ಶಾರದಾಂಬ ಮಹಾರಥೋತ್ಸವಕ್ಕೆ ಸಜ್ಜಾಗುತ್ತಿರುವ ಶೃಂಗೇರಿ..!!!
* ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ: ಭಾಗವಹಿಸಲಿವೆ ಸ್ಥಬ್ಧ ಚಿತ್ರಗಳು,ಕಲಾ ತಂಡಗಳು
* ಸೇರಲಿದೆ ಲಕ್ಷಾಂತರ ಭಕ್ತರು ದಂಡು: ಟ್ರಾಫಿಕ್ ನಿಯಮ ಬದಲು
NAMMUR EXPRESS NEWS
ಶೃಂಗೇರಿ: ಶ್ರಿಶಾರದಾ ಶರನ್ನವರಾತ್ರಿಯ ವಿಜಯದಶಮಿಯ ದಿನದಂದು ಗಜಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶೃಂಗೇರಿ ಶಾರದೆಗೆ ಭಾನುವಾರ ಅದ್ದೂರಿ ಮಹಾರಥೋತ್ಸವ ನಡೆಯಲಿದ್ದು, ವರ್ಷಕ್ಕೊಮ್ಮೆ ನಡೆಯುವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಭಕ್ತರು ಸೇರಲಿದ್ದಾರೆ. ರಥ ಬೀದಿಯ ಎರಡೂಕಡೆಗಳಲ್ಲೂ ನೂರಾರು ಜಾತ್ರೆ ಅಂಗಡಿ ಬಂದಿದ್ದು ಅಂಗಡಿಗಳಿಗೆ ಜನರು ಮುಗಿಬಿದ್ದಿದ್ದಾರೆ. ವಿಜಯ ದಶಮಿಯಂದು ಜಗದ್ಗುರು ಶ್ರೀಶ್ರೀವಿಧುಶೇಖರ ಮಹಾಸ್ವಾಮಿಗಳು ಹರಿಹರನಾಮಾಮೃತ ಎಂಬ ಲೇಖನ ಯಜ್ಞಕ್ಕೆ ಚಾಲನೆ ನೀಡಿದರು.
ರಥೋತ್ಸವಕ್ಕೆ ಮಳೆಯ ಭಯ..!!
ವಾಯುಭಾರ ಕುಸಿತದಿಂದ ಕಳೆದ ದಿನಗಳಿಂದ ಮಳೆಯಾಗುತ್ತಿದ್ದು ಈ ಅಕಾಲಿಕ ಮಳೆಯಿಂದ ಬೀದಿ ಉತ್ಸವಕ್ಕೆ,ವ್ಯಾಪಾರಿಗಳಿಗೆ ತುಂಬಾ ತೊಂದರೆಯುಂಟಾಗಿದೆ. ಇನ್ನೂ ನಾಳೆ ನಡೆಯುವ ಮಹಾರಥೋತ್ಸವ ಸಂದರ್ಭದಲ್ಲಿ ಮಳೆ ಬರುವ ಆತಂಕವಿದೆ. ಅದೇನಿದ್ದರೂ ರಥೋತ್ಸವ,ಪೂಜಾ ಕೈಂಕರ್ಯ,ಭಕ್ತರ ಸಂಭ್ರಮಾಚರಣೆ,ವ್ಯಾಪಾರಿಗಳಿಗೆ ಮಳೆ ಅಡ್ಡಿಯಾಗದಿರಲಿ ಎಂಬುದು ಎಲ್ಲರ ಪ್ರಾರ್ಥನೆ..!!
ಪಟ್ಟದ ಟ್ರಾಫಿಕ್ ನಿಯಮಗಳಲ್ಲಿ ಬದಲಾವಣೆ
ವಿಜಯದಶಮಿ ಪ್ರಯುಕ್ತ ಶಮೀ ಪೂಜೆ,ಬೀದಿ ಉತ್ಸವ ಇರುವುದರಿಂದ ಹಾಗೂ ನಾಳೆ ಬೆಳಿಗ್ಗೆ ಮಹಾರಥೋತ್ಸವ ನಡೆಯುವುದರಿಂದ ಜನ ದಟ್ಟಣೆ ಇರಲಿದ್ದು, ಟ್ರಾಫಿಕ್ ಸಮಸ್ಯೆ ನಿವಾರಿಸಲು ಶೃಂಗೇರಿ ಪಟ್ಟಣ ಪಂಚಾಯ್ತಿ ಹಾಗೂ ಪೋಲೀಸ್ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಿದೆ,ಅದರ ಪ್ರಕಾರ ನಾಳೆ ಬೆಳಿಗ್ಗೆ 8 ಗಂಟೆಯಿಂದ ಮದ್ಯಾಹ್ನ 1 ಗಂಟೆಯ ವರೆಗೆ ಪಟ್ಟಣಪಂಚಾಯ್ತಿ ಕಛೇರಿಯಿಂದ ಕುರುಬರಕೇರಿ ವೃತ್ತದವರೆಗೆ ಎಲ್ಲಾ ರೀತಿಯ ವಾಹನಗಳ ಓಡಾಟ ಮತ್ತು ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು,ಇಂದು ಮತ್ತು ನಾಳೆ ಭಾರತೀ ಬೀದಿಯಲ್ಲಿ ಬಸ್ ಸಂಚಾರ ಇರುವುದಿಲ್ಲವೆಂದು ತಿಳಿಸಿದೆ.