ಮಲ್ನಾಡ್ ಟಾಪ್ ನ್ಯೂಸ್
– ಭದ್ರಾವತಿಯಲ್ಲಿ ಕಡವೆ ಮಾಂಸದ ಜೊತೆ ಸಿಕ್ಕಿಬಿದ್ದ ಆರೋಪಿ!
– ಹುಲಿಕಲ್: ಹಿಟ್ ಅಂಡ್ ರನ್ ಗೆ ಬಲಿಯಾದ ಸ್ವಾವಲಂಬಿ ಮೀನಜ್ಜ!
– ಶಿವಮೊಗ್ಗ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ!
– ಶಿವಮೊಗ್ಗ: ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಮಹಿಳೆ ನಾಪತ್ತೆ!
NAMMUR EXPRESS NEWS
ಶಿವಮೊಗ್ಗ: ಭದ್ರಾವತಿ ತಾಲ್ಲೂಕು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಡವೆ ಬೇಟೆಯಾಡಿದ ಆರೋಪಿಯನ್ನು ಬಂಧಿಸಿದ್ದಾರೆ. ನ.11ರಂದು ಭದ್ರಾವತಿ ವಲಯದ ಕೂಡ್ಲಿಗೆರೆ ಶಾಖೆಯ ಹೊಸೂರು ಗ್ರಾಮದ ದಾನವಾಡಿ ಕಿರು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿರುವ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಭದ್ರಾವತಿ ಹಾಗೂ ಚನ್ನಗಿರಿ ವಿಭಾಗದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಯನ್ನು ಬಂಧಿಸಿರುವ ಅರಣ್ಯ ಸಿಬ್ಬಂದಿ, ಕಡವೆಯ ಮಾಂಸವನ್ನು ಜಪ್ತು ಮಾಡಿದ್ದಾರೆ..
* ಹುಲಿಕಲ್: ಹಿಟ್ ಅಂಡ್ ರನ್ ಗೆ ಬಲಿಯಾದ ಸ್ವಾವಲಂಬಿ ಮೀನಜ್ಜ!
ಹುಲಿಕಲ್: ಹುಲಿಕಲ್ ನಿವಾಸಿ 102 ವರ್ಷದ ಮೀನಜ್ಜ ಅಲಿಯಾಸ್ ಕೃಷ್ಣ ದೇವರು ಎಂಬುವವರು ರಸ್ತೆ ಅಪಘಾತಕ್ಕೆ ಮರಣಹೊಂದಿದ ಘಟನೆ ನಡೆದಿದೆ. ರಾತ್ರಿ 8 ರಿಂದ 8.30ರ ಸುಮಾರಿಗೆ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ವೇಳೆ ಕಾರು ಮತ್ತು ಟ್ಯಾಂಕರ್ ಓವರ್ ಟೇಕ್ ಮಾಡುವ ಭರದಲ್ಲಿ ಮೀನಜ್ಜನಿಗೆ ಡಿಕ್ಕಿ ಹೊಡೆದ ಪರಿಣಾಮ ಮೀನಜ್ಜ ತೀವ್ರ ಗಾಯಗೊಂಡಿದ್ದು ನಗರ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದರೂ ಕಾರು ನಿಲ್ಲಿಸದೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸಿಪಿಐ ಗುರಣ್ಣ ಎಸ್ ಹೆಬ್ಬಾಳ, ಪಿಎಸ್ಐ ಶಿವಾನಂದ್ ಕೋಳಿ ಸಿಎಂ ಬಂದೋಬಸ್ತ್ ಗೆ ತೆರಳಿದ್ದ ಕಾರಣ ಎಎಸ್ಐ ಕುಮಾರ್, ಮಾಸ್ತಿಕಟ್ಟೆ ಉಪಠಾಣೆ ಸಿಬ್ಬಂದಿ ಅರುಣೋದಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಿಟ್ ಅಂಡ್ ರನ್ ಮಾಡಿದ ಕಾರಿನ ಶೋಧ ಕಾರ್ಯ ಆರಂಭಿಸಿದ್ದಾರೆ.
* ಶಿವಮೊಗ್ಗ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ!
ಶಿವಮೊಗ್ಗ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 27 ವರ್ಷದ ಮಹಿಳೆಯನ್ನ ಲೈಂಗಿಕವಾಗಿ ಬಳಸಿಕೊಂಡ 62 ವರ್ಷದ ವೃದ್ಧನಿಗೆ ಇಲ್ಲಿನ 2ನೇ ಜೆಎಂಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2016ನೇ ಸಾಲಿನಲ್ಲಿ ಶಿವಮೊಗ್ಗ ಟೌನ್ ನ 62 ವರ್ಷದ ವ್ಯಕ್ತಿಯೊಬ್ಬ 27 ವರ್ಷದ ಮಹಿಳೆಯೊಬ್ಬಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು. ಆಕೆಯ ಫೋಟೋಗಳನ್ನು ಇಟ್ಟುಕೊಂಡು, ಒಂದು ವೇಳೆ ದೂರು ನೀಡದರೆ ನಿನ್ನ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದು,ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶಾರದಾ ಕೊಪ್ಪದರವರು ಪ್ರಕರಣದ ಆರೋಪಿಗೆ 1 ವರ್ಷ 6 ತಿಂಗಳು ಸಾದಾ ಕಾರಾವಾಸ ಶಿಕ್ಷೆ ಮತ್ತು ರೂ 40,000/- ರೂ ಗಳ ದಂಡ, ದಂಡದ ಮೊತ್ತದಲ್ಲಿ 36,000/- ರೂಗಳನ್ನು ನೊಂದ ಮಹಿಳೆಗೆ ನೀಡಲು ಆದೇಶಿಸಿರುತ್ತಾರೆ.
* ಶಿವಮೊಗ್ಗ: ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಮಹಿಳೆ ನಾಪತ್ತೆ!
ಶಿವಮೊಗ್ಗದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶನಗರ 5ನೇ ಕ್ರಾಸ್ ವಾಸಿ ಕೋಟೆಪ್ಪ ಎಂಬುವವರ ಪತ್ನಿ 41 ವರ್ಷದ ಪಾರ್ವತಮ್ಮ ಎಂಬ ಮಹಿಳೆ ನ.09 ರಂದು ರಾತ್ರಿ ತನ್ನ ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ಮಹಿಳೆಯ ಚಹರೆ 4.5 ಅಡಿ ಎತ್ತರ, ದುಂಡುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಆರೆಂಜ್ ಕಲರ್ ಸೀರೆ ಮತ್ತು ಹಸಿರು ಬಣ್ಣದ ರವಿಕೆ ಧರಿಸಿರುತ್ತಾರೆ. ಈ ಮಹಿಳೆಯ ಕುರಿತು ಸುಳಿವು ದೊರಕಿದಲ್ಲಿ ಜಯನಗರ ಪೊಲೀಸ್ ಠಾಣೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.