ಮಲ್ನಾಡ್ ಟಾಪ್ ನ್ಯೂಸ್
– ಭಧ್ರಾವತಿ: ಖಾಲಿ ಜಾಗದಲ್ಲಿ ಕುತ್ತಿಗೆ ಹಿಸುಕಿ ಯುವಕನ ಕೊಲೆ, ತಂಗಿ ಗಂಡನಿಂದಲೇ ಸುಪಾರಿ?
– ಸಾಗರ: ಬಸ್ ಹೆಡ್ ಲೈಟ್ ಕಿರಿಕ್ ಡ್ರೈವರ್, ಕಂಡಕ್ಟರ್ಗೆ ಹಲ್ಲೆ
– ಹೆಂಡತಿಯನ್ನೇ ಕೊಂದ ಗಂಡ, ಶಿಕಾರಿಪುರದಲ್ಲಿ ಘಟನೆ
– ಹೊನ್ನಾಳಿಯ ಇಬ್ಬರು ಯುವಕರ ಸಾವು, ಕಾರು, ಕ್ಯಾಂಟರ್ಗೆ ಬೈಕ್ಗಳ ಡಿಕ್ಕಿ!
NAMMUR EXPRESS NEWS
ಭಧ್ರಾವತಿ: ಶಿವಮೊಗ್ಗ ಜಿಲ್ಲೆ ಭಧ್ರಾವತಿ ತಾಲ್ಲೂಕು ಕಾರೇಹಳ್ಳಿ ಗ್ರಾಮದ ಬಳಿಯ ಓರ್ವನನ್ನ ಕೊಲೆ ಮಾಡಿ ಖಾಲಿ ಏರಿಯಾದಲ್ಲಿ ಎಸೆದುಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ತಾಳಯೆಣ್ಣೆ ಪ್ಯಾಕ್ಟರಿ ಬಳಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬನನ್ನ ಕೊಲೆ ಮಾಡಿ ಇಲ್ಲಿ ಎಸೆಯಲಾಗಿದ್ದು, ಕೊಳೆತ ವಾಸನೆಯ ಜಾಡು ಹಿಡಿದ ರೈತರಿಗೆ ಮೃತದೇಹ ಕಾಣಿಸಿದೆ. ತಕ್ಷಣವೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ ಪೊಲೀಸರು , ದಿನ ಕಳೆಯವಷ್ಟರಲ್ಲಿ ಕೇಸ್ ಇತ್ಯರ್ಥ ಪಡಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಸಿಕ್ಕ ಮೃತದೇಹವನ್ನು ಮೈದೊಳಲು ಮಲ್ಲಾಪುರದ ನಿವಾಸಿ ಪರುಶುರಾಮ್ ಎಂದು ಗುರುತಿಸಲಾಗಿದೆ.
ಈತನ ತಂಗಿ ಗಂಡನೇ ಪ್ರಕರಣದ ಪ್ರಮುಖ ಆರೋಪಿ. ಪ್ರಕರಣದಲ್ಲಿ ತರೀಕೆರೆ ತಾಲೂಕಿನ ಓರ್ವ ಸೇರಿದಂತೆ ಮೂವರನ್ನ ಪ್ರಕರಣದಲ್ಲಿ ಬಂಧಿಸಲಾಗಿದೆ. ತಂಗಿ ಗಂಡ ನೀಡಿದ ಸುಪಾರಿ ಅನ್ವಯ ಆರೋಪಿಗಳು ಪರಶುರಾಮನ ಕುತ್ತಿಗೆ ಬಿಗಿದು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಎಸೆದುಹೋಗಿದ್ದರು ಎನ್ನಲಾಗಿದೆ.
