- ತೀರ್ಥಹಳ್ಳಿ ಜೋಡಿ ಕೊಲೆಗೆ ಅಡುಗೆ ಗಲಾಟೆ ಕಾರಣ
- ಹೊರಗಿನ ಕಾರ್ಮಿಕರ ಮೇಲೆ ಪೊಲೀಸ್ ಇಲಾಖೆ ಇಡಲಿ ನಿಗಾ!
NAMMUR EXPRESS NEWS
ತೀರ್ಥಹಳ್ಳಿ: ಊಟದ ವಿಚಾರಕ್ಕೆ ಇಬ್ಬರನ್ನು ಕೊಂದೇ ಬಿಟ್ಟ ಅಡುಗೆಯವ!. ಹೌದು. ತೀರ್ಥಹಳ್ಳಿಯಲ್ಲಿ ನಡೆದ ಜೋಡಿ ಕೊಲೆಗೆ ಅಡುಗೆ ಗಲಾಟೆ ಕಾರಣ ಎಂದು ತಿಳಿದು ಬಂದಿದೆ. ಇನ್ನು ಹೊರಗಿನ ಕಾರ್ಮಿಕರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಲಿ ಎಂಬ ಒತ್ತಾಯ ಜನರಿಂದ ಕೇಳಿ ಬಂದಿದೆ.
ಬುಧವಾರ ರಾತ್ರಿ ಅಡಿಗೆ ಯಾಕೆ ಮಾಡಲಿಲ್ಲವೆಂದು ಇಬ್ಬರಿಂದ ಹಲ್ಲೆ ಮಾಡಿದ್ದರಿಂದ ಕುಪಿತಗೊಂಡ ಅಡಿಗೆಯವ ಮಧ್ಯರಾತ್ರಿ ಇಬ್ಬರ ತಲೆ ಒಡೆದು ಕೊಲೆ ಮಾಡಿದ ಘಟನೆ ಇದೀಗ ಮಲೆನಾಡಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ನೀಡಿದ ಮಾಹಿತಿಯಂತೆ ಬುಧವಾರ ಮಾಡಿದ ಮಧ್ಯಾಹ್ನದ ಅಡಿಗೆಯನ್ನು ಸಂಜೆ ನೀಡಿದ್ದಕ್ಕೆ ಅಡುಗೆ ಕೆಲಸಕ್ಕೆ ನಿಯೋಜನೆಗೊಂಡಿದ್ದ ರಾಜಣ್ಣ ಎಂಬಾತನಿಗೆ ಕೊಲೆಯಾದ ಇಬ್ಬರು ವ್ಯಕ್ತಿಗಳು ಮನಸೋ ಇಚ್ಚೆ ಥಳಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ ರಾಜಣ್ಣ ಮಧ್ಯರಾತ್ರಿ ಹಲ್ಲೆ ಮಾಡಿದ್ದ ಇಬ್ಬರನ್ನು ಅಮಾನುಷವಾಗಿ ಹತ್ಯೆಗೈದಿದ್ದಾನೆ.
ಇಬ್ಬರು ರಾತ್ರೋ ರಾತ್ರಿ ಹೆಣವಾದರು!
ತೀರ್ಥಹಳ್ಳಿಯ ವಿಶ್ವಕರ್ಮ ಭವನ ನಿರ್ಮಾಣ ಕೆಲಸಕ್ಕೆ ದಾವಣಗೆರೆ ಮೂಲದ ಬೀರೇಶ್ (35), ಮಂಜುನಾಥ್ (46) ಮತ್ತು ರಾಜಣ್ಣ ಎಂಬುವರು12 ದಿನಗಳ ಹಿಂದೆ ಬಂದಿದ್ದಾರೆ. ರಾಜಣ್ಣ, ಬೀರೇಶ್, ಮಂಜುನಾಥ್ ಜೊತೆ ಇತರೆ ಇಬ್ಬರು ಸೇರಿ ಐದು ಜನ ಈ ಭವನ ನಿರ್ಮಾಣಕ್ಕೆ ಬಂದಿದ್ದರು. ಇವರಿಗೆಲ್ಲ ರಾಜಣ್ಣ ಅಡಿಗೆ ಮಾಡುವವನಾಗಿದ್ದನು. ಬುಧವಾರ ಬೆಳಿಗ್ಗೆ ಭವನದ ಪಕ್ಕದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ತಯಾರಿಸಿದ ಇಡ್ಲಿ ಈ ಕಾರ್ಮಿಕರಿಗೆ ಬಂದಿತ್ತು. ಮದ್ಯಾಹ್ನದ ಹೊತ್ತಿಗೆ ರಾಜಣ್ಣ ಅಡಿಗೆ ಮಾಡಿದ್ದನು. ಈ ಅಡಿಗೆ ರಾತ್ರಿಯ ವೇಳೆ ಉಳಿದಿತ್ತು.ರಾತ್ರಿಗೆ ಅದನ್ನೇ ಊಟ ಮಾಡುವಂತೆ ಮಂಜಣ್ಣ ಮತ್ತು ಬೀರೇಶ್ ಗೆ ರಾಜಣ್ಣ ಹೇಳಿದ್ದಾನೆ. ಈ ವಿಚಾರಕ್ಕೆ ಬೀರೇಶ್ ಮತ್ತು ಮಂಜುನಾಥ್ ಸಿಟ್ಟಾಗಿ ಮಧ್ಯಾಹ್ನದ ಅಡಿಗೆ ನಾವ್ಯಾಕೆ ತಿನ್ನಬೇಕು ಎಂದು ಗಲಾಟೆ ಮಾಡಿ ಇಬ್ಬರು ಸೇರಿ ರಾಜಣ್ಣನಿಗೆ ಎಳೆದಾಡಿ ಹೊಡೆದಿದ್ದಾರೆ. ತನ್ನ ಮೇಲೆ ನಡೆದ ಹಲ್ಲೆಯಿಂದ ಕುಪಿತಗೊಂಡಿದ್ದ ರಾಜಣ್ಣ ಊಟ ಮಾಡಿ ಮಲಗಿದ್ದ ಬೀರೇಶ್ ಮತ್ತು ಮಂಜಣ್ಣನ ಮೇಲೆ ಪಿಕಾಸಿಯಿಂದ ದಾಳಿ ನಡೆಸಿದ್ದಾನೆ. ಭವನ ಕೆಳಗಡೆ ಮಲಗಿದ್ದ ಬೀರೇಶ್ ಗೆ ಮತ್ತು ಕಟ್ಟಡದ ಮೇಲ್ಟಾವಣಿ ಮೇಲೆ ಮಲಗಿದ್ದ ಮಂಜುನಾಥ್ ತಲೆಗೆ ಹೊಡೆದಿದ್ದಾನೆ. ಈ ಹಲ್ಲೆಯಿಂದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಈಗ ರಾಜಣ್ಣ ಪೊಲೀಸರ ಅತಿಥಿಯಾಗಿದ್ದು ಕ್ಷುಲ್ಲಕ ಕಾರಣಕ್ಕೆ ಎರಡು ಜೀವಗಳ ಬಲಿಯಾಗಿವೆ.
ಕೂಲಿ ಕಾರ್ಮಿಕರ ಮೇಲೆ ಇಡಲಿ ನಿಗಾ!
ತೀರ್ಥಹಳ್ಳಿಗೆ ರಾಜ್ಯ ಹಾಗೂ ಹೊರ ರಾಜ್ಯಗಳ ಅತೀ ಹೆಚ್ಚು ಕೂಲಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಇವರಿಂದ ತಾಲೂಕು ಸೇರಿ ಮಲೆನಾಡಲ್ಲಿ ಕೊಲೆ, ಗಲಾಟೆ, ಕಳ್ಳತನ ಹೆಚ್ಚು ವರದಿಯಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆ ಹೊರಗಿನಿಂದ ಬರುವವರ ಮೇಲೆ ಕಣ್ಣು ಇಡದಿದ್ದರೆ ಮತ್ತಷ್ಟು ಇಂತಹ ಘಟನೆಗಳು ನಡೆದರೂ ಅಚ್ಚರಿ ಇಲ್ಲ.