ಮಲೆನಾಡಲ್ಲೂ ಕಾಡ್ಗಿಚ್ಚು!
– ಬಿಸಿಲಿನ ಅಬ್ಬರ: ಈಗ ಕಾಡ್ಗಿಚ್ಚು ಹುಷಾರ್!
– ಮುಳ್ಳಯ್ಯನಗಿರಿ ತಪ್ಪಲಲ್ಲಿ 4 ಎಕರೆ ಹುಲ್ಲುಗಾವಲು ಭಸ್ಮ!
– ಕುಂಸಿಯಲ್ಲಿ ಮೂರು ಎಕರೆ ಅಡಿಕೆ ತೋಟ ಬೆಂಕಿ ಪಾಲು!
NAMMUR EXPRESS NEWS
ಚಿಕ್ಕಮಗಳೂರು/ ಶಿವಮೊಗ್ಗ: ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚುತ್ತಿದೆ. ಹೊರಗಡೆ ಓಡಾಡದಷ್ಟು ಬಿಸಿಲಿನ ಧಗೆ ಭಯಾನಕವಾಗಿದೆ. ಈ ನಡುವೆ ಎಲ್ಲೆಡೆ ಕಾಡ್ಗಿಚ್ಚು ಈಗ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿ ತಪ್ಪಲಲ್ಲಿರುವ ಚನ್ನಗೊಂಡನಹಳ್ಳಿ ಬಳಿ ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಹುಲ್ಲುಗಾವಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 4 ಎಕರೆಯಷ್ಟು ಹುಲ್ಲುಗಾವಲು ಬೆಂಕಿ ಕೆನ್ನಾಲಗೆಗೆ ಆಹುತಿಯಾಗಿದೆ.
ಇದರಿಂದಾಗಿ ಕೆಲಕಾಲ ಆತಂಕ ಮೂಡಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಮಾಹಿತಿ ಕೊಟ್ಟಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಫೈರ್ವಾಚರ್ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಂಜೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಚನ್ನಗೊಂಡನಹಳ್ಳಿ ಸುತ್ತಮುತ್ತ ಸುಮಾರು 4 ಎಕರೆಯಷ್ಟು ಹುಲ್ಲುಗಾವಲು ಬೆಂಕಿ ಕೆನ್ನಾಲಗೆಗೆ ಕರಕಲಾಗಿತ್ತು.
ಇದಕ್ಕೂ ಮೊದಲು, ಶನಿವಾರ, ಇಲ್ಲಿಗೆ ಸಮೀಪದ ಚುರ್ಚೆಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಸ್ಯ ಸಂಪತ್ತು ನಾಶವಾಗಿದೆ. ಅಲ್ಲಿನ ಬೆಂಕಿಯನ್ನು ಕೂಡ ನಂದಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಕಾಡಿಗೆ ಬೀಳುವ ಬೆಂಕಿ ನಿಯಂತ್ರ ಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಫೈರ್ವಾಚರ್, ಪ್ಲಾಂಟೇಷನ್ ವಾಚರ್ಗಳ ಕಣ್ಣಾವಲು ಇರಿಸಲಾಗಿದೆ ಎಂದು ಡಿಎಫ್ಒ ರಮೇಶ್ಬಾಬು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕುಂಸಿಯಲ್ಲೂ ಮೂರು ಎಕರೆ ತೋಟ ಬೆಂಕಿಗೆ ಆಹುತಿ ಆಗಿದೆ.
ಇದರಿಂದ ರೈತ ಕುಟುಂಬ ಕಂಗಾಲಾಗಿದೆ. ಕಳೆದ ವರ್ಷ ಸಕಲೇಶಪುರದಲ್ಲಿ ತೀರ್ಥಹಳ್ಳಿ ಮೂಲದ ಅರಣ್ಯ ಇಲಾಖೆ ಅಧಿಕಾರಿ ಕಾಡ್ಗಿಚ್ಚಿಗೆ ಬಲಿಯಾಗಿದ್ದರು. ಬೇಸಿಗೆಯಲ್ಲಿ ಸ್ವಲ್ಪ ಹುಷಾರು ತಪ್ಪಿದರೂ ಎಲ್ಲೆಂದರಲ್ಲಿ ಕಾಡ್ಗಿಚ್ಚು ಹರಡುವ ಸಂಭವ ಹೆಚ್ಚಾಗಿರುತ್ತದೆ. ಬೀಡಿ, ಸಿಗರೇಟಿನ ತುಂಡುಗಳನ್ನು ಆರಿಸದೆ ರಸ್ತೆಬದಿಯಲ್ಲಿ ಎಸೆದು ಬರುವ, ಸುಲಭವಾಗಿ ಕಿಡಿ ಹೊತ್ತಿಕೊಳ್ಳುವಂತಹ ವಸ್ತುಗಳನ್ನು ಪರಿಸರದಿಂದ ದೂರವಿಡುವ ಅವಶ್ಯಕತೆ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಜೊತೆ ಪ್ರತೀ ನಾಗರೀಕರು ಜವಾಬ್ಧಾರಿಯುತವಾಗಿ ನಡೆದುಕೊಳ್ಳಬೇಕು.