* ರಿಪ್ಪನ್ಪೇಟೆ: ಎರಡು ಕಾರು ನಡುವೆ ಮುಖಾಮುಖಿ ಡಿಕ್ಕಿ – ನಾಲ್ವರಿಗೆ ಗಾಯ
ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಕೋಡೂರು ಗ್ರಾಪಂ ವ್ಯಾಪ್ತಿಯ ಶಾಂತಪುರ ಸಮೀಪದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಶಾಂತಪುರ ಸಮೀಪದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಒಂದು ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದ್ದು ಇನ್ನೊಂದು ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.ರಿಪ್ಪನ್ಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
* ಸಾಗರ: ಬಸ್ ಹೆಡ್ ಲೈಟ್ ಕಿರಿಕ್ ಡ್ರೈವರ್, ಕಂಡಕ್ಟರ್ಗೆ ಹಲ್ಲೆ
ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆಯಲ್ಲಿ ಬಸ್ ಹೆಡ್ಲೈಟ್ ಆಫ್ ಮಾಡುವ ವಿಚಾರಕ್ಕೆ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣವೊಂದರ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಾಗರದ ಜೋಗ ಬಸ್ ನಿಲ್ದಾಣದಲ್ಲಿ ಗೋವಾ ಟು ಮೈಸೂರು ಹೋಗುವ ಬಸ್ಸನ್ನು ನಿಲಿಸಿ ಪ್ರಯಾಣಿಕರ ಲಗೇಜ್ ಇಳಿಸುತ್ತಿರುವಾಗ, ಅಲ್ಲಿಗೆ ಬಂದ ಮೂವರು ಡ್ರೈವರ್ಗೆ ಬಸ್ಸಿನ ಲೈಟ್ ಆಫ್ ಮಾಡಲು ಹೇಳಿ ಬಾಯಿಗೆ ಬಂದಂತೆ ಬೈದು ಹೊಡೆಯಲು ಹೋಗಿದ್ದಾರೆ ಎಂದು ದೂರಲಾಗಿದೆ. ಪೃಶ್ನೆ ಮಾಡಿದ್ದಕ್ಕೆ ಕಂಡಕ್ಟರ್ರವರ ಮೇಲೆ ಹಲ್ಲೆ ಮಾಡಿದ್ದು ಕಂಡಕ್ಟರ್ ಕಿವಿಗೆ ಕಲ್ಲಿನಿಂದ ಗುದ್ದಿ ಗಾಯಗೊಳಿಸಲಾಗಿದೆ. ಈ ಸಂಬಂಧ ಗಾಯಾಳು ನೀಡಿದ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
* ಹೆಂಡತಿಯನ್ನೇ ಕೊಂದ ಗಂಡ, ಶಿಕಾರಿಪುರದಲ್ಲಿ ಘಟನೆ
ಶಿಕಾರಿಪುರ: ಶಿಕಾರಿಪುರದ ರಾಘವೇಂದ್ರ ಬಡಾವಣೆಯಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಘಟನೆ ನಡೆದಿದ್ದಕ್ಕೆ ಪತ್ನಿಯ ಮೇಲಿನ ಅನುಮಾನ ಕಾರಣ ಎಂದು ಆರೋಪಿಸಲಾಗಿದೆ. ಪ್ಯಾಸೆಂಜರ್ ಆಟೋ ಓಡಿಸುತ್ತಿದ್ದ ನಾಗರಾಜ್ಗೆ, ಹಾಸ್ಟೆಲ್ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ತನ್ನ ಪತ್ನಿಯ ಮೇಲೆ ಅನುಮಾನವಿತ್ತು. ಇದೇ ವಿಚಾರಕ್ಕೆ ಆತ ಪತ್ನಿಯನ್ನು ಆಗಾಗ ಹೆದರಿಸುತ್ತಿದ್ದ ಎನ್ನಲಾಗಿದೆ. ಈ ನಡುವೆ ಘಟನೆ ನಡೆದ ದಿನ ಮನೆಯಲ್ಲಿದ್ದವರೆಲ್ಲರೂ ಊಟ ಮುಗಿಸಿ ಮಲಗಿದ್ದಾರೆ. ಬೆಳಗ್ಗೆ ಮೂರರ ಜಾವಕ್ಕೆ ಎದ್ದ ನಾಗರಾಜ್ ಮಲಗಿದ್ದ ಪತ್ನಿಯ ಮೇಲೆ ಇದ್ದಕ್ಕಿದ್ದಂತೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಈ ವೇಳೆ ಮಗನಿಗೆ ತಂದೆಯ ಕಾಲು ತಾಗಿ ಎಚ್ಚರವಾಗಿ ಆತ ತಾಯಿ ಮೇಲೆ ಹಲ್ಲೆಯಾಗುವುದನ್ನು ತಡೆಯುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಆತನ ತಲೆಗೆ ಏಟು ಬಿದ್ದಿದೆ. ಇಷ್ಟೊತ್ತಿಗೆ ನಾಗರಾಜ್ ಹಲ್ಲೆ ಮಾಡುವ ಭಯದಿಂದ ಅವರ ಪತ್ನಿ ಮಲಗಿದ್ದಲ್ಲಿಂದ ಎದ್ದು ಓಡಿದ್ದಾರೆ. ಅವರನ್ನ ಹಿಂಬಾಲಿಸಿದ ನಾಗರಾಜ್ ಬೀದಿ ಬದಿಯಲ್ಲಿ ಹೊಡೆದು ಸಾಯಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಸಿಲಾಗಿದೆ.
* ಹೊನ್ನಾಳಿಯ ಇಬ್ಬರು ಯುವಕರ ಸಾವು, ಕಾರು, ಕ್ಯಾಂಟರ್ಗೆ ಬೈಕ್ಗಳ ಡಿಕ್ಕಿ!
ಹೊಳೆಹೊನ್ನೂರು: ಹೊಳೆಹೊನ್ನೂರು ಪೊಲೀಸ್ ಠಾಣಾ ಬಳಿ ಡಿ. 13ಕ್ಕೆ ಬೆಳಗ್ಗೆ ಎರಡು ಕಡೆ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಬಳಿ ಇಂದು ಬೆಳಗ್ಗೆ 7 ಗಂಟೆಗೆ ಸುಮಾರಿಗೆ ಕ್ಯಾಂಟರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದಾನೆ. ಆನವೇರಿ ಕಡೆಯಿಂದ ಕೈಮರದ ಕಡೆಗೆ ಬೈಕ್ ನಲ್ಲಿ ಬಂದು ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮಲ್ಲಾಪುರದ ಅಕ್ಕಿಮಟ್ಟಿ ಸಮೀಪ ಗೊಬ್ಬರದ ಕ್ಯಾಂಟರ್ ರಸ್ತೆ ಬದಿ ಗೊಬ್ಬರ ಇಳಿಸುತ್ತಿದ್ದು, ಈ ವೇಳೆ ಕ್ಯಾಂಟರ್ಗೆ ಬೈಕ್ ಡಿಕ್ಕಿಯಾಗಿ ಭುವನ ಎಂಬ ಹೆಸರಿನ 18 ವರ್ಷದ ಯವಕ ಸಾವನ್ನಪ್ಪಿದ್ದಾರೆ. ಈತ ಹೊನ್ನಾಳಿ ತಾಲೂಕು ಲಿಂಗಾಪುರ ಗ್ರಾಮದವನು. ಇನ್ನೊಂದು ಕಡೆಯಲ್ಲಿ ನಾಗಸಮುದ್ರ ಸಮೀಪ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸಾಗರ ಎಂಬ 25 ವರ್ಷದ ಯುವಕ ಕಾಣಿಸಿಕೊಂಡಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಿಂದ ಶಿವಮೊಗ್ಗದ ಕಡೆ ಬರುತಿದ್ದ ಕಾರು ಹಾಗೂ ಸನ್ಯಾಸಿಮಗ್ಗೆ ಕಡೆಯಿಂದ ನಾಗಸಮುದ್ರ ಕಡೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿ ಘಟನೆ ನಡೆದಿದೆ. ಮೃತ ಯುವಕ ಹೊನ್ನಾಳಿ ತಾಲೂಕಿನ ಸೋಮಲಪುರ ಗ್ರಾಮದವನು ಎಂದು ತಿಳಿದು ಬಂದಿದೆ