ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಭಾರೀ ಶೋಧ!
- ತೀರ್ಥಹಳ್ಳಿಯಲ್ಲಿ ಶೋಧ ಕಾರ್ಯಾಚರಣೆ
- ಮಂಗಳೂರಲ್ಲಿ ಓರ್ವ ಅರೆಸ್ಟ್: ಇನ್ನೋರ್ವ ನಾಪತ್ತೆ
- ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು..?
NAMMUR EXPRESS NEWS
ಶಿವಮೊಗ್ಗ : ಐಎಸ್ಐಎಸ್ ಉಗ್ರ ಸಂಘಟನೆ ಜೊತೆ
ಸಂಬಂಧ ಹೊಂದಿರುವ ಮೂವರು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಐಸಿಸ್ ಉಗ್ರ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಶಿವಮೊಗ್ಗದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ವಿದ್ಯಾರ್ಥಿ ಯಾಸಿನ್ ಹಾಗೂ ಮಂಗಳೂರು ಮೂಲದ ಮಾಜ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊರ್ವನನ್ನು ಮಂಗಳೂರಲ್ಲಿ ಅರೆಸ್ಟ್ ಮಾಡಲಾಗಿದೆ. ಬಾಂಬ್ ಬ್ಲಾಸ್ಟ್ ಸೇರಿದಂತೆ ಉಗ್ರ ಚಟುವಟಿಕೆಗೆ ತರಬೇತಿ ನೀಡಲಾಗುತ್ತಿದೆ ಎನ್ನುವ ಆಘಾತಕಾರಿ ಮಾಹಿತಿ ತಿಳಿದುಬಂದಿದೆ.ಮಾಜ್ ಮುನೀರ್ ಅಹಮ್ಮದ್ ,(22)ಮಂಗಳೂರು ಮತ್ತು ಸಯ್ಯದ್ ಯಾಸೀನ್ ಬೈಲು, (21) ಸಿದ್ದೇಶ್ವರ ನಗರ, ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಇಂತಹ ವ್ಯಕ್ತಿಗಳಿರುವುದು ಆಶ್ಚರ್ಯಕರ. ಈ ಹಿಂದೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಿದಾಗ ಕೆಲವರು ಪ್ರಶ್ನೆ ಮಾಡಿದ್ದರು. ಈಗ ಉತ್ತರ ಸಿಕ್ಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ತಪ್ಪಿಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದರು.
ಬಂಧಿತರ ವಿಚಾರಣೆ ನಡೆಯುತ್ತಿದೆ. ಇದರ ಹಿಂದೆ ಇನ್ನೆಷ್ಟು ಜನರಿದ್ದಾರೆ ಅನ್ನುವುದು ಕೂಲಂಕಷ ತನಿಖೆಯಿಂದ ಗೊತ್ತಾಗಬೇಕಿದೆ. ಇಬ್ಬರ ವಿರುದ್ಧ ಯುಎಪಿಎ ಅಡಿ ಕೇಸ್ ದಾಖಲಾಗಿದೆ. ಇಬ್ಬರನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ತಿಳಿಸುತ್ತೇನೆ. ಪೊಲೀಸರು ರಾಜ್ಯದಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ಹಾಗಾಗಿ ಇವರೆಲ್ಲ ಸಿಕ್ಕಿ ಬೀಳುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಮಂಗಳೂರಲ್ಲಿ ಓರ್ವ ಅರೆಸ್ಟ್!
ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಉಗ್ರರನ್ನು ಶಿವಮೊಗ್ಗದಲ್ಲಿ ಬಂಧಿಸಿದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಮಂಗಳೂರು ಮೂಲದ ಮಾಜ್ ಮುನೀರ್ ಅಹ್ಮದ್ ಮತ್ತು ನಾಪತ್ತೆಯಾಗಿರುವ ಶಂಕಿತ ಉಗ್ರ ಮೊಹಮ್ಮದ್ ಶರೀಕ್ ಜೊತೆ ನಂಟು ಹೊಂದಿದ್ದ ಮಂಗಳೂರಿನ ಅನ್ಸರ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಅಜ್ಞಾತ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಬಂಧಿತರ ಶಂಕಿತರ ಸಂಖ್ಯೆ ಮೂರಕ್ಕೇರಿದ್ದು, ತಲೆಮರೆಸಿಕೊಂಡಿರುವ ಶಿವಮೊಗ್ಗ ಮೂಲದ ಮತ್ತೋರ್ವನ ಬಂಧನಕ್ಕೆ ತನಿಖೆ ಮುಂದುವರಿದಿದೆ.
ತೀರ್ಥಹಳ್ಳಿ ಮೂಲದ ಮತ್ತೊಬ್ಬ ಸಿಕ್ಕಿಲ್ಲ!
ತೀರ್ಥಹಳ್ಳಿಯ ಭೂಗತ ಶಂಕಿತ ಉಗ್ರ ಮತೀನ್ ತಲೆಮರೆಸಿಕೊಂಡು ಎರಡು ವರ್ಷಗಳು ಕಳೆದಿವೆ. ಈತನ ಸುಳಿವು ಇನ್ನೂ ಸಿಕ್ಕಿಲ್ಲ. ಈ ವ್ಯಕ್ತಿ ತೀರ್ಥಹಳ್ಳಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಪತ್ತೆ ಆಗಿತ್ತು, ಸದ್ಯ ಈ ವ್ಯಕ್ತಿಯ ಬಂಧನಕ್ಕೆ ಎನ್ಐ ಮುಂದಾಗಿದೆ. ಅದರಂತೆ ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಮತೀನ್ ತಮಿಳುನಾಡಿನ ಹಿಂದೂ ಕಾರ್ಯಕರ್ತನ ಹತ್ಯೆಯ ಆರೋಪಿ ಆಗಿದ್ದಾನೆ.