ಶಿವಮೊಗ್ಗ ಟಾಪ್ ನ್ಯೂಸ್
ಸಾಗರದಲ್ಲಿ ಟೂರಿಸ್ಟ್ ಬಸ್ ಪಲ್ಟಿ: ಇಬ್ಬರು ಸಾವು!
– ಸಾಗರ: ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ವ್ಯಕ್ತಿ ಸಾವು
– ಶಿವಮೊಗ್ಗ: ಮದುವೆಗೆ 6 ದಿನ ಬಾಕಿ: ಯುವತಿ ನೇಣಿಗೆ
NAMMUR EXPRESS NEWS
ಸಾಗರ : ಟೂರಿಸ್ಟ್ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೋಗ ಜಲಪಾತ ವೀಕ್ಷಣೆ ಮಾಡಿ ಹೊನ್ನಾವರಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಗೇರುಸೊಪ್ಪ – ಹೊನ್ನಾವರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಗೌರಿಬಿದನೂರಿನಿಂದ ಎರಡು ಬಸ್ಸುಗಳಲ್ಲಿ ಪ್ರವಾಸಿಗರು ವಿವಿಧ ಪ್ರವಾಸಿ ತಾಣಕ್ಕೆ ತೆರಳುತ್ತಿದ್ದರು. ಇವತ್ತು ಜೋಗ ಜಲಪಾತಕ್ಕೆ ಭೇಟಿ ನೀಡಿ, ಅಲ್ಲಿಂದ ತೆರಳುವಾಗ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆ ಮತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾಗರ : ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಅಂದಾಸುರ ರೈಲ್ವೆ ಗೇಟ್ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಯ ಮಾಹಿತಿ ಇನ್ನು ತಿಳಿದು ಬಂದಿಲ್ಲ. ತಿಮ್ಮಪ್ಪ ಪುರದಾಳು ಹಾಗೂ ಸೀತಮ್ಮ ಎಂಬವರಿಗೆ ತೀವ್ರ ಗಾಯವಾಗಿದ್ದು ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದುರು ಭಾಗದ ಬೈಕ್ ನಲ್ಲಿದ್ದ ಇನ್ನೂ ಇಬ್ಬರು ಗಾಯಾಳುಗಳ ಮಾಹಿತಿ ಕೂಡ ತಿಳಿದುಬಂದಿಲ್ಲ. ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.
– ಮದುವೆಗೆ 6 ದಿನ ಬಾಕಿಯಿರುವಾಗಲೇ ಯುವತಿ ನೇಣಿಗೆ ಶರಣು
ಶಿವಮೊಗ್ಗ: ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ 2 ನೇ ತಿರುವಿನ ಮನೆಯಲ್ಲಿ ಮದುವೆಗೆ ನಿಶ್ಚಿತಗೊಂಡಿದ್ದ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣು ಬಿಗಿದುಕೊಂಡ ಯುವತಿಯನ್ನು ಸಯ್ಯದಾ ಸಿಮ್ರನ್ ಎಂಬ 20 ವರ್ಷದ ಯುವತಿ ನೇಣಿಗೆ ಶರಣಾಗಿದ್ದಾಳೆ. ಈಕೆಗೆ ಮೇ. 08 ರಂದು ಮದುವೆ ನಿಶ್ಚತಗೊಂಡಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ನಡೆದಿದ್ದು ಮೃತದೇಹವನ್ನ ಶವಗಾರದಿಂದ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.