ಲವ್.. ಕಿರಿಕ್.. ಮತ್ತೆ ಕೊಲೆ!
– ಪ್ರೇಯಸಿ ಹೂತು ಹಾಕಿದ್ದ ಪ್ರಿಯಕರ: ಶವ ತೆಗೆದ ಪೊಲೀಸರು!
– ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿ ಗುಂಡಿ ತೆಗೆದು ಹೂತಿದ್ದ
– ಲವ್ ಮಾಡಿ ಮದುವೆಯಾಗಲು ಆಗದಕ್ಕೆ ಕೊಲೆ ಮಾಡಿದ!
NAMMUR EXPRESS NEWS
ಶಿವಮೊಗ್ಗ: ಪ್ರೀತಿಸಿದ್ದ ಯುವತಿ ಮದುವೆಗೆ ಒತ್ತಾಯ ಮಾಡಿದ್ದಕ್ಕೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಲ್ಲದೆ, ಗುಂಡಿ ತೆಗೆದು ಹೂತಿಟ್ಟಿದ್ದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ನ್ಯಾಯಾಧೀಶರ ಅನುಮತಿ ಪಡೆದು ಗುರುವಾರ ಹೊರ ತೆಗೆಯಲಾಯಿತು. ಈ ಘಟನೆ ಮಲೆನಾಡಲ್ಲಿ ಭಾರೀ ಸದ್ದು ಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಅಚ್ಚರಡಿ ಗ್ರಾಮದ ಸೌಮ್ಯಾ(27) ಮೃತ ಯುವತಿ. ಇದೀಗ ಆಕೆಯ ಪ್ರಿಯಕರ ತಾಳುಗುಪ್ಪದ ಸೃಜನ್ನನ್ನು ಬಂಧಿಸಲಾಗಿದ್ದು, 20 ದಿನದ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯಕರನ ಭೇಟಿ ಮಾಡಲು ಸೌಮ್ಯಾ ಜು.2ರಂದು ಸಾಗರಕ್ಕೆ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಮದುವೆ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಕೊಪಿತಗೊಂಡ ಆತ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹ ಮುಚ್ಚಿಟ್ಟಿದ್ದ. ಬಳಿಕ ತಾಳಗುಪ್ಪಕ್ಕೆ ಸೌಮ್ಯಾ ತೆರಳಿ ತನ್ನ ಕಾರು ತೆಗೆದುಕೊಂಡು ಬಂದು ಮೃತದೇಹವನ್ನು ಸಾಗಿಸಿ ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿ ಗುಂಡಿ ತೆಗೆದು ಹೂತಿದ್ದು ಬಯಲಾಗಿದೆ.
ಜು.2ರಂದು ತೆರಳಿದ್ದ ಸೌಮ್ಯಾ ರಾತ್ರಿಯಾದರೂ ವಾಪಸ್ ಮನೆಗೆ ಬಂದಿರಲಿಲ್ಲ. ಸೌಮ್ಯಾಳ ಪ್ರೀತಿ ವಿಷಯ ಗೊತ್ತಿದ್ದ ಆಕೆಯ ತಾಯಿ ಮಗಳ ಮೊಬೈಲ್ಗೆ ಫೋನ್ ಮಾಡಿದ್ದರು. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸೃಜನ್ಗೆ ಫೋನ್ ಮಾಡಿದಾಗ ಮೊಬೈಲ್ ಬ್ಲೂಟೂತ್ ಕೊಡಿಸಿ ಬಸ್ ಹತ್ತಿಸಿದ್ದೆ ಎಂದು ಸುಳ್ಳು ಹೇಳಿದ್ದ. ಆತಂಕದಿಂದ ಪಾಲಕರು ಜು.3ರಂದು ಕೊಪ್ಪ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಮಳೆಯಲ್ಲೇ ಶವ ತೆಗೆದರು!
ಶಿವಮೊಗ್ಗ ಪೊಲೀಸರು ಮಳೆಯಲ್ಲೇ ಶವ ತೆಗೆದಿದ್ದು, ಮರಣೋತ್ತರ ಪರೀಕ್ಷೆ ನಡೆದಿದೆ. ಕೊಪ್ಪ ಮತ್ತು ತೀರ್ಥಹಳ್ಳಿ ಪೊಲೀಸರು ಈ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ತೀರ್ಥಹಳ್ಳಿಯಲ್ಲಿ ತಿಂಗಳಲ್ಲಿ ಎರಡನೇ ಕೇಸ್
ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಲವ್ ಮತ್ತು ಕಿರಿಕ್ ಕೊಲೆ ಪ್ರಕರಣ ಎರಡನೆಯದ್ದಾಗಿದೆ. ಇತ್ತೀಚಿಗೆ ಆಗುಂಬೆ ಬಳಿ ಯುವತಿಯನ್ನು ಪ್ರಿಯಕರ ಕೊಲೆ ಮಾಡಿ ಘಾಟಿಗೆ ಎಸೆದಿದ್ದು ಹಂತಕನನ್ನು ಬಂಧಿಸಲಾಗಿತ್ತು.