ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಹೊಸ ಶಕೆ!
– ನಬಾರ್ಡ್ ನಿಂದ 195.73 ಕೋಟಿ ಸಾಲ ಪಡೆದು ವಿವಿಧ ಯೋಜನೆ ರೂಪಿಸಲು ಕ್ರಮ
– ನೂತನ ಎಂಎಡಿಬಿ ಅಧ್ಯಕ್ಷ ಮಂಜುನಾಥ ಗೌಡ ವಿಶೇಷ ಆಸಕ್ತಿ
NAMMUR EXPRESS NEWS
ಶಿವಮೊಗ್ಗ: ಮಲೆನಾಡ ಅಭಿವೃದ್ಧಿ ಮಂಡಳಿಯಲ್ಲಿ ಈಗ ಅಭಿವೃದ್ಧಿ ಪರ್ವ ಶುರುವಾಗಿದೆ. ನಬಾರ್ಡ್ ನಿಂದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ 195.73 ಕೋಟಿ ರೂ.ಗಳ ಸಾಲದ ಮೂಲಕ ಅನುದಾನ ನೀಡುವಂತೆ ಸರ್ಕಾರದ ಮೂಲಕ ಮನವಿ ಮಾಡಲಾಗಿದೆ. ಎಂಎಡಿಬಿಯ ನೂತನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾಹಿತಿ ನೀಡಿ, ಎಂಎಡಿಬಿ ಎಂಬುವುದು ಒಂದು ವಿಸ್ತಾರವಾದ ಕ್ಷೇತ್ರವಾಗಿದೆ. ಇಲ್ಲಿ 12 ಸಂಸದರು, 65 ವಿಧಾನಸಭಾ ಸದಸ್ಯರು, 21 ವಿಧಾನಪರಿಷತ್ ಸದಸ್ಯರು, 13 ಜಿ.ಪಂ. ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು, 10 ನಾಮನಿರ್ದೇಶಿತ ಸದಸ್ಯರು, ಮಂಡಳಿ ಕಾರ್ಯದರ್ಶಿ ಸೇರಿದಂತೆ ಒಟ್ಟು 135 ಸದಸ್ಯರಿರುತ್ತಾರೆ. 13 ಜಿಲ್ಲೆಗಳಲ್ಲಿ ಇದು ವಿಸ್ತಾರವಾಗಿದ್ದು, 74 ತಾಲ್ಲೂಕುಗಳು, 65 ವಿಧಾನಸಭಾ ಕ್ಷೇತ್ರಗಳು, 21 ವಿಧಾನಪರಿಷತ್ ಸದಸ್ಯರು ಈ ಮಂಡಳಿಯಲ್ಲಿ ಬರುತ್ತಾರೆ.
ನನಗೆ ಬಹಳ ದೊಡ್ಡ ಜವಾಬ್ದಾರಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ನೀಡಿದ್ದಾರೆ. 40 ಕೋಟಿ ಅನುದಾನವನ್ನು ನಮ್ಮ ನಿಗಮಕ್ಕೆ ಬಜೆಟ್ನಲ್ಲಿ ತೆಗೆದಿಟ್ಟಿದ್ದಾರೆ. ಈ ಹಣದಲ್ಲಿ ಮಲೆನಾಡಿಗೆ ಪೂರಕ ಕೆಲಸಗಳನ್ನು ನಾವು ಮಾಡಬೇಕಾಗಿದೆ ಎಂದರು. ರಸ್ತೆ, ಶಾಲೆ, ಕಟ್ಟಡ, ಕುಡಿಯುವ ನೀರಿನ ಘಟಕಗಳು, ಚೆಕ್ ಡ್ಯಾಂ ಹಿಂಗು ಗುಂಡಿಗಳು, ಕಾಲ ಸಂಕ, ತೂಗು ಸೇತುವೆ ಇನ್ನಿತರೆ ಸೇತುವೆಗಳಿಗಾಗಿ ಈ ಹಣವನ್ನು ಬಳಸಿಕೊಳ್ಳಬೇಕಾಗಿದೆ. ದಿವಂಗತ ಬಂಗಾರಪ್ಪನವರು 1991ರಲ್ಲಿ ಈ ಮಂಡಳಿಯನ್ನು ರಚಿಸಿ ಚೆನ್ನಾಗಿ ನಡೆಯುತ್ತಿದ್ದ ಮಂಡಳಿ ಆರ್ಥಿಕ ಮುಂಗಟ್ಟನ್ನು ಎದುರಿಸಿದ್ದು, ಈಗಲೂ ಹಾಗೆಯೇ ಇದೆ. ಇದನ್ನು ಸರಿಪಡಿಸಿಕೊಂಡು ಅತ್ಯುತ್ತಮ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.
ಈ ಎಲ್ಲಾ ಹಿನ್ನಲೆಯಲ್ಲಿ ನಬಾರ್ಡ್ನಿಂದ ನಾವು ಸಾಲವನ್ನು ಬಯಸಿದ್ದೇವೆ. ನಬಾರ್ಡ್ನ ಕೆಲಸ ಕೂಡ ಗ್ರಾಮೀಣಾಭಿವೃದ್ಧಿಯೇ ಆಗಿದೆ. ಹಾಗಾಗಿ, ಸರ್ಕಾರದ ಮೂಲಕ ನಾವು ಈ ಮೆತ್ತ ಕೇಳಿದ್ದೇವೆ. ಅನುದಾನದ ರೂಪದಲ್ಲಿಯೂ ಕೂಡ ಇದನ್ನು ನೀಡಬಹುದು. ಹಾಗಾಗಿ 195 ಕೋಟಿ ನೀಡಿದರೆ, ಬಹಳಷ್ಟು ಕೆಲಸಗಳನ್ನು ಮಾಡಲು ಸಾಧ್ಯ ಎಂದರು.
ಮಲೆನಾಡಿನಲ್ಲಿ ಬೃಹತ್ ತೂಗು ಸೇತುವೆ ಹಾಗಬೇಕಾಗಿದೆ. ಇದಕ್ಕಾಗಿ 115 ಕೋಟಿ ವೆಚ್ಚವಾಗಬಹುದು. 40 ಸಣ್ಣ ಸಣ್ಣ ತೂಗು ಸೇತುವೆಗಳು ನಿರ್ಮಾಣ ವಾಗಬೇಕಾಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸಬೇಕಾಗಿದೆ. ಸುಮಾರು 40 ಕೋಟಿ ವೆಚ್ಚದಲ್ಲಿ ಕಾಲು ಸಂಕಗಳ ನಿರ್ಮಾಣವಾಗಬೇಕಾಗಿದೆ. ಹೀಗೆ ಪ್ರಥಮ ಆದ್ಯತೆಯಾಗಿದೆ ಕಾಲು ಸಂಕ, ತೂಗು ಸೇತುವೆ, ರಸ್ತೆ, ಚೆಕ್ ಡ್ಯಾಂ ಇವುಗಳಿಗೆ ಹಣವನ್ನು ವಿನಿಯೋಗಿಸಲಾಗುವುದು ಎಂದರು.