಂದು ಹೇಳುತ್ತಾರೆ. ಜ್ಞಾನೇಂದ್ರ ಪ್ರೆಸರ್..ಗ್ರಾಮ ಪಂಚಾಯತ್ ಚುನಾವಣೆ ಪ್ರೆಸರ್ರೋ ಎಂದು ಕಿಮ್ಮನೆ ಲೇವಡಿ ಮಾಡಿದರು. ನಾನು ಯಾರಿಗೂ ಹೆದರುವ ಮಗ ಅಲ್ಲ, ದುಡ್ಡು ಮಾಡೋದು ನನಗೆ ಬೇಕಾಗಿಲ್ಲ. ಆದರೆ ಜನತೆಗೆ ಅನ್ಯಾಯ ಆಗಲು ಬಿಡಲ್ಲ. ಪಕ್ಷಪಾತ ಮಾಡಿದರೆ ನಮಗೂ ಗೊತ್ತಿದೆ ಎಂದು ಗರಂ ಆದರು.
ತಾಪಂ ಸದಸ್ಯ ಚಂದವಳ್ಳಿ ಪತ್ನಿ ಸೇರಿ ಕೆಲ ಬಿಜೆಪಿ ಕಾರ್ಯಕರ್ತರಿಗೆ ನನ್ನ ಅವಧಿಯಲ್ಲಿ ಬಗುರ್ ಹುಕುಂ ಜಮೀನು ಮಾಡಿಕೊಟ್ಟಿದ್ದೇನೆ. ಆದರೆ ಜ್ಞಾನೇಂದ್ರ ಪಕ್ಷಪಾತ ಮಾಡುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲಾ ಇಲಾಖೆಗಳಲ್ಲಿ ಗೋಲ್ಮಾಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆರಗ ಜ್ಞಾನೇಂದ್ರ ಪವರ್ ಲೆಸ್. ಗ್ರಾಪಂ ಚುನಾವಣೆಗೆ ಮುನ್ನ ಅಡಿಕೆ ಗಿಡ ಕೀಳಿಸಿದ ಅಧಿಕಾರಿಯನ್ನು ಅಮಾನತು ಮಾಡಿಸುತ್ತೇನೆ, ಸಿಎಂ, ಅರಣ್ಯ ಸಚಿವರ ಬಳಿ ಮಾತನಾಡಿದ್ದೇನೆ ಎಂದು ಹೇಳಿದ್ದರು. ಆದರೆ ಆ ಮಾತಿಲ್ಲ. ಸರ್ಕಾರದ ಮಟ್ಟದಲ್ಲಿ ಇವರದ್ದು ನಡೆಯೋಲ್ಲ ಅಂದರೆ ನಾನು ಮಾತನಾಡುತ್ತೇನೆ ಎಂದು ವ್ಯಂಗ್ಯವಾಡಿದರು.
ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರಾದ ಕೆಸ್ತೂರು ಮಂಜುನಾಥ್, ರಮೇಶ್ ಹೆಗ್ಡೆ, ಅಮ್ರಪಾಲಿ ಸುರೇಶ್, ಧರಣೇಶ್, ಹರ್ಷೇಂದ್ರ ಕುಮಾರ್, ಹಾರೋಗೊಳಿಗೆ ಪದ್ಮನಾಬ್, ಬಂಡೆ ವೆಂಕಟೇಶ್, ಬಾಳೆಹಳ್ಳಿ ಪ್ರಭಾಕರ್, ಕೇಳೂರು ಮಿತ್ರ, ಹಸಿರುಮನೆ ಮಹಾಬಲೇಶ್, ಪ್ರದೀಪ್ ಕೆಳಕೆರೆ, ಅಮರನಾಥ ಶೆಟ್ಟಿ, ಜಯಕರ ಶೆಟ್ಟಿ ಇತರರು ಇದ್ದರು.