ಟಾಪ್ 3 ನ್ಯೂಸ್ ಮಲ್ನಾಡ್
ತೀರ್ಥಹಳ್ಳಿ ಮೂಲದ ನಟೋರಿಯಸ್ ಮನೆಗಳ್ಳನ ಬಂಧನ
– ಬೆಂಜ್ ಕಾರು, ಪಿಸ್ತೂಲು ಸಹಿತ ಕೋಟ್ಯಾಂತರ ಮೌಲ್ಯದ ವಸ್ತು, ನಗದು ವಶಕ್ಕೆ ..!!
– ಮೂಡಿಗೆರೆ: ಚಾರ್ಮಾಡಿ ಘಾಟ್ ನಲ್ಲಿ ಬಂಡೆಗಲ್ಲಿಗೆ ಡಿಕ್ಕಿ ಹೊಡೆದ ಕಾರು
– ಚಿರತೆ ಉಗುರು ಮತ್ತು ಹಲ್ಲುಗಳ ಅಕ್ರಮ ಸಾಗಣೆ
– ತರೀಕೆರೆ: ಜಲಪಾತದಲ್ಲಿ ಈಜಲು ಹೋಗಿ ಪ್ರವಾಸಿಗ ನೀರುಪಾಲು !
NAMMUR EXPRESS NEWS
ಮಲೆನಾಡಿನ ಕುಖ್ಯಾತ ಕಳ್ಳರಿಬ್ಬರನ್ನು ಬೆಂಗಳೂರು ಪೋಲಿಸರು ಬಂಧಿಸಿ ಬೆಂಜ್ ,ಸ್ಕೋಡಾ ಕಾರು ಸಮೇತ ಕೋಟ್ಯಾಂತರ ರೂ ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಮನೆಯ ಹಿಂಭಾಗದಲ್ಲಿ ಮುಚ್ಚ್ಚಿಟ್ಟಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ತೀರ್ಥಹಳ್ಳಿ ಮೂಲದ ಆರೋಪಿ ಹಾಗೂ ಚಿಕ್ಕಮಗಳೂರಿನ ಆರೋಪಿಯೊಬ್ಬನನ್ನು ಬಂಧಿಸಿ ಐಶರಾಮಿ ಕಾರುಗಳು ಹಾಗೂ 3 ಕೋಟಿ 60 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಿಕೊಂಡಿದ್ದಾರೆ.
ತೀರ್ಥಹಳ್ಳಿ ಮೂಲದ ಹಮ್ಜಾ ಅಲಿಯಾಸ್ ಅಮೀರ್(39) ಚಿಕ್ಕಮಗಳೂರಿನ ಕಡೂರು ಸಾಧಿಕ್ (40) ಬಂಧಿತರು. ಆರೋಪಿಗಳು ನಕಲಿ ಪಾಸ್ಪೋರ್ಟ್ ಬಳಸಿ ಬಹ್ರೇನ್ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಮಾಹಿತಿ ಅರಿತ ಮಾಗಡಿ ಪೊಲೀಸರು ಮುಂಬೈ ಏರ್ಪೋರ್ಟ್ ಬಳಿ ನಟೋರಿಯಸ್ ಕಳ್ಳರನ್ನು ಬಂಧಿಸಿದ್ದಾರೆ. ನಾಲ್ವರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಹಿಡಿಯಲಾಗಿದೆ. ಸದ್ಯ ಮಾಗಡಿ ಪೊಲೀಸರ ಕಾರ್ಯಾಚರಣೆಗೆ ಮುಂಬೈ ಪೊಲೀಸರು ಶಾಕ್ ಆಗಿದ್ದಾರೆ.
– 3 ಕೋಟಿ 60 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ
ಬಂಧಿತರಿಬ್ಬರು ಸುಮಾರು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಕಲಿ ಪಾಸ್ಪೋರ್ಟ್ ಬಳಸಿ ಏರ್ಪೋರ್ಟ್ ಪೊಲೀಸರನ್ನೇ ಯಾಮಾರಿಸಿದ್ದರು. ಇಬ್ಬರು ಆರೋಪಿಗಳ ಬಳಿ 1 ಗನ್ ಹಾಗೂ 5 ಜೀವಂತ ಗುಂಡು, 3 ಕೋಟಿ 60 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 11,49,000 ನಗದು ಜಪ್ತಿ ಮಾಡಲಾಗಿದೆ. ಮಾಗಡಿ ಪಟ್ಟಣದ ದೇವಸ್ಥಾನವೊಂದರಲ್ಲಿ ಕಳ್ಳತನ ನಡೆದಿತ್ತು. ದೇವಸ್ಥಾನದಲ್ಲಿದ್ದ 5 ಕೆಜಿ ಬಂಗಾರ ದೋಚಿಕೊಂಡು ಪರಾರಿಯಾಗಿದ್ದರು. ಬ್ಯಾಡಗಿ ಶಾಸಕರ ನಿವಾಸದಲ್ಲೂ ಬಂಧಿತ ಆರೋಪಿಗಳು ಕನ್ನ ಹಾಕಿದ್ದರು.
ಆರೋಪಿಗಳ ಸೆರೆಗೆ ಎಸ್ಪಿ ಕಾರ್ತಿಕ್ ರೆಡ್ಡಿ 4 ತಂಡಗಳನ್ನು ರಚಿಸಿದ್ದರು. ಜಿಲ್ಲೆಯ ಮಾಗಡಿ ಠಾಣೆಯ ಇನ್ಸ್ಪೆಕ್ಟರ್ ಜಿ.ವೈ.ಗಿರಿರಾಜ್, ಕುಂಬಳಗೋಡು ಇನ್ಸ್ಪೆಕ್ಟರ್ ಮಂಜುನಾಥ್, ತಾವರಗೆರೆ ಪಿಐ ಮೋಹನ್, ಕುದೂರು ಠಾಣೆಯ ಇನ್ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಒಟ್ಟು 25 ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಕಳೆದ 1 ತಿಂಗಳಿಂದ ಇಬ್ಬರು ಕಳ್ಳರನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಬಿಎಂಡಬ್ಲ್ಯು, ಸ್ಕೋಡಾ, ಎಸ್ಯುವಿ ಕಾರು ಖರೀದಿಸಿದ್ದರು. ಕಾರುಗಳ ನಂಬರ್ ಪ್ಲೇಟ್ ಬದಲಾಯಿಸಿ ತಲೆಮರೆಸಿಕೊಂಡಿದ್ದರು. ಮುಂಬೈ, ಗೋವಾ, ರಾಜಸ್ಥಾನ, ಮಹಾರಾಷ್ಟ್ರ ಸೇರಿ ಅನೇಕ ಕಡೆ ಸುತ್ತಾಟ ನಡೆಸಿದ್ದರು. ಬಳಿಕ ಬಹ್ರೇನ್ ದೇಶಕ್ಕೆ ತೆರಳಲು ಮುಂದಾಗಿದ್ದಾರೆ.
ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ 20 ಸಾವಿರ ಬಹುಮಾನ ಘೋಷಣೆ, ಪೊಲೀಸರನ್ನು ಕಂಡು ಗನ್ ತೆಗೆಯಲು ಯತ್ನಿಸಿದ್ದ ವೇಳೆ ಇಬ್ಬರ ಬಂಧನ ಮಾಡಲಾಗಿದೆ. ಕಳ್ಳರ ಹಿಸ್ಟರಿ ನೋಡಿ ಮುಂಬೈ ಪೊಲೀಸರಿಂದ ಏರ್ಪೋರ್ಟ್ನಲ್ಲಿ ತಪಾಸಣೆ ಮಾಡಲಾಗಿದ್ದು, ಈ ಹಿಂದೆ ಹಲವು ಬಾರಿ ಬೇರೆ ಬೇರೆ ದೇಶಗಳಿಗೆ ತೆರಳಿದ್ದು ಗೊತ್ತಾಗಿದೆ. ಸದ್ಯ ಕಳ್ಳರನ್ನು ಸೆರೆಹಿಡಿದ ಪೊಲೀಸರಿಗೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ 20 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ಸನ್ಮಾನ ಮಾಡುವಂತೆ ಎಸ್ಪಿಯಿಂದ ಪತ್ರ ಬರೆಯಲಾಗಿದೆ.
– ಮೂಡಿಗೆರೆ: ಚಾರ್ಮಾಡಿ ಘಾಟ್ ನಲ್ಲಿ ಬಂಡೆಗಲ್ಲಿಗೆ ಡಿಕ್ಕಿ ಹೊಡೆದ ಕಾರು.
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬಂಡೆಕಲ್ಲಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಮೂವರು ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಕಾರು ಉಜಿರೆಯಿಂದ ಮೂಡಿಗೆರೆ ಮಾರ್ಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟಿಯ ರಸ್ತೆ ಬದಿಯ ಬಂಡೆಕಲ್ಲಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಕಾರಿನಲ್ಲಿ ಎಡಬದಿಯಲ್ಲಿ ಕುಳಿತ್ತಿದ್ದ ಮಹಿಳೆಗೆ ತಲೆ ಭಾಗಕ್ಕೆ ಗಂಭೀರ ಏಟಾಗಿದ್ದು ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರಿನಲ್ಲಿದ್ದ ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
– ಸಾಗರ: ಚಿರತೆ ಉಗುರು ಮತ್ತು ಹಲ್ಲುಗಳ ಅಕ್ರಮ ಸಾಗಣೆ
ಸಾಗರ : ಕಾನೂನು ಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳ ಸಾಗಾಟದಲ್ಲಿ ತೊಡಗಿದ ಆರೋಪಿಯನ್ನು ಮಾಲು ಸಮೇತ ದಾಸಕೊಪ್ಪ ಸರ್ಕಲ್ ಪೆಟ್ರೋಲ್ ಬಂಕ್ ಹತ್ತಿರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಶಿಕಾರಿಪುರ ತಾಲೂಕಿನ ಹಾರೊಗೊಪ್ಪ ಗ್ರಾಮದ ಲೋಕೇಶ್ ಬಿನ್ ಭಾಗ್ಯಣ್ಣ ಬಂಧಿತ ಆರೋಪಿ. ಈತನಿಂದ 16 ಚಿರತೆ ಉಗುರು ಮತ್ತು 3 ಹಲ್ಲುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ಇನ್ಸ್ಪೆಕ್ಟರ್ ವಿನಾಯಕ ಕೆ ಮತ್ತು ಸಿಬ್ಬಂದಿಗಳಾದ ಗಣೇಶ್, ವಿಶ್ವನಾಥ ಆಂಜನೇಯ ಮತ್ತು ದಿನೇಶ, ಪ್ರಮೋದಕುಮಾರಿ ರವರು ಎಸ್ ಎಸ್ ಕಾಶಿ ಎಸ್ಪಿ ಸಿಐಡಿ ಅರಣ್ಯ ಘಟಕ ಮಡಿಕೇರಿ ಇವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
– ತರೀಕೆರೆ: ಜಲಪಾತದಲ್ಲಿ ಈಜಲು ಹೋಗಿ ಪ್ರವಾಸಿಗ ನೀರುಪಾಲು !
ತರೀಕೆರೆ : ಸ್ನೇಹಿತರ ಜೊತೆ ಹೆಬ್ಬೆ ಜಲಪಾತಕ್ಕೆ ಬಂದಿದ್ದ ಪ್ರವಾಸಿಗನೋರ್ವ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತದಲ್ಲಿ ಸಂಭವಿಸಿದೆ. ಛತ್ತಿಸಘಡದ ಮೂಲದ ಪ್ರವಾಸಿಗ ಅಮೀತ್ ಕುಮಾರ್ (30) ಮೃತ ದುರ್ದೈವಿ. ಈತ ಮೂಲತಃ ಛತ್ತಿಸ್ ಘಡದವನಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅದರಂತೆ ಸ್ನೇಹಿತರ ಜತೆ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತಕ್ಕೆ ತೆರಳಿದ ವೇಳೆ ಈಜಲು ಹೋಗಿ ನೀರುಪಾಲಾಗಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